ಶುಕ್ರವಾರ, ಫೆಬ್ರವರಿ 19, 2021

ಶಿರಸಿ ಜಿಲ್ಲೆಗೆ ಮಾರ್ದನಿಸಿದ ಕೂಗು



      


        ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಘೋಷಣೆಯಾಗುತ್ತಿದ್ದಂತೆ, ರಾಜ್ಯದಲ್ಲಿ ಮತ್ತಷ್ಟು ಜಿಲ್ಲೆಗಳ ರಚನೆಗೆ ಆಗ್ರಹ ಕೇಳಿ ಬರುತ್ತಿದೆ. ಈ ಪೈಕಿ, ಉತ್ತರ ಕನ್ನಡ ಜಿಲ್ಲೆಯನ್ನು ವಿಭಜಿಸಿ, ಪ್ರತ್ಯೇಕ ಶಿರಸಿ ಜಿಲ್ಲೆಯನ್ನು ಸ್ಥಾಪಿಸಬೇಕು ಎಂಬ ಕೂಗು ಪ್ರಧಾನವಾದುದು. ಹಾಗೆ ನೋಡಿದರೆ, ಶಿರಸಿ, ಪ್ರತ್ಯೇಕ ಜಿಲ್ಲೆಯಾಗಬೇಕು ಎಂಬ ಕೂಗು ತುಂಬಾ ಹಳೆಯದು. ಈ ಆಗ್ರಹದ ಹಿನ್ನೆಲೆಯಲ್ಲಿಯೇ 2008ರಲ್ಲಿ ಶಿರಸಿಯನ್ನು ಪ್ರತ್ಯೇಕ ಶೈಕ್ಷಣಿಕ ಜಿಲ್ಲೆಯನ್ನಾಗಿ ಘೋಷಿಸಲಾಯಿತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪರಿಶ್ರಮ ಇದರ ಹಿಂದಿದೆ.

        ಕರಾವಳಿ, ಮಲೆನಾಡು ಹಾಗೂ ಅರೆ ಬಯಲುಸೀಮೆಯನ್ನು ಒಳಗೊಂಡಿರುವ, ಮೂರು ವಿಭಿನ್ನ ಸಂಸ್ಕøತಿಗಳು ಮೇಳೈಸಿರುವ ಜಿಲ್ಲೆ ಉತ್ತರ ಕನ್ನಡ. ರಾಜ್ಯದ ಅತಿದೊಡ್ಡ ಜಿಲ್ಲೆಗಳಲ್ಲಿ ಇದೂ ಒಂದು. 10,277 ಕಿ.ಮೀ.ಗಳಷ್ಟು ವಿಶಾಲವಾದ ಭೌಗೋಳಿಕ ಪ್ರದೇಶವನ್ನು ಜಿಲ್ಲೆ ಹೊಂದಿದೆ. ಜಿಲ್ಲೆಯ ಜನಸಂಖ್ಯೆ ಸರಿಸುಮಾರು ಹದಿನಾಲ್ಕೂವರೆ ಲಕ್ಷ. ಶೇ. 80ರಷ್ಟು ಅರಣ್ಯ ಪ್ರದೇಶವನ್ನು ಹೊಂದಿರುವ ಈ ಜಿಲ್ಲೆ, ಅರಣ್ಯ ಜಿಲ್ಲೆ ಎಂದೇ ಖ್ಯಾತಿ ಪಡೆದಿದೆ. 


ಕದಂಬ ಜಿಲ್ಲೆಯಾಗಲಿ:

        ಜಿಲ್ಲೆಯಲ್ಲಿ ಪ್ರಸ್ತುತ 6 ವಿಧಾನಸಭಾ ಕ್ಷೇತ್ರಗಳಿವೆ. ಮೂರು ಕ್ಷೇತ್ರಗಳು ಕರಾವಳಿಯಲ್ಲಿದ್ದರೆ, ಇನ್ನು ಮೂರು ಕ್ಷೇತ್ರಗಳು ಘಟ್ಟದ ಮೇಲಿನ ಭಾಗದಲ್ಲಿವೆ. ಲೋಕಸಭಾ ಕ್ಷೇತ್ರಕ್ಕೆ ನೆರೆಯ ಬೆಳಗಾವಿ ಜಿಲ್ಲೆಯ ಕಿತ್ತೂರು ಹಾಗೂ ಖಾನಾಪುರ ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಲಾಗಿದೆ. ಜಿಲ್ಲೆಯಲ್ಲಿ ನಾಲ್ಕು ಕಂದಾಯ ಉಪ ವಿಭಾಗಗಳು ಇವೆ. ಅವುಗಳೆಂದರೆ, ಭಟ್ಕಳ, ಶಿರಸಿ, ಕಾರವಾರ ಹಾಗೂ ಕುಮಟಾ. ಭಟ್ಕಳ ಉಪ ವಿಭಾಗಕ್ಕೆ ಭಟ್ಕಳ ಹಾಗೂ ಹೊನ್ನಾವರ ಸೇರಿದರೆ, ಕುಮಟಾ ಉಪ ವಿಭಾಗಕ್ಕೆ ಕುಮಟಾ ಹಾಗೂ ಅಂಕೋಲಾ, ಕಾರವಾರ ಉಪ ವಿಭಾಗಕ್ಕೆ ಕಾರವಾರ, ಜೊಯಿಡಾ ಹಾಗೂ ಹಳಿಯಾಳ ಮತ್ತು ಶಿರಸಿ ಉಪ ವಿಭಾಗಕ್ಕೆ ಶಿರಸಿ, ಯಲ್ಲಾಪುರ, ಸಿದ್ದಾಪುರ ಹಾಗೂ ಮುಂಡಗೋಡ ತಾಲೂಕುಗಳು ಸೇರಿವೆ. 3 ನಗರಸಭೆ, 4 ಪುರಸಭೆ, 5 ಪಟ್ಟಣ ಪಂಚಾಯಿತಿ, 208 ಗ್ರಾಮ ಪಂಚಾಯಿತಿಗಳು ಹಾಗೂ 1289 ಗ್ರಾಮಗಳು ಜಿಲ್ಲೆಯಲ್ಲಿವೆ. 

        ಕರಾವಳಿಯಲ್ಲಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳಿದ್ದರೆ, ಘಟ್ಟದ ಮೇಲೆ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಹಳಿಯಾಳ, ಮುಂಡಗೋಡು ಹಾಗೂ ಜೊಯಿಡಾ ತಾಲೂಕುಗಳಿವೆ. ಇದರ ಜೊತೆಗೆ, ಹೊಸದಾಗಿ ರಚನೆಯಾಗಿರುವ ದಾಂಡೇಲಿ ತಾಲೂಕು ಸಹ ಇದೆ. 

        ಕನ್ನಡದ ಪ್ರಥಮ ರಾಜಧಾನಿ ಬನವಾಸಿ ಇರುವುದು ಇಲ್ಲಿಯೇ. ಪ್ರಸ್ತುತ ಇದು ಶಿರಸಿ ತಾಲೂಕಿನ ಒಂದು ಹೋಬಳಿ. ಶಿರಸಿಯಿಂದ ಸರಿ ಸುಮಾರು 24 ಕಿ.ಮೀ. ದೂರ ಇರುವ, 74 ಹಳ್ಳಿಗಳನ್ನು ಹೊಂದಿರುವ ಬನವಾಸಿ ಹೋಬಳಿಯನ್ನು ತಾಲೂಕು ಮಾಡಬೇಕು. 12 ತಾಲೂಕುಗಳನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯನ್ನು ವಿಭಜಿಸಬೇಕು. ಘಟ್ಟದ ಮೇಲಿನ ಈ ಎಂಟೂ ತಾಲೂಕುಗಳನ್ನು ಸೇರಿಸಿ, ಪ್ರತ್ಯೇಕ ಶಿರಸಿ ಜಿಲ್ಲೆ ಮಾಡಬೇಕು. ಇದಕ್ಕೆ ಕದಂಬ ಜಿಲ್ಲೆ ಎಂದು ಹೆಸರಿಡಬೇಕು ಎಂಬುದು ಹೋರಾಟಗಾರರ ಆಗ್ರಹ. 



ಯಾಕಾಗಿ ಪ್ರತ್ಯೇಕ ಜಿಲ್ಲೆಯ ಕೂಗು:

        ಪ್ರತ್ಯೇಕ ಜಿಲ್ಲೆ ಏಕೆ ಬೇಕು ಎಂಬುದಕ್ಕೆ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಕಾರ್ಯಕರ್ತರು ನೀಡುವ ಕಾರಣಗಳಿವು.

        1. ಪ್ರಸ್ತುತ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಕಾರವಾರ ಇರುವುದು ಮೂಲೆಯಲ್ಲಿ. ಇದರಿಂದ ಜನರಿಗೆ ದೈನಂದಿನ ಕೆಲಸಕ್ಕಾಗಿ ಜಿಲ್ಲಾಕೇಂದ್ರಕ್ಕೆ ಹೋಗಿ ಬರುವುದು ಕಷ್ಟ. ಸಿದ್ದಾಪುರ ತಾಲೂಕಿನ ಮನ್ಮನೆಯಿಂದ ಕಾರವಾರಕ್ಕೆ ಹೋಗಬೇಕೆಂದರೆ 200 ಕಿ.ಮೀ. ಕ್ರಮಿಸಬೇಕು. ಮುಂಡಗೋಡ ತಾಲೂಕಿನ ಒಳಹಳ್ಳಿಗಳಿಗೆ ಕಾರವಾರ ಸುಮಾರು 170 ಕಿ.ಮೀ. ದೂರ. ಇವರಿಗೆ ಜಿಲ್ಲಾ ಕೇಂದ್ರದಲ್ಲಿ ಕೆಲಸವಿದ್ದರೆ, ಕನಿಷ್ಠ ಒಂದು ದಿನ ಮೀಸಲಿಡಬೇಕು. ಜೊತೆಗೆ, ಪ್ರಯಾಣ, ಊಟದ ವೆಚ್ಚ ದುಬಾರಿ.

        2. ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣಗಳಿದ್ದರೆ ಕಾರವಾರಕ್ಕೇ ಹೋಗಬೇಕು. ಕಂದಾಯ ಪ್ರಕರಣಗಳು ಒಂದೇ ವಿಚಾರಣೆಯಲ್ಲಿ ಇತ್ಯರ್ಥವಾಗುವುದಿಲ್ಲ. ಪ್ರಕರಣದ ಆದೇಶ ಹೊರಬೀಳುವ ತನಕ ಓಡಾಟ ತಪ್ಪಿದ್ದಲ್ಲ. ಹಳ್ಳಿಯಿಂದ ಬರುವ ರೈತರಿಗೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಲಭ್ಯವಿರುವ ದಿನಗಳ ಮಾಹಿತಿ ಕೂಡ ಇರುವುದಿಲ್ಲ. ಹೀಗಾಗಿ, ಅವರು ತಮ್ಮ ಕೆಲಸಕ್ಕಾಗಿ ಅಲೆದಾಡುವ ಸ್ಥಿತಿ ಇದೆ. 

        3. ಕೃಷಿ ಬಂದೂಕು ಲೈಸೆನ್ಸ್ ನವೀಕರಣಕ್ಕೆ, ಬಂದೂಕು ಹೊಂದಿರುವ ಪ್ರತಿ ರೈತ ಕಾರವಾರಕ್ಕೆ ಹೋಗಬೇಕು. ರೈತರು ಹೋದಾಗ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಲ್ಲದಿದ್ದರೆ, ಮತ್ತೊಂದು ದಿನವನ್ನು ಇದಕ್ಕಾಗಿ ಮೀಸಲಿಡಬೇಕು. 

        4. ಜಿಲ್ಲಾಮಟ್ಟದ ಬಹುತೇಕ ಎಲ್ಲಾ ಕಚೇರಿಗಳು ಕಾರವಾರದಲ್ಲಿವೆ. ಈ ಕಚೇರಿಗಳಲ್ಲಿ ಯಾವುದೇ ಕೆಲಸ ಇದ್ದರೂ, ಕಾರವಾರಕ್ಕೇ ಹೋಗಬೇಕಾಗುತ್ತದೆ. ಜಿಲ್ಲಾಮಟ್ಟದ ಸಭೆಗಳು ಹಾಗೂ ಇನ್ನಿತರ ಕೆಲಸಗಳಿಗಾಗಿ ಉಪ ವಿಭಾಗ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ವಾರದಲ್ಲಿ 2-3 ಬಾರಿ ಕಾರವಾರಕ್ಕೆ ಹೋಗುತ್ತಾರೆ. ಪ್ರಯಾಣಕ್ಕೆಂದೇ ಈ ಅಧಿಕಾರಿಗಳು ಕನಿಷ್ಠ 6 ತಾಸು ಮೀಸಲಿಡಬೇಕು.

        5. ವಾಸ್ತವದಲ್ಲಿ ಜಿಲ್ಲಾ ಕೇಂದ್ರ ಕಾರವಾರ ಆಗಿದ್ದರೂ, ವಾಣಿಜ್ಯ ಚಟುವಟಿಕೆ ಕೇಂದ್ರ ಶಿರಸಿ. ಘಟ್ಟದ ಮೇಲಿನ ಎಲ್ಲಾ ತಾಲೂಕುಗಳಿಗೆ ಇದು ಕೇಂದ್ರ ಸ್ಥಾನ. ಕಾರವಾರಕ್ಕೆ ಬಸ್ ಸಂಚಾರಿ ಸೌಲಭ್ಯ ಅತಿ ಕಡಿಮೆ. ಆದರೆ, ಶಿರಸಿಗೆ ಎಲ್ಲಾ ಕಡೆಯಿಂದಲೂ ಸಾಕಷ್ಟು ಬಸ್ ವ್ಯವಸ್ಥೆ ಇದೆ. ಅಲ್ಲದೆ, ಈಗಾಗಲೇ ಶಿರಸಿ, ಶೈಕ್ಷಣಿಕ ಜಿಲ್ಲೆಯಾಗಿದೆ. 

        6. ಇನ್ನು, ಕಾಂಗ್ರೆಸ್, ಬಿಜೆಪಿ ಪಕ್ಷಗಳು ರಾಜಕೀಯ ಚಟುವಟಿಕೆಗಳ ಕೇಂದ್ರ ಆಗಿರುವ ಶಿರಸಿಯಲ್ಲಿ ಜಿಲ್ಲಾ ಘಟಕದ ಕಚೇರಿಯನ್ನು ಹೊಂದಿವೆ.

        7. ಜೊತೆಗೆ, ಪ್ರತ್ಯೇಕ ಜಿಲ್ಲೆಯಾದರೆ, ಸರಕಾರದಿಂದ ಹೆಚ್ಚಿನ ಅನುದಾನ ಸಿಗುತ್ತೆ. ಹೀಗಾಗಿ, ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂಬುದು ಹೋರಾಟಗಾರರ ವಾದ.


ಪ್ರತ್ಯೇಕ ಜಿಲ್ಲೆಗೆ ಇರುವ ತೊಡಕೇನು?:

        1. ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆಯಾದರೂ, ಜಿಲ್ಲೆಯಲ್ಲಿ ಗುಡ್ಡಗಾಡು ಪ್ರದೇಶವೇ ಹೆಚ್ಚಾಗಿದೆ. ಜನವಸತಿ ಪ್ರದೇಶ ಕಡಿಮೆಯಿದೆ. ಅದರಲ್ಲೂ ಘಟ್ಟದ ಮೇಲಿನ ತಾಲೂಕುಗಳಲ್ಲಿ ಜನಸಂಖ್ಯೆ ತುಂಬಾ ಕಡಿಮೆ. ಒಂದೊಮ್ಮೆ ಶಿರಸಿಯನ್ನು ಪ್ರತ್ಯೇಕ ಜಿಲ್ಲೆ ಮಾಡಿದರೆ ನಿರ್ಧಿಷ್ಟ ಪ್ರಮಾಣದ ಜನಸಂಖ್ಯೆ ಇರುವುದಿಲ್ಲ ಎನ್ನುವ ವಾದವಿದೆ. 

        ಆದರೆ, ಜನಸಂಖ್ಯೆಯೊಂದೇ ಮಾನದಂಡವಾಗಬಾರದು. ಆಡಳಿತ ವ್ಯವಸ್ಥೆ ಇರುವುದೇ ಜನರ ಅನುಕೂಲಕ್ಕಾಗಿ. ಹಾಗೆ ನೋಡಿದರೆ, ಅರುಣಾಚಲ ಪ್ರದೇಶದ ದಿಬಾಂಗ್ ವ್ಯಾಲಿಯಲ್ಲಿ ಇರುವ ಜನಸಂಖ್ಯೆ ಕೇವಲ 8004. ಸಿಕ್ಕಿಂ, ಪುದುಚೇರಿ, ನಾಗಾಲ್ಯಾಂಡ್ ಸೇರಿದಂತೆ ಇತರ ಹಲವು ರಾಜ್ಯಗಳಲ್ಲೂ ಇಂತಹುದೇ ಸ್ಥಿತಿಯಿದೆ. ಅಷ್ಟೇ ಏಕೆ, ನಮ್ಮದೇ ರಾಜ್ಯ, ಕೊಡಗಿನಲ್ಲಿಯೂ ಜನಸಂಖ್ಯೆ ಕಡಿಮೆ ಇದೆ ಎನ್ನುವುದು ಹೋರಾಟಗಾರರ ವಾದ.

        2. ಈ ಮಧ್ಯೆ, ಶಿರಸಿ ಜಿಲ್ಲೆಯಾದರೆ, ಜೊಯಿಡಾವನ್ನು ಶಿರಸಿಗೆ ಸೇರಿಸುವುದು ಬೇಡ. ಜೊಯಿಡಾದಿಂದ ಶಿರಸಿ 123 ಕಿ.ಮೀ. ದೂರದಲ್ಲಿದೆ. ಆದರೆ, ಜೊಯಿಡಾದಿಂದ ಕಾರವಾರಕ್ಕೆ ಕೇವಲ 70 ಕಿ.ಮೀ. ದೂರ. ಜೊಯಿಡಾ, ದಾಂಡೇಲಿ, ಹಳಿಯಾಳ ತಾಲೂಕಿನ ಜನತೆ ಕಾರವಾರದ ಜೊತೆ ಹೆಚ್ಚಿನ ಒಡನಾಟ ಹೊಂದಿದ್ದಾರೆ ಎನ್ನುವ ವಾದ ಆ ಭಾಗದವರದ್ದು.

        3. ಇವೆಲ್ಲದರ ಮಧ್ಯೆ, ಇಲ್ಲಿನ ಜನಪ್ರತಿನಿಧಿಗಳು ಈ ಬಗ್ಗೆ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ಶಿರಸಿ, ಸಿದ್ದಾಪುರ ಭಾಗದ ಕೆಲ ಸಂಘಟನೆಯ ಕಾರ್ಯಕರ್ತರು, ಸಾರ್ವಜನಿಕರು ಈ ಬಗ್ಗೆ ಜೋರಾಗಿ ಧ್ವನಿ ಎತ್ತುತ್ತಿದ್ದಾರೆ. ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಪತ್ರ ಚಳವಳಿ, ಪ್ರತಿಭಟನೆ, ಮೆರವಣಿಗೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸುವುದು ಸೇರಿದಂತೆ ಶಾಂತಿಯುತವಾಗಿ ತಮ್ಮ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ. ಆದರೆ, ಜಿಲ್ಲೆಯ ಯಾವುದೇ ಹಿರಿಯ ರಾಜಕಾರಣಿ ಈ ಬಗ್ಗೆ ಈವರೆಗೂ ಧ್ವನಿ ಎತ್ತಿಲ್ಲ. ಸರ್ಕಾರದ ಜತೆ ಮಾತುಕತೆ ನಡೆಸುವ, ಅಷ್ಟೇಕೆ, ಮನವಿ ಮಾಡಿಕೊಳ್ಳುವ ಕೆಲಸಕ್ಕೂ ಮುಂದಾಗಿಲ್ಲ. ತಮ್ಮದೇ ಪಕ್ಷದ ಸರ್ಕಾರ ಇದ್ದರೂ, ಸ್ಥಳೀಯ ಶಾಸಕರು ಹಾಗೂ ಸಂಸದರು ಈ ಬಗ್ಗೆ ಧ್ವನಿ ಎತ್ತದೆ ಸುಮ್ಮನಿರುವುದು ಅಚ್ಚರಿಯ ಸಂಗತಿ ಎನ್ನುತ್ತಾರೆ ಹೋರಾಟಗಾರರು.



ಬೇಡಿಕೆ ಈಡೇರಲಿ:

        ಅದೇನೇ ಇರಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಕೂಗಿಗೆ ಬೆಲೆ ಬರಬೇಕು. ಸರಕಾರದ ಅನುದಾನ ಜನರಿಗೆ ಸರಿಯಾಗಿ ತಲುಪಬೇಕು. ಜನರ ಅನುಕೂಲಕ್ಕೆ ತಕ್ಕಂತೆ ಆಡಳಿತ ವ್ಯವಸ್ಥೆ ಇರಬೇಕು. ಹೀಗಾಗಿ, ಪ್ರತ್ಯೇಕ ಜಿಲ್ಲೆ ಬೇಕು ಎನ್ನುವ ಸ್ಥಳೀಯರ ಬೇಡಿಕೆ ಈಡೇರಲಿ ಎಂದು ಹಾರೈಸೋಣ.






https://www.youtube.com/watch?v=_CJjZonP4AE



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹುಲಿಗೆಮ್ಮ ದೇವಿಯ ಭಕ್ತರಿಗೆ ಬಯಲೇ ಶೌಚಾಲಯ

 ಹುಣ್ಣಿಮೆಗೊಮ್ಮೆ ಲಕ್ಷ, ಲಕ್ಷ ಭಕ್ತರು, ವಾರಕ್ಕೊಮ್ಮೆ 50-60 ಸಾವಿರ ಭಕ್ತರು, ಜಾತ್ರೆಯಲ್ಲಿ ಐದಾರು ಲಕ್ಷ ಭಕ್ತರು ಸೇರುವ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲ...