ವೀಕ್ಷಕರೆ, ನಾವು ಈವತ್ತು 2021ರ ಜುಲೈ
ತಿಂಗಳ ದ್ವಾದಶ ರಾಶಿಗಳವರ ರಾಶಿ ಭವಿಷ್ಯವನ್ನು ಸಂಕ್ಷಿಪ್ತವಾಗಿ ನೋಡೋಣ.
ಮೊದಲಿಗೆ ಧಾರ್ಮಿಕ ಪಂಚಾಂಗವನ್ನು ಸಂಕ್ಷಿಪ್ತವಾಗಿ ನೋಡೋಣ. ಈ ವರ್ಷ ಪ್ಲವ ನಾಮ ಸಂವತ್ಸರ.
ಜುಲೈ 16ರ ವರೆಗೆ ಉತ್ತರಾಯಣ. ಜುಲೈ 16ಕ್ಕೆ ದಕ್ಷಿಣಾಯನ ಪುಣ್ಯಕಾಲ ಆರಂಭ. ಜುಲೈ 16, ಆಷಾಢ ಮಾಸದ ಶುಕ್ಲಪಕ್ಷ, ಶುಕ್ರವಾರ, ಸಪ್ತಮಿಯಂದು ಮಧ್ಯಾಹ್ನ 4.13ರಿಂದ ದಕ್ಷಿಣಾಯನ ಪುಣ್ಯಕಾಲ ಆರಂಭ.
ಇನ್ನು, ತಿಂಗಳ ಪೂರ್ತಿ ಗ್ರೀಷ್ಮ ಋತು ಇರುತ್ತೆ. ಜುಲೈ 10ರ ವರೆಗೆ ಜೇಷ್ಠ ಮಾಸ. ಜುಲೈ
11ರಿಂದ ಆಷಾಢ ಮಾಸ ಆರಂಭ. ಜುಲೈ 25ರಿಂದ ಆಷಾಢ ಮಾಸದ ಕೃಷ್ಣಪಕ್ಷ ಆರಂಭ.
ಇನ್ನು, ಸೌರಮಾನ ತಿಂಗಳ ಪ್ರಕಾರ, ಜುಲೈ 16ರ ವರೆಗೆ ಮಿಥುನ ಮಾಸ. ಜುಲೈ
17ರಿಂದ ಕರ್ಕಾಟಕ ಮಾಸ ಆರಂಭ. ಇನ್ನು,
ಈ ತಿಂಗಳಲ್ಲಿನ ಹಬ್ಬಗಳ ಬಗ್ಗೆ ನೋಡೋದಾದ್ರೆ, ಜುಲೈ 10ರಂದು ಮಣ್ಣಿತ್ತಿನ ಅಮಾವಾಸ್ಯೆ. ಜುಲೈ 20 ಕ್ಕೆ ಪ್ರಥಮ ಏಕಾದಶಿ. ಜುಲೈ 24, ಶನಿವಾರದಂದು ಗುರುಪೂರ್ಣಿಮಾ. ಜುಲೈ 27, ಮಂಗಳವಾರ, ಸಂಕಷ್ಟಹರ ಚತುರ್ಥಿ. ಅಂದರೆ, ಅಂಗಾರಕ ಸಂಕಷ್ಟಿ.
ಇನ್ನು ಗ್ರಹಗಳ ಚಲನೆಯನ್ನು ನೋಡೋದಾದ್ರೆ, ಗುರು, ಕುಂಭ ರಾಶಿಯಲ್ಲಿ ಹಾಗೂ ಶನಿ ಮಕರ ರಾಶಿಯಲ್ಲಿ ವಿರಾಜಮಾನರಾಗಿದ್ದಾರೆ. ಎರಡೂ ಗ್ರಹಗಳು ತಮ್ಮ ತಮ್ಮ ರಾಶಿಯಲ್ಲಿ ವಕ್ರಗತಿಯ ಚಲನೆ, ಅಂದರೆ ಹಿಮ್ಮುಖವಾದ ಚಲನೆಯಲ್ಲಿರುತ್ತಾರೆ. ಈ ಪೈಕಿ ಶನಿಗೆ, ಮಕರ ರಾಶಿ ಆತನ ಆಧಿಪತ್ಯದ ರಾಶಿ. ಇನ್ನು, ಮೇಷ, ಮಿಥುನ, ತುಲಾ, ಸಿಂಹ ಹಾಗೂ ಮಕರ ರಾಶಿಗಳು ಗುರುಬಲದ ಕೃಪೆಯನ್ನು ಪಡೆದಿವೆ.
ಜುಲೈ 20ರಂದು ಕುಜ, ಕರ್ಕಾಟಕ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಜುಲೈ 7ರಂದು ಮಿಥುನದಲ್ಲಿ ಬುಧನ ಋಜು ಗತಿಯ ಚಲನ ಆರಂಭ ಆಗಲಿದೆ. ಜುಲೈ 25ಕ್ಕೆ ಬುಧ, ಮಿಥುನದಿಂದ ಕರ್ಕಾಟಕ ರಾಶಿಗೆ ಪ್ರವೇಶ ಮಾಡುತ್ತಾನೆ. ಜುಲೈ 17ರಂದು ಶುಕ್ರ ಕರ್ಕಾಟಕದಿಂದ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಜುಲೈ 16ರಂದು ಸರಿ ಸುಮಾರು ಮಧ್ಯಾಹ್ನ 4.13ಕ್ಕೆ ರವಿ, ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಪ್ರವೇಶ ಮಾಡುತ್ತಾನೆ. ಅಂದರೆ, ಈ ದಿನ ಕರ್ಕಾಟಕ ಸಂಕ್ರಾಂತಿ. ಸೂರ್ಯನ ಈ ಚಲನೆ ಮೇಷ, ವೃಷಭ, ಕನ್ಯಾ ಮತ್ತು ಧನು ರಾಶಿಗಳಿಗೆ ಹೆಚ್ಚಿನ ಶುಭವನ್ನು ತರಲಿದೆ.
ಛಾಯಾ ಗ್ರಹರಾದ ರಾಹು, ವೃಷಭದಲ್ಲಿ ಹಾಗೂ ಕೇತು, ವೃಶಿಕದಲ್ಲಿ ಇರುತ್ತಾರೆ. ಎರಡೂ ಗ್ರಹಗಳಿಗೆ ಆಯಾ ರಾಶಿಗಳು ಉಚ್ಛ ಸ್ಥಾನಗಳು.
ಮೇಷ ರಾಶಿ :
ಏಕಾದಶ ಸ್ಥಾನದಲ್ಲಿರುವ ಗುರುವಿನಿಂದಾಗಿ ನಿಮಗೆ ಶುಭವಿದೆ. ಸ್ಥಾನಲಾಭ, ಉದ್ಯೋಗದಲ್ಲಿ ಭಡ್ತಿಯ ಯೋಗವಿದೆ. ಹೊಸ ವ್ಯವಹಾರ, ಗೃಹ ನಿರ್ಮಾಣಕ್ಕೆ ಸಕಾಲ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ಉತ್ತಮ ಫಲ ಸಿಗಲಿದೆ. ಆದರೆ, ಕುಜ, ಅಷ್ಟಮದ ಕೇತು, ಮಕರದಲ್ಲಿ ವಕ್ರಗತಿಯ ಚಲನೆಯಲ್ಲಿರುವ ಶನಿಯಿಂದಾಗಿ ಹಣಕಾಸಿನ ತೊಂದರೆ ಎದುರಾಗಬಹುದು. ಅನಾರೋಗ್ಯ ಕಾಡಬಹುದು. ಅದರಲ್ಲೂ ಇಂದಿನ ಕೊರೊನಾ ಕಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಅಗತ್ಯ. ಕುಲದೇವತೆಯ ಆರಾಧನೆ, ಸೋಮವಾರ ಶಿವನ ಆರಾಧನೆ ಮಾಡುವುದರಿಂದ ನಿಮಗೆ ಒಳಿತಾಗಲಿದೆ.
ವೃಷಭ :
ಕುಜ ಮತ್ತು ಶುಕ್ರ, ಈ ಎರಡೂ ಗ್ರಹಗಳು ನಿಮಗೆ ಶುಭಕಾರಕರೆ. ಹಾಗಾಗಿ, ಭೂ ವ್ಯವಹಾರ, ವಾಹನ ಖರೀದಿ ವ್ಯವಹಾರಗಳಲ್ಲಿ ನಿಮಗೆ ಶುಭ ಫಲ ಸಿಗಲಿದೆ. ಆದರೆ, ನಿಮಗೆ ಗುರುಬಲ ಕಡಿಮೆ. ಜೊತೆಗೆ, ನವಮ ಭಾವದ ಶನಿ, ಜನ್ಮ ಭಾವದ ರಾಹು, ಸಪ್ತಮ ಭಾವದ ಕೇತುಗಳು ನಿಮ್ಮ ರಾಶಿಗೆ ಪ್ರತಿಕೂಲರಾಗಿದ್ದು ತಿಂಗಳು ಪೂರ್ತಿ ಹಣಕಾಸಿನ ತೊಂದರೆ ಕಾಣಿಸಿಕೊಳ್ಳಲಿದೆ. ಮನೆಯಲ್ಲಿನ ಅಹಿತಕರ ವಾತಾವರಣದಿಂದಾಗಿ ಮನ:ಶಾಂತಿ ಇರದು. ಕೆಲಸ-ಕಾರ್ಯಗಳಲ್ಲಿ ಅಡಚಣೆ, ಅನಾರೋಗ್ಯ ಎದುರಾಗುವ ಸಾಧ್ಯತೆ ಇದೆ. ಸ್ವಲ್ಪ ಎಚ್ಚರಿಕೆಯಿಂದ ಇರಿ. ದುರ್ಗಾಪೂಜೆ, ಜನ್ಮದಿನದಂದು ಶಿವನಿಗೆ ರುದ್ರಾಭಿಷೇಕ, ಸತ್ಯನಾರಾಯಣ ಪೂಜೆ ಮಾಡುವುದರಿಂದ ಒಳಿತಾಗಲಿದೆ.
ಮಿಥುನ :
ಗುರು, ಭಾಗ್ಯದಲ್ಲಿದ್ದು ನಿಮಗೆ ಗುರುಬಲವಿದೆ. ಜೊತೆಗೆ ಶುಕ್ರ, ನಿಮ್ಮ ರಾಶಿಯಿಂದ 6ನೇ ಮನೆಯಲ್ಲಿರುವ ಕೇತು ನಿಮಗೆ ಅನುಕೂಲಕರನಾಗಿದ್ದಾರೆ. ಹೀಗಾಗಿ, ಉದ್ಯೋಗದಲ್ಲಿ, ಸಮಾಜದಲ್ಲಿ ಉತ್ತಮ ಸ್ಥಾನ-ಮಾನ ಪ್ರಾಪ್ತವಾಗಲಿದೆ. ವಿದ್ಯಾರ್ಥಿಗಳಿಗೆ ಉನ್ನತ ಉದ್ಯೋಗದಲ್ಲಿ ಪ್ರಗತಿ ಕಾಣಲಿದೆ. ಮನೆ, ನಿವೇಶನ ಕೊಳ್ಳಲು ಇದು ಸಕಾಲ. ಆದರೆ, ಕುಜ, ಅಷ್ಟಮದ ಶನಿ, ದ್ವಾದಶದ ರಾಹು ನಿಮಗೆ ಪ್ರತಿಕೂಲರಾಗಿದ್ದಾರೆ. ಹೀಗಾಗಿ, ಧನಹಾನಿ, ವ್ಯರ್ಥ ಅಲೆದಾಟ, ಉದ್ಯೋಗ, ವ್ಯವಹಾರಗಳಲ್ಲಿ, ಕುಟುಂಬದಲ್ಲಿ, ಮಾನಸಿಕವಾಗಿ ಕಿರಿ, ಕಿರಿ ಉಂಟಾಗಲಿದೆ. ಆರೋಗ್ಯದ ಬಗ್ಗೆ ಎಚ್ಚರದಿಂದ ಇರಿ. ಶನಿದೋಷ ನಿವಾರಣೆಗೆ ಹನುಮಾನ್ ಚಾಲೀಸಾ ಪಠಣ ಮಾಡುವುದು ಒಳ್ಳೆಯದು. ಸಾಧ್ಯವಾದರೆ ಶನಿಶಾಂತಿ ಮಾಡಿಸಿ. ನಿಮ್ಮ ಕುಲದೇವತೆಯ ಆರಾಧನೆ ಮಾಡಿ.
ಕರ್ಕಾಟಕ : ಕುಜ, ಅಷ್ಟಮದ ಗುರು, ಸಪ್ತಮದ ಶನಿ, ಪಂಚಮದ ಕೇತು, ನಿಮಗೆ ಅಷ್ಟೊಂದು ಅನುಕೂಲಕರನಲ್ಲ. ಕುಟುಂಬದಲ್ಲಿ ಕಲಹ, ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ವಾಹನ ಚಾಲನೆ ವೇಳೆ ಹುಷಾರಾಗಿ ಇರಿ. ಆದರೆ, ಸುಖ, ವಿಲಾಸಿ ಬದುಕಿಗೆ ಕಾರಣನಾದ ಶುಕ್ರ, ಲಾಭ ಭಾವದ ರಾಹು ನಿಮಗೆ ಒಳಿತನ್ನೇ ಮಾಡುತ್ತಾರೆ. ಧೈರ್ಯವಾಗಿರಿ. ಸಾಧ್ಯವಾದರೆ, ಸಂಕಟ ನಿವಾರಣೆಗೆ ದುರ್ಗಾಪೂಜೆ, ಸಪ್ತಶತಿ ಪಾರಾಯಣ, ನವಗ್ರಹಶಾಂತಿ ಮಾಡಿಸುವುದು ಒಳಿತು. ಹನುಮಾನ್ ಚಾಲೀಸಾ ಪಠಣ ಮಾಡಿ.
ಸಿಂಹ :
ಸಪ್ತಮ ಸ್ಥಾನದಲ್ಲಿರುವ ಗುರು ನಿಮಗೆ ಒಳಿತನ್ನ ಉಂಟು ಮಾಡುತ್ತಾನೆ. ನಿಮ್ಮ ಜನ್ಮ ರಾಶಿಯಿಂದ 6ನೇ ಮನೆಯಲ್ಲಿರುವ ಶನಿ ಕೂಡ ನಿಮಗೆ ಅನುಕೂಲಕರನಾಗಿದ್ದಾನೆ. ಹೀಗಾಗಿ ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಸಂತಾನಾಪೇಕ್ಷಿಗಳಿಗೆ ಸಂತಾನ ಪ್ರಾಪ್ತಿ ಕೂಡಿ ಬರಲಿದೆ. ಉದ್ಯೋಗ, ವ್ಯವಹಾರಗಳಲ್ಲಿ ಜಯ ಪ್ರಾಪ್ತಿ. ಹಣಕಾಸು ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಕಂಡು ಬರಲಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕನಸು ನನಸಾಗಲಿದೆ. ಆದರೆ, ದಶಮದ ರಾಹು ಹಾಗೂ ಚತುರ್ಥದ ಕೇತು ನಿಮಗೆ ಮಾನಸಿಕ ಕಿರಿಕಿರಿ ಉಂಟು ಮಾಡಲಿದ್ದಾರೆ. ಸಂಕಟ ನಿವಾರಣೆಗೆ ಸುಬ್ರಮಣ್ಯನ, ದೇವಿಯ ಆರಾಧನೆ ಮಾಡಿ.
ಕನ್ಯಾ :
ನಿಮ್ಮ ಜನ್ಮ ರಾಶಿಯಿಂದ 6ನೇ ಮನೆಯಲ್ಲಿ ಸಂಚರಿಸುವ ಗುರು, ಪಂಚಮ ಶನಿ ನಿಮಗೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ವಾಸಸ್ಥಳದ ಬದಲಾವಣೆ, ಉದ್ಯೋಗದ ಸ್ಥಳ ದಲ್ಲಿ ಕಿರಿಕಿರಿ, ಧನಹಾನಿಯ ಸಾಧ್ಯತೆ ಇದೆ. ಅನಾರೋಗ್ಯ ಕಾಡೀತು ಎಚ್ಚರ. ಇನ್ನು ತೃತೀಯ ಮನೆಯಲ್ಲಿರುವ ಕೇತು, ಏಕಾದಶ ಭಾವದ ಕುಜ, ಶುಕ್ರ ನಿಮಗೆ ಒಳ್ಳೆಯದನ್ನು ಮಾಡಲಿದ್ದಾರೆ. ಭೂವ್ಯವಹಾರಗಳಲ್ಲಿ ಒಳಿತಾಗಲಿದೆ. ಗಣಪತಿ, ಸುಬ್ರಮಣ್ಯನ ಆರಾಧನೆಯಿಂದ ನಿಮ್ಮ ಸಂಕಟ ನಿವಾರಣೆ ಆಗಲಿದೆ. ಶನಿಪೀಡೆ ನಿವಾರಣೆಗೆ ಹನುಮಾನ್ ಚಾಲೀಸಾ ಪಠಣ ಒಳಿತು.
ತುಲಾ :
ಪಂಚಮಾಧಿಪತಿ ಗುರು ನಿಮಗೆ ಒಳಿತನ್ನು ಮಾಡಲಿದ್ದಾನೆ. ಉತ್ತಮ ಸ್ಥಾನಮಾನ ಲಭ್ಯತೆಯ ಅವಕಾಶ ಇದೆ. ಮಂಗಳ ಕಾರ್ಯಗಳು ನಡೆಯಲಿವೆ. ಆದರೆ, ಶನಿ, ಕುಜ ಪ್ರತಿಕೂಲರಾಗಿದ್ದು, ಹಣಕಾಸಿನ ತೊಂದರೆ, ಅನಾವಶ್ಯಕ ಖರ್ಚು ಕಾಣಿಸಲಿದೆ. ಕೌಟುಂಬಿಕ ಕಲಹ ಎದುರಾಗಬಹುದು. ಜುಲೈ 16ರಂದು ಕರ್ಕಾಟಕ ರಾಶಿಗೆ ರವಿಯ ಪ್ರವೇಶ ಆಗಲಿದ್ದು, ನಿಮಗೆ ಒಳಿತಾಗಲಿದೆ. ಸಂಕಟ ನಿವಾರಣೆಗೆ ಜನ್ಮದಿನದಂದು ಶಿವನಿಗೆ ರುದ್ರಾಭಿಷೇಕ ಮಾಡಿಸಿ. ವೆಂಕಟೇಶ್ವರನ ಆರಾಧನೆ ಮಾಡಿ.
ವೃಶ್ಚಿಕ:
ನಿಮಗೆ ಶನಿ ದೇವನ ಕೃಪೆ ಇದ್ದು ಸಾಮಾಜಿಕ ಗೌರವ, ಘನತೆ ಪ್ರಾಪ್ತಿಯಾಗಲಿದೆ. ಪಿತ್ರಾರ್ಜಿತವಾದ ಭೂಮಿಯ ಲಾಭವಿದೆ. ಆದರೆ, ನಿಮಗೆ ಗುರುಬಲ ಇಲ್ಲ. ಜೊತೆಗೆ, ಕುಜ, ಸಪ್ತಮದ ರಾಹು, ಜನ್ಮ ಸ್ಥಾನದಲ್ಲಿರುವ ಕೇತು ಕೂಡ ಪ್ರತಿಕೂಲರಾಗಿದ್ದಾರೆ. ಹೀಗಾಗಿ, ಈ ತಿಂಗಳಲ್ಲಿ ಹೊಸ ಕೆಲಸಗಳಿಗೆ ಕೈಹಾಕುವುದು ಅಷ್ಟೊಂದು ಒಳ್ಳೆಯದಲ್ಲ. ಅನಾರೋಗ್ಯ ಕಾಡಬಹುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿಕ್ಕಿಲ್ಲ. ಹಣಕಾಸಿನ ತೊಂದರೆ ಕಾಣಿಸಬಹುದು. ಸಂಕಟ ನಿವಾರಣೆಗೆ ಮೃತ್ಯುಂಜಯನ ಆರಾಧನೆ ಮಾಡಿ.
ಧನು : ನಿಮಗೆ ಈ ತಿಂಗಳು ಗುರುಬಲ ಇಲ್ಲ. ಹೀಗಾಗಿ, ಕೆಲಸ, ಕಾರ್ಯಗಳಲ್ಲಿ ವಿಘ್ನ ಎದುರಾಗಬಹುದು. ನಿಮ್ಮ ರಾಶಿಗೆ ಸಾಡೆಸಾತ್ ಶನಿ ಕೊನೆಘಟ್ಟದಲ್ಲಿ ಇದ್ದಾನೆ. ಕುಜ, ವ್ಯಯಭಾವದ ಕೇತು ಕೂಡ ಪ್ರತಿಕೂಲರಾಗಿದ್ದಾರೆ. ಹೀಗಾಗಿ, ಹಣಕಾಸಿನ ತೊಂದರೆ, ಅವಮಾನ, ಕುಟುಂಬದಲ್ಲಿ ಕಲಹ, ಅನಾರೋಗ್ಯದ ತೊಂದರೆ ಎದುರಾದೀತು. ವಾಹನ ಚಾಲನೆ ವೇಳೆ ಹುಷಾರಾಗಿರಿ. ಸಂಕಟ ನಿವಾರಣೆಗೆ ಮೃತ್ಯುಂಜಯನ ಆರಾಧನೆ ಮಾಡಿ. ಅನುಕೂಲವಿದ್ದರೆ ಅಶ್ವತ್ಥ ಪ್ರದಕ್ಷಿಣೆ ಮಾಡಿ. ಶನಿವಾರದ ದಿನ ಶನಿ ಶನಿ ದೇವನಿಗೆ ಎಳ್ಳೆಣ್ಣೆ ದೀಪ ಹಚ್ಚಿ.
ಮಕರ :
ಧನಭಾವದ ಗುರುವಿನಿಂದಾಗಿ ನಿಮಗೆ ಗುರುಬಲ ದೊರೆಯಲಿದೆ. ಲಾಭ ಭಾವದ ಕೇತು ಕೂಡ ನಿಮಗೆ ಒಳಿತನ್ನೇ ಉಂಟು ಮಾಡಲಿದ್ದಾನೆ. ಹೀಗಾಗಿ, ಕೌಟುಂಬಿಕ ಅಭಿವೃದ್ಧಿ ಸಾಧ್ಯ. ಮನೆಯಲ್ಲಿ ಶುಭಕಾರ್ಯಗಳು ಜರುಗಲಿವೆ. ಇನ್ನು, ಸಾಡೇಸಾತ್ ಶನಿ ನಿಮ್ಮ ಜನ್ಮರಾಶಿಯಲ್ಲಿಯೇ ಇದ್ದಾನೆ. ಹೀಗಾಗಿ, ಸ್ಥಾನಚ್ಯುತಿ, ಹಣಕಾಸಿನ ಅಡಚಣೆ ಕಾಡಲಿದೆ. ಕುಜ, 5ನೇ ಮನೆಯಲ್ಲಿನ ರಾಹು ಕೂಡ ನಿಮಗೆ ಪ್ರತಿಕೂಲರಾಗಿದ್ದಾರೆ. ಕಳ್ಳರ ಭಯ, ಮಾನಸಿಕ ಕಿರಿ, ಕಿರಿ ಹೆಚ್ಚಲಿದೆ. ನಿಮ್ಮಲ್ಲಿ ಕೋಪದ ಪ್ರವೃತ್ತಿ ಹೆಚ್ಚಬಹುದು. ಸಂಕಟ ನಿವಾರಣೆಗೆ ನವಗ್ರಹ ಶಾಂತಿ, ಶನಿಶಾಂತಿ ಮಾಡಿಸಿ.
ಕುಂಭ :
ಗುರು ನಿಮ್ಮ ಜನ್ಮರಾಶಿಯಲ್ಲಿಯೇ ಇದ್ದಾನೆ. ನಿಮಗೆ ಗುರುಬಲವಿಲ್ಲ. ವ್ಯಯ ಭಾವದಲ್ಲಿ ಶನಿ ಇದ್ದಾನೆ. ಸಾಡೆಸಾತ್ ಶನಿಕಾಟ ಆರಂಭವಾಗಿದೆ. ಚತುರ್ಥದ ರಾಹು, ದಶಮದ ಕೇತು ನಿಮಗೆ ಪ್ರತಿಕೂಲರಾಗಿದ್ದಾರೆ. ಹೀಗಾಗಿ, ಹಣಕಾಸಿನ ತೊಂದರೆ ಉಂಟಾಗಲಿದೆ. ನಿಮ್ಮ ಹಾಗೂ ನಿಮ್ಮ ಕುಟುಂಬ ಸದಸ್ಯರ ಆರೋಗದಲ್ಲಿ ಏರು ಪೇರು ಕಂಡು ಬರಬಹುದು. ಹಿರಿಯ ಅಧಿಕಾರಿಗಳಿಂದ ಮಾನಸಿಕವಾಗಿ ಕಿರಿ ಕಿರಿ ಅನುಭವಿಸ ಬೇಕಾಗಬಹುದು. ಆದರೆ, ಕುಜ, ನಿಮಗೆ ಅನುಕೂಲಕರನಾಗಿದ್ದು, ಪರಿಶ್ರಮದಿಂದ ಹಿಡಿದ ಕೆಲಸಗಳಲ್ಲಿ ಜಯ ಸಾಧಿಸುವಿರಿ. ಸಂಕಟ ಪರಿಹಾರಕ್ಕೆ ಮೃತ್ಯುಂಜಯನ ಆರಾಧನೆ ಮಾಡಿರಿ.
ಮೀನ ರಾಶಿ :
ನಿಮಗೆ ಗುರುಬಲ ಇಲ್ಲ. ಆದರೆ, 11ನೇ ಮನೆಯಲ್ಲಿರುವ ಶನಿ ಶುಭ ಫಲವನ್ನೇ ನೀಡುತ್ತಾನೆ. ಕುಜ, ತೃತೀಯ ಭಾವದ ರಾಹು ನಿಮಗೆ ಒಳಿತನ್ನೇ ಮಾಡಲಿದ್ದಾರೆ.
ಉದ್ಯೋಗದಲ್ಲಿ, ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವಿರಿ. ನಿಮ್ಮ ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ಸಾಮಾಜಿಕವಾಗಿ ಗೌರವ ಪ್ರಾಪ್ತಿಯಾಗಲಿದೆ. ವಿಷ್ಣು ಸಹಸ್ರನಾಮ ಪಠಣದಿಂದ ಮತ್ತಷ್ಟು ಶುಭ ಫಲಗಳನ್ನು ಪಡೆಯುವಿರಿ.