ಬುಧವಾರ, ಫೆಬ್ರವರಿ 17, 2021

ಶ್ರೀಮಂತನ ತೋಳ್ತೆಕ್ಕೆಗೆ ಜಾರಿದ ಕೃಷಿ

          


             

ಬದಲಾವಣೆ ಜಗದ ನಿಯಮ ಎನ್ನುವ ಮಾತು ಕೃಷಿ ಕ್ಷೇತ್ರಕ್ಕೂ ಈಗ ಅನ್ವಯವಾಗುತ್ತಿದೆ. ಅನ್ನದಾತನ ತವರು ಎನಿಸಿಕೊಳ್ಳುತ್ತಿದ್ದ ಕೃಷಿಕ್ಷೇತ್ರಕ್ಕೀಗ ಬಂಡವಾಳಶಾಹಿಗಳ ಆಗಮನವಾಗುತ್ತಿದೆ. ನಮ್ಮ ಈಗಿನ ಅರ್ಥವ್ಯವಸ್ಥೆಯಲ್ಲಿ ಕೈಗಾರಿಕೆ, ಸೇವೆ, ವಾಣಿಜ್ಯ, ವ್ಯಾಪಾರ ... ಹೀಗೆ ಬಹುತೇಕ ಎಲ್ಲಾ ವಲಯಗಳು ಸೋತು, ನಿಸ್ತೇಜವಾಗಿ ಮೇಲೇಳಲು ಸರ್ಕಾರದ ಸಹಾಯ, ಪ್ರೋತ್ಸಾಹ ಬೇಡುತ್ತಿರುವಾಗ ದೇಶದ ರೈತಾಪಿ ವರ್ಗ ಸಮೃದ್ಧ ಆಹಾರ, ಹಾಲು, ಹಣ್ಣು, ತರಕಾರಿಗಳನ್ನು ದೇಶಕ್ಕೆ ಒದಗಿಸುತ್ತಿದೆ. ಬಂಡವಾಳಶಾಹಿಗಳಂತೆ ಪೈಸೆ, ಪೈಸೆಗೆ ಲೆಕ್ಕಾಚಾರ ಹಾಕದೆ, ಲಾಭವನ್ನಷ್ಟೇ ನೋಡದೆ, ಸೇವಾ ಮನೋಭಾವದಿಂದ ಜನರಿಗೆ ಕಡಿಮೆ ದರದಲ್ಲಿ ಆಹಾರ ಪದಾರ್ಥಗಳನ್ನು ಪೂರೈಸುತ್ತಿದೆ. ತಳಮುಟ್ಟಿದ ಆರ್ಥಿಕ ಪರಿಸ್ಥಿತಿಯಿಂದಾಗಿ ಖಾಸಗಿ ವಲಯದ ನೌಕರ ವರ್ಗ ಕೆಲಸ ಕಳೆದುಕೊಂಡು ಪರಿತಪಿಸುತ್ತಿರುವಾಗ ತನ್ನ ನಂಬಿದ ರೈತರ ಮಕ್ಕಳಿಗೆ ಈ ಕೃಷಿ ವಲಯ ಆಸರೆ ನೀಡಿ ಅವರನ್ನು ಸಂತೈಸುತ್ತಿದೆ. ನೆಮ್ಮದಿಯ ಬದುಕಿಗೆ ನೆಲೆ ಕಲ್ಪಿಸಿದೆ. 

ಇಷ್ಟು ದಿವಸ ಕೃಷಿ ಭೂಮಿ ರೈತರ ಪಾಲಿಗೆ ಅನ್ನ ನೀಡುವ, ಅವರ ಹಸಿವು ನೀಗಿಸುವ ತಾಯಿಯಾಗಿದ್ದಳು. ಆದರೀಗ ಈ ಭೂತಾಯಿ ಶ್ರೀಮಂತರ ತೋಳ್ತೆಕ್ಕೆಗೆ ಜಾರಿ, ಹಣ ಮಾಡುವ ತರುಣಿಯಾಗುತ್ತಿದ್ದಾಳೆ. 


ಜಾರಿಗೆ ಸುಗ್ರೀವಾಜ್ಞೆ ದಾರಿ:

ರೈತಾಪಿ ವರ್ಗದ ತೀವ್ರ ವಿರೋಧದ ನಡುವೆಯೂ ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆ ಮೂಲಕ ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದಿದೆ. ಈ ಕಾಯಿದೆಯ ಪ್ರಮುಖ ಕಲಂಗಳನ್ನು ಪೂರ್ವಾನ್ವಯವಾಗುವಂತೆ ರದ್ದುಪಡಿಸಿದೆ. ಮತ್ತೆ ಕೆಲವಕ್ಕೆ ತಿದ್ದುಪಡಿ ಮಾಡಲಾಗಿದೆ.

1. 1961ರ ಕರ್ನಾಟಕ ಭೂ ಸುಧಾರಣಾ ಕಾಯಿದೆಯ 79 ಎ ಹಾಗೂ ಬಿ ಕಲಂಗಳ ಪ್ರಕಾರ ಈವರೆಗೆ ಕೃಷಿಕರು, ಕೃಷಿ ಮೂಲದ ಕುಟುಂಬದವರು ಮಾತ್ರ ರಾಜ್ಯದಲ್ಲಿ ಕೃಷಿಭೂಮಿ ಖರೀದಿಸಲು ಅವಕಾಶವಿತ್ತು. ಕೃಷಿಯೇತರ ಮೂಲಗಳಿಂದ ಹೆಚ್ಚು ಆದಾಯವುಳ್ಳ ಕೈಗಾರಿಕೋದ್ಯಮಿಗಳು, ಮತ್ತಿತರರು ಕೃಷಿಭೂಮಿಯನ್ನು ಕಬಳಿಸದಂತೆ ಈ ಕಾಯಿದೆ ರಕ್ಷಣೆ ಒದಗಿಸುತ್ತಿತ್ತು. 

2. ಜೊತೆಗೆ, 79ನೇ ಸಿ ಕಲಂ, ತಾವು ನೈಜ ರೈತರೆಂದು ಸರಿಯಾದ ಪ್ರಮಾಣಪತ್ರ ನೀಡದೆ ಜಮೀನನ್ನು ಕೊಂಡವರಿಗೆ ದಂಡ ವಿಧಿಸುವ ಅವಕಾಶವನ್ನು ಒದಗಿಸುತ್ತಿತ್ತು. 

3. 80ನೇ ಕಲಂ, ರೈತರಲ್ಲದವರಿಗೆ ಕೃಷಿಭೂಮಿ ಮಾರುವುದನ್ನು ನಿಷೇಧಿಸಿತ್ತು. 

4. 63ನೇ ಕಲಂ, ಐವರಿಗಿಂತ ಹೆಚ್ಚು ಜನರಿರುವ ಕುಟುಂಬ 20 ಯೂನಿಟ್‍ಗಿಂತ ಹೆಚ್ಚು ಕೃಷಿಭೂಮಿ ಹೊಂದಿರಬಾರದು ಎಂಬ ನಿಷೇಧ ವಿಧಿಸಿತ್ತು. ಅಂದರೆ, ಕರ್ನಾಟಕದಲ್ಲಿ ಕೃಷಿ ಭೂಮಿಯ ವರ್ಗೀಕರಣವನ್ನು ಆಧರಿಸಿ ಒಂದು ಕೃಷಿ ಕುಟುಂಬ 48-108 ಎಕರೆಗಿಂತ ಹೆಚ್ಚು ಭೂಮಿ ಹೊಂದಲು ಅವಕಾಶ ಇರಲಿಲ್ಲ. 

5. ಜೊತೆಗೆ, 1974ರ ಭೂ ಸುಧಾರಣಾ ಕಾಯಿದೆ, ಊಳಿಗಮಾನ್ಯ ಪದ್ಧತಿಯ ಶೋಷಣೆಯಿಂದ ಕೃಷಿಯನ್ನು ಮುಕ್ತಗೊಳಿಸಿತ್ತು.

ಆದರೀಗ, ರಾಜ್ಯ ಸರ್ಕಾರ ಈ ಎಲ್ಲಾ ಕಾಯಿದೆಗಳಿಗೆ ತಿದ್ದುಪಡಿ ತರುವ ಮೂಲಕ ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳಿಗೆ ಮುಕ್ತವಾಗಿರಿಸಿದೆ. "ದುಡ್ಡೆ ದೊಡ್ಡಪ್ಪ' ಎನ್ನುವ ಹಾಗೆ ಹಣದ ಕಂತೆಗಳನ್ನು ಬಿಸಾಡಿ, ಕೃಷಿಭೂಮಿಯನ್ನು ಬಾಚಿಕೊಳ್ಳಬಹುದು. 7-8 ತಿಂಗಳ ಕಾಲ ಕೃಷಿ ಮಾಡಿ, ನಂತರ ಅದನ್ನು ವಾಣಿಜ್ಯೋದ್ಯಮ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದು. ಸಹಜವಾಗಿ, ಇದು ರಿಯಲ್ ಎಸ್ಟೇಟ್ ದಂಧೆಗೆ ಸಹಾಯ ಕಲ್ಪಿಸುತ್ತದೆ.


ಪ್ರಕರಣಗಳೆಲ್ಲಾ ರದ್ದು:

1. ರಾಜ್ಯದಲ್ಲಿ 79 ಎ ಮತ್ತು ಬಿಗೆ ಸಂಬಂಧಿಸಿದಂತೆ ಒಟ್ಟೂ 13,814 ಪ್ರಕರಣಗಳಿವೆ. ಈ ಪೈಕಿ ಸುಮಾರು 1,129 ಪ್ರಕರಣಗಳು ಹಳೆಯದಾದರೆ, 12,685 ಪ್ರಕರಣಗಳು ಹೊಸದಾಗಿ ದಾಖಲಾಗಿವೆ. 

2. ಇನ್ನು, ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲೇ 17ಕ್ಕೂ ಹೆಚ್ಚು ಗೃಹ ನಿರ್ಮಾಣ ಸಹಕಾರ ಸಂಘಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ಜಮೀನುಗಳ ಮೌಲ್ಯವೇ ಸುಮಾರು 12-15 ಸಾವಿರ ಕೋಟಿ ರೂ.ಗಳಷ್ಟು ಇರಬಹುದು. ಈ ಎಲ್ಲಾ ಪ್ರಕರಣಗಳು ಈಗ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಈ ಕಾಯಿದೆಯ ತಿದ್ದುಪಡಿಯಿಂದಾಗಿ ಈ ಎಲ್ಲಾ ಪ್ರಕರಣಗಳು ರದ್ದಾಗಲಿವೆ.

3. ಈ ಕಾಯಿದೆಯ ತಿದ್ದುಪಡಿಯಿಂದಾಗಿ ಮುಂದಿನ ದಿನಗಳಲ್ಲಿ ಹಳ್ಳಿ, ಹಳ್ಳಿಗಳಲ್ಲಿ ಕಾರ್ಪೊರೇಟ್ ಒಡೆತನದ ಕೃಷಿ ಪದ್ಧತಿ "ಫಾರ್ಮ್ ಹೌಸ್ ಸಂಸ್ಕøತಿ' ತಲೆ ಎತ್ತಿದರೆ ಆಶ್ಚರ್ಯಪಡಬೇಕಾಗಿಲ್ಲ. "ಉಳುವವನೆ ಹೊಲದೊಡೆಯ' ಎಂಬ ಸಾಮಾಜಿಕ ನ್ಯಾಯದ ಪರಿಕಲ್ಪನೆ ಹೋಗಿ "ಉಳ್ಳವನೇ ಹೊಲದೊಡೆಯ' ಆಗುತ್ತಿದ್ದಾನೆ. 

4. ಇನ್ನು ಮುಂದೆ ಕೃಷಿ ಭೂಮಿ ಸಹ ಇತರ ವಸ್ತುಗಳ ಹಾಗೆ ಸರಾಗವಾಗಿ ಮಾರುವ, ಕೊಳ್ಳುವ ಮಾರುಕಟ್ಟೆಯ ಸರಕಾಗಲಿದೆ. ಯಾವತ್ತೂ ಮೌಲ್ಯ ಕುಸಿಯದೆ, ಬಂಗಾರದಂತೆ ಸದಾ ವೃದ್ಧಿಯಾಗುವ ಅಮೂಲ್ಯ ಆಸ್ತಿಯಾಗಿ ಕಾರ್ಪೊರೇಟ್ ವಲಯಕ್ಕೆ ಈ ಭೂಮಿ ಆರ್ಥಿಕ ಸದೃಢತೆ ಕೊಡಲಿದೆ. 

5. "ಬ್ಲ್ಯಾಕ್ ಮನಿ'ಯನ್ನು ಸುಲಭವಾಗಿ "ವೈಟ್' ಮಾಡಲು ಬಂಡವಾಳದಾರರಿಗೆ ಇದು ಉತ್ತಮ ಅವಕಾಶ ಕಲ್ಪಿಸಿಕೊಡಲಿದೆ. 

6. ಅಷ್ಟೇ ಅಲ್ಲ, ನಿಧಾನವಾಗಿ ಭಾರತದ ಕೃಷಿಯ ಮೇಲೆ ಬಹುರಾಷ್ಟ್ರೀಯ ಕಂಪನಿಗಳ ಹಿಡಿತ ಹೆಚ್ಚಾಗುವ ಸಾಧ್ಯತೆ ಇದೆ.



ಸರ್ಕಾರದ ಸಮರ್ಥನೆ:

ರಾಜ್ಯದಲ್ಲಿನ ಕೃಷಿ ಚಟುವಟಿಕೆಗಳಿಗೆ ಈ ಕಾಯಿದೆ ಉತ್ತೇಜನ ನೀಡಲಿದೆ ಎನ್ನುವುದು ಸರ್ಕಾರದ ವಾದ. ಉಳುವೆ ಮಾಡದೆ ಪಾಳು ಬಿದ್ದಿರುವ ಲಕ್ಷಾಂತರ ಎಕರೆಯಲ್ಲಿ ಕೃಷಿ ಚಟುವಟಿಕೆ ಶುರುವಾಗಲಿದೆ ಎನ್ನುತ್ತಿದೆ ಸರ್ಕಾರ.

ನಿಜ, ಕರ್ನಾಟಕ ಕೃಷಿ ಆಯೋಗ ನಡೆಸಿರುವ ಅಧ್ಯಯನದ ಪ್ರಕಾರ ರಾಜ್ಯದ ರೈತರು ಈಗಾಗಲೇ 21 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕೃಷಿಯನ್ನೇ ಮಾಡದೆ ಪಾಳು ಬಿಟ್ಟಿದ್ದಾರೆ. ಈ ಪೈಕಿ, ಶೇ.61ರಷ್ಟು ಮಂದಿ ಸಣ್ಣ ಮತ್ತು ಅತಿ ಸಣ್ಣ ರೈತರು. ಇವರಲ್ಲಿ ಬಹುಪಾಲು ಮಂದಿ ಪಟ್ಟಣಗಳಿಗೆ ವಲಸೆ ಬಂದು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಆದರೂ, ಮುಂದೊಂದು ದಿನ ಕಷ್ಟದ ಸಮಯದಲ್ಲಿ ಈ ಭೂಮಿ ತಮಗೆ ಆಸರೆ ಆಗಬಹುದು ಎಂಬ ಆಶಯ ಅವರದು. ಆದರೆ, ಇವರ ಭೂಮಿ ಹಣವುಳ್ಳವರ, ಭೂ ಮಾಫಿಯಾ ಶಕ್ತಿಗಳ ಕೈವಶವಾದರೆ ಇವರೆಲ್ಲಾ ಶಾಶ್ವತವಾಗಿ ನಿರ್ಗತಿಕರಾಗುತ್ತಾರೆ ಎಂಬುದು ಮಾತ್ರ ಕಟು ವಾಸ್ತವ. 

ಅಷ್ಟೇ ಅಲ್ಲ, ಪ್ರಸ್ತುತ ರೈತರ ಬೆಳೆಗೆ ಬೆಂಬಲ ಬೆಲೆ ನೀಡುವ, ಸಬ್ಸಿಡಿ ದರದಲ್ಲಿ ರಸಗೊಬ್ಬರ ಪೂರೈಸುವ, ಸಾಲದ ಶೂಲದಿಂದ ರೈತ ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ನೀಡುವುದೂ ಸೇರಿದಂತೆ ಸರ್ಕಾರದ ಹಲವು ಪ್ರೋತ್ಸಾಹಕ ಕ್ರಮಗಳು ಕಾಲಕ್ರಮೇಣ ನಿಲ್ಲಬಹುದು. ಆಗ, ಬಡ ರೈತಾಪಿ ವರ್ಗ ಮತ್ತಷ್ಟು ಬಡವಾಗುತ್ತದೆ ಎಂಬುದಂತೂ ಕಟು ಸತ್ಯ.


https://www.youtube.com/watch?v=IBUTBBZukkM&t=317s




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹುಲಿಗೆಮ್ಮ ದೇವಿಯ ಭಕ್ತರಿಗೆ ಬಯಲೇ ಶೌಚಾಲಯ

 ಹುಣ್ಣಿಮೆಗೊಮ್ಮೆ ಲಕ್ಷ, ಲಕ್ಷ ಭಕ್ತರು, ವಾರಕ್ಕೊಮ್ಮೆ 50-60 ಸಾವಿರ ಭಕ್ತರು, ಜಾತ್ರೆಯಲ್ಲಿ ಐದಾರು ಲಕ್ಷ ಭಕ್ತರು ಸೇರುವ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲ...