ಹುಣ್ಣಿಮೆಗೊಮ್ಮೆ ಲಕ್ಷ, ಲಕ್ಷ ಭಕ್ತರು, ವಾರಕ್ಕೊಮ್ಮೆ 50-60 ಸಾವಿರ ಭಕ್ತರು, ಜಾತ್ರೆಯಲ್ಲಿ ಐದಾರು ಲಕ್ಷ ಭಕ್ತರು ಸೇರುವ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಸ್ಥಾನ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ. ಬರುವ ಲಕ್ಷ, ಲಕ್ಷ ಭಕ್ತರಿಗೆ ಇಲ್ಲಿ ಶೌಚಕ್ಕೆ ಬಯಲೇ ಗತಿ! ಇನ್ನು ಸ್ನಾನಕ್ಕೆ ಗಲೀಜು ನೀರು.
ಲಕ್ಷಾಂತರ ಭಕ್ತರಿಗೆ ದೇವಸ್ಥಾನದ ವ್ಯಾಪ್ತಿಯಲ್ಲಿ ಇರುವುದೇ 60 ಶೌಚಾಲಯಗಳು. ಅವು ಕೆಲವರಿಗಷ್ಟೇ ಸಾಕು. ಲಕ್ಷ, ಲಕ್ಷ ಭಕ್ತರಿಗೆ ಸಾಲುವುದಿಲ್ಲ. ಹೀಗಾಗಿ ಭಕ್ತರು ಬಯಲಲ್ಲೇ ಶೌಚ ಮಾಡುವುದು ಅನಿವಾರ್ಯ. ಲಕ್ಷೋಪಲಕ್ಷ ಮಹಿಳೆಯರು ಆಗಮಿಸುತ್ತಾರೆ. ಅದರಲ್ಲೂ ಬಂದ ಬಹುತೇಕ ಭಕ್ತರು ಎರಡು-ಮೂರು ದಿನಗಳ ಕಾಲ ತಂಗುತ್ತಾರೆ. ಅವರೆಲ್ಲರೂ ಬಹುತೇಕವಾಗಿ ಬಯಲಲ್ಲಿಯೇ ವಾಸಿಸುತ್ತಿದ್ದಾರೆ. ಶೆಡ್ ಇದ್ದರೂ, ಹತ್ತಾರು ಸಾವಿರ ಜನರಿಗೆ ಸಾಲುವುದಿಲ್ಲ. ಉಳಿದವರೆಲ್ಲರೂ ದೇವಸ್ಥಾನದ ಸುತ್ತಮುತ್ತ ವಾಸಿಸುತ್ತಿದ್ದಾರೆ. ಹೀಗೆ, ವಾಸಿಸುವ ಮಹಿಳೆಯರು ಬೆಳಗಿನ ಜಾವವೇ ಶೌಚಾಲಯಕ್ಕೆ ಹೋಗುತ್ತಾರೆ. ಹಾಗೊಂದು ವೇಳೆ ಬೆಳಗಾಯಿತು ಎಂದರೆ ಮತ್ತೆ ಕತ್ತಲಾಗುವವರೆಗೂ ಅವರು ಕಾಯಲೇಬೇಕಾದ ದು:ಸ್ಥಿತಿ ಇಲ್ಲಿದೆ.
ಇನ್ನು ದೇವಸ್ಥಾನದ ವ್ಯಾಪ್ತಿಯಲ್ಲಿ ಸುಮಾರು 30-40 ಸ್ನಾನಗೃಹಗಳು ಇವೆ. ಲಕ್ಷ, ಲಕ್ಷ ಭಕ್ತರಿಗೆ ಅವು ಸಾಲುವುದಿಲ್ಲ. ಹೀಗಾಗಿ, ಭಕ್ತರು ನದಿಯಲ್ಲಿ ಕೊಳಚೆ ನೀರಿನಲ್ಲಿಯೇ ಸ್ನಾನ ಮಾಡುತ್ತಾರೆ. ಇದರಿಂದ ರೋಗರುಜಿನಗಳು ಹರಡುತ್ತವೆ. ಆದರೂ, ಭಕ್ತರು ವಿಧಿಯಿಲ್ಲದೆ ಸ್ನಾನ ಮಾಡುವ ದೃಶ್ಯ ಮರುಕ ಹುಟ್ಟಿಸುತ್ತದೆ.
ನದಿ ನೀರು ಗಲೀಜು ಇರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ, ನದಿಯಲ್ಲಿ ಸ್ನಾನ ಮಾಡಬೇಡಿ, ಕೇವಲ ಸ್ನಾನಗೃಹದಲ್ಲಿ ಮಾತ್ರ ಸ್ನಾನ ಮಾಡಿ ಎಂದು ದೇವಸ್ಥಾನ ಸಮಿತಿ ಎಚ್ಚರಿಸಿದೆ. ಆದರೆ, ಆಗಮಿಸುವ ಎಲ್ಲ ಭಕ್ತರಿಗೆ ಸ್ನಾನಕ್ಕೆ ವ್ಯವಸ್ಥೆ ಮಾಡುವುದಕ್ಕೆ ಮುತುವರ್ಜಿ ವಹಿಸುವುದಿಲ್ಲ. ಒಂದಷ್ಟು ತಾತ್ಕಾಲಿಕ ಶೌಚಾಲಯಗಳು ಮತ್ತು ಸ್ನಾನಗೃಹಗಳ ವ್ಯವಸ್ಥೆ ಇರುವುದೇನೋ ನಿಜ, ಆದರೆ, ಅವು ಯಾವುದಕ್ಕೂ ಸಾಲುವುದಿಲ್ಲ.
ದೇವಸ್ಥಾನಕ್ಕೆ ಪ್ರತಿವರ್ಷವೂ 15-16 ಕೋಟಿ ರು. ಆದಾಯ ಬರುತ್ತದೆ. ಇರುವ ಹಣವನ್ನೇ ಬಳಕೆ ಮಾಡಿಕೊಂಡು ಮಾಸ್ಟರ್ ಪ್ಲ್ಯಾನ್ ಮಾಡಿ, ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂಬುದು ಭಕ್ತರ ಆಗ್ರಹ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ