ಭಾನುವಾರ, ಫೆಬ್ರವರಿ 21, 2021

ಕಲ್ಲು, ಕಲ್ಲಿನಲಿ ಕೇಳುತಿದೆ ಸ್ಫೋಟ



        ಇತ್ತೀಚೆಗೆ ಶಿವಮೊಗ್ಗದ ಹುಣಸೋಡು-ಅಬ್ಬಲಗೆರೆ ನಡುವಿನ ಜಲ್ಲಿ ಕ್ರಷರ್ ಬಳಿ ಸಂಗ್ರಹಿಸಿ ಇಟ್ಟಿದ್ದ ಸ್ಫೋಟಕ ಸಿಡಿದಾಗ ಐದಕ್ಕೂ ಹೆಚ್ಚು ಕಾರ್ಮಿಕರು ಜೀವ ಕಳೆದುಕೊಂಡರು. ಈ ಸ್ಫೋಟದ ಕಂಪನ, ಶಿವಮೊಗ್ಗ ಮಾತ್ರವಲ್ಲ, ನೆರೆಯ ಜಿಲ್ಲೆಗಳಲ್ಲೂ ಕೇಳಿ, ಅಲ್ಲಿನ ಜನ ಕೂಡ ದಂಗಾದರು. ಭೂಮಿಯೇ ಕಂಪಿಸಿ ಬಿಟ್ಟಿತು ಎಂಬ ಭಯದಿಂದ, ಮನೆಗಳಿಂದ ಹೊರಗೋಡಿ ಬಂದರು. ರಾಷ್ಟ್ರಮಟ್ಟದಲ್ಲೂ ಇದು ದೊಡ್ಡ ಸುದ್ದಿಯಾಯಿತು. 
        ಹಾಗೆ ನೋಡಿದರೆ, ಇದೇನೂ ನಮ್ಮಲ್ಲಿ ಹೊಸತಲ್ಲ ಬಿಡಿ. ನಿತ್ಯ ಪರಿಸರ, ಪ್ರಾಣಿ, ಪಕ್ಷಿಗಳ ಮೇಲೆ, ಜನರ ಮೇಲೆ ಮಾಲಿನ್ಯದ ದಬ್ಬಾಳಿಕೆ ನಡೆಸುತ್ತಿರುವ ಕ್ರಷರ್ ಮಾಫಿಯಾ, ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ.
        ಮೊದಲೆಲ್ಲಾ ರಾಜ್ಯದಲ್ಲಿ ಸಾಂಪ್ರದಾಯಿಕವಾಗಿ ಕಲ್ಲು ಗಣಿಗಾರಿಕೆ ನಡಿತಾ ಇತ್ತು. ಚಪ್ಪಡಿ, ಚರಂಡಿ ಕಲ್ಲು, ಸೈಜು ಕಲ್ಲು ಹಾಗೂ ಗ್ರಾನೈಟ್‍ಗಾಗಿ ಗಣಿಗಾರಿಕೆ ನಡೆಸ್ತಾ ಇದ್ರು. ಯಾವಾಗ ಮರಳು ಖಾಲಿಯಾಯಿತೊ, ಆಗ ಎಂ. ಸ್ಯಾಂಡ್ ಪರ್ಯಾಯವಾಗಿ ಹುಟ್ಟಿಕೊಂಡಿತು. ಆಗ ಕೇವಲ ಕಲ್ಲಿನ ಉಪಕರಣಗಳಿಗೆ ಸೀಮಿತವಾಗಿದ್ದ ಕಲ್ಲು ಗಣಿಗಾರಿಕೆಗೆ ಎಲ್ಲಿಲ್ಲದ ಬೇಡಿಕೆ ಬಂತು. ಪ್ರಕೃತಿ ನಮಗೆ ಕೊಡುಗೆಯಾಗಿ ನೀಡಿರುವ, ನಿಸರ್ಗದ ಈ ಸಂಪತ್ತನ್ನು ಮಾರಿ ಬದುಕುವ ಗಣಿಗಾರಿಕೆ ತೀರಾ ಲಾಭದಾಯಕ ಎಂಬ ಅರಿವು ಉದ್ಯಮಿಗಳಿಗೆ ಬಂತು.  


ರಾಜ್ಯದಲ್ಲಿ ಎಷ್ಟು ಪ್ರದೇಶದಲ್ಲಿ ನಡಿತಾ ಇದೆ ಗಣಿಗಾರಿಕೆ?:
        ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ 2802 ಕಲ್ಲು ಗಣಿಗಾರಿಕೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರಕ್ಕೆ 1,500 ಕೋಟಿ ರೂ.ಗಳಷ್ಟು ವಾರ್ಷಿಕ ಆದಾಯ ಬರುತ್ತಿದೆ. 1 ಟನ್ ಕಲ್ಲಿಗೆ 650 ರೂ.ನಿಂದ 700 ರೂ.ವರೆಗೆ ದರ ನಿಗದಿ ಮಾಡಲಾಗಿದೆ. ಕಿ.ಮೀ. ಆಧಾರದ ಮೇಲೆ ಸಾಗಾಣಿಕೆ ವೆಚ್ಚವನ್ನು ತೆಗೆದುಕೊಳ್ಳಲಾಗುತ್ತಿದೆ. 60 ರೂ. ರಾಜಧನ, 30 ರೂ. ಜಿಲ್ಲಾ ನಿರ್ವಹಣೆ ನಿಧಿ ಮತ್ತು ಇನ್ನಿತರ ಶುಲ್ಕ ಸೇರಿ ಪ್ರತಿ ಟನ್ ಕಲ್ಲಿಗೆ ಒಟ್ಟೂ 107 ರೂ. ಶುಲ್ಕವನ್ನು ಸರ್ಕಾರಕ್ಕೆ ಕಟ್ಟ ಬೇಕಾಗುತ್ತದೆ. ರಾಜ್ಯದಲ್ಲಿ ವಾರ್ಷಿಕವಾಗಿ ಸಾವಿರಾರು ಮಿಲಿಯನ್ ಮೆಟ್ರಿಕ್ ಟನ್‍ನಷ್ಟು ಕಲ್ಲನ್ನು ತೆಗೆಯಲಾಗುತ್ತಿದೆ. 
        ಕಂದಾಯ, ಅರಣ್ಯ, ಪರಿಸರ, ಗಣಿ ಮತ್ತು ಭೂವಿಜ್ಞಾನ ಸೇರಿದಂತೆ ಸುಮಾರು 24 ಇಲಾಖೆಗಳಿಂದ ಅನುಮತಿ ಪಡೆದ ಬಳಿಕ ಗುತ್ತಿಗೆ ಆಧಾರದಲ್ಲಿ ನಿರ್ಧಿಷ್ಟ ಅವಧಿಗೆ ಹಾಗೂ ನಿರ್ಧಿಷ್ಟವಲ್ಲದ ಅವಧಿಗೆ ಎಂದು ಎರಡು ವಿಧದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗುತ್ತದೆ. ನಿರ್ಧಿಷ್ಟ ಅವಧಿ ವಿಭಾಗದಲ್ಲಿ ಸಾಧಾರಣವಾಗಿ 20 ವರ್ಷಗಳಿಗೆ ಗುತ್ತಿಗೆ ನೀಡಿದರೆ, ನಿರ್ಧಿಷ್ಟವಲ್ಲದ ವಿಭಾಗದಲ್ಲಿ 30 ವರ್ಷಕ್ಕೆ ಗುತ್ತಿಗೆ ನೀಡಲಾಗುತ್ತದೆ. ಸದ್ಯ ರಾಜ್ಯದಲ್ಲಿ 13 ಸಾವಿರ ಎಕರೆ ಪ್ರದೇಶದಲ್ಲಿ ಗುತ್ತಿಗೆ ಆಧಾರದ ಮೇಲೆ 2802 ಅಧಿಕೃತ ಕಲ್ಲು ಗಣಿಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಇದಕ್ಕಿಂತ ಹೆಚ್ಚಾಗಿ ಅಕ್ರಮ ಗಣಿಗಾರಿಗಳ ಸಂಖ್ಯೆಯೇ ಹೆಚ್ಚು ಎನ್ನುವುದು ಪರಿಸರವಾದಿಗಳ ಆರೋಪ.



ಕಲ್ಲು ಗಣಿಗಾರಿಕೆಯಿಂದ ಉಂಟಾಗಬಹುದಾದ ಅಪಾಯಗಳು:
- ಕ್ರಷರ್‍ಗೆ ಇಂತಿಷ್ಟೇ ಸ್ವರೂಪದ ಕಲ್ಲು ಬೇಕು ಎಂದೇನಿಲ್ಲ. ಸಿಕ್ಕ ಕಲ್ಲನ್ನು ಪುಡಿ ಮಾಡುವುದೇ ಅದರ ಕೆಲಸ. ಹೀಗಾಗಿ, ದೊಡ್ಡ ಬಂಡೆಗಳನ್ನು ಸ್ಫೋಟಿಸಲು ಅಪಾಯಕಾರಿ ಸ್ಫೋಟಕಗಳನ್ನು ಬಳಸಲಾಗುತ್ತದೆ. ಇವು ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ.
- ಗಣಿಗಾರಿಕೆ ವೇಳೆ ಸ್ಫೋಟಿಸಲು ಡೈನಾಮೆಟ್ ಡಿಟೊನೇಟರ್ ಬಳಸುತ್ತಿದ್ದ ಜಾಗದಲ್ಲಿ ಈಗ ಜಿಲೆಟಿನ್ ಹಾಗೂ ವಾಟರ್‍ಜೆಲ್, ಅಂದರೆ, ಅಮೋನಿಯಂ ನೈಟ್ರೇಟ್, ಗೋರ್‍ಗಮ್‍ನಂತಹ ಅಪಾಯಕಾರಿ ಸ್ಫೋಟಕಗಳು ಬಂದಿವೆ. ಇವನ್ನು ಅನಕ್ಷರಸ್ಥ ಕಾರ್ಮಿಕರೇ ಸ್ಫೋಟಿಸಿ, ಅವಘಡ ಮಾಡಿಕೊಂಡು ಜೀವ ಕಳೆದುಕೊಳ್ಳುತ್ತಿದ್ದಾರೆ. 
- ಈ ಸ್ಫೋಟಕಗಳಿಂದ, ಸ್ಫೋಟದ ವೇಳೆ ಉತ್ಪತ್ತಿಯಾಗುವ ಧೂಳು ಮತ್ತಿತರ ತ್ಯಾಜ್ಯಗಳಿಂದ ಸುತ್ತಮುತ್ತಲ ಪರಿಸರ ಮಾಲಿನ್ಯವಾಗ್ತಾ ಇದೆ. ಇವುಗಳಿಗೆ ಸಮೀಪದ ಹೊಲಗದ್ದೆಗಳಲ್ಲಿ ಬೆಳೆಗಳು ನಾಶವಾಗ್ತಾ ಇವೆ. ಹಲವೆಡೆ ಕ್ವಾರಿ ಸಮೀಪ ಕಟ್ಟಡಗಳು ಬಿರುಕು ಬಿಟ್ಟ ಉದಾಹರಣೆಗಳೂ ಇವೆ. ಅಲ್ಲಿನ ಅಂತರ್ಜಲ ಪಾತಾಳ ಸೇರ್ತಾ ಇದೆ. ಧೂಳಿನಿಂದ ಸುತ್ತಮುತ್ತಲಿನ ಪರಿಸರದಲ್ಲಿ ವಾಸಿಸುವ ಜನರು ಹಲವು ರೋಗಗಳಿಗೆ ತುತ್ತಾಗ್ತಾ ಇದ್ದಾರೆ. 
- ಎಂ. ಸ್ಯಾಂಡ್ ಸಾಗಿಸುವ ಟಿಪ್ಪರ್‍ಗಳಿಂದ ರಸ್ತೆಗಳು ಹಾಳಾಗ್ತಾ ಇವೆ. 
- ಇಂತಹ ಅಕ್ರಮ ಕಲ್ಲು ಗಣಿಗಾರಿಕೆಗಳಿಂದ ರಾಜ್ಯದ ಬೊಕ್ಕಸಕ್ಕೂ ವಂಚನೆಯಾಗ್ತಾ ಇದೆ. ರಾಜ್ಯದ ಕೆಲವು ಕಡೆಗಳಲ್ಲಿ ಎಷ್ಟು ಟನ್ ಕಲ್ಲು ತೆಗೆಯಲಾಗುತ್ತಿದೆ ಎಂಬ ಬಗ್ಗೆ ಸರ್ಕಾರಕ್ಕೆ ಸರಿಯಾದ ಮಾಹಿತಿಯೇ ಇಲ್ಲ ಎನ್ನುವ ಆರೋಪ ಕೂಡಾ ಕೇಳಿ ಬರ್ತಾ ಇದೆ. 
- ಇನ್ನು ಕೆಲವೆಡೆ, ಸೀಮಿತ ಪ್ರದೇಶಕ್ಕೆ ಪರವಾನಗಿ ಪಡೆದು, ಬಳಿಕ ಅಲ್ಲಿನ ಇಡೀ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿ, ಅಲ್ಲಿರುವ ಭೂಗರ್ಭದ ಸಂಪತ್ತಿಗೇ ಕನ್ನ ಹಾಕುತ್ತಾರೆ. 
- ಯಾವುದೇ ಸ್ಫೋಟಕ ಬಳಸಬೇಕಾದರೂ, ಅದನ್ನು ಸುರಕ್ಷಿತವಾಗಿ ಸಾಗಿಸಬೇಕಾದರೂ, ಆಯಾ ರಾಜ್ಯದ ಪೆಟ್ರೋಲಿಯಂ ಮತ್ತು ಸ್ಫೋಟಕ ನಿಯಂತ್ರಣ ಸಂಸ್ಥೆಯ ಅನುಮತಿ ಪಡೆಯಬೇಕು. ಪೆಸೋ ಸುರಕ್ಷಿತ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. 
        ಈ ಸ್ಫೋಟಕಗಳ ಬಳಕೆಗೂ ಮುನ್ನ ಬಳಕೆಯ ಉದ್ದೇಶ, ಪ್ರಮಾಣ, ಗಣಿಗಾರಿಕೆಗೆ ಸಂಬಂಧಿಸಿದ ಎಲ್ಲಾ ಪರವಾನಿಗೆಗಳನ್ನು ಸಲ್ಲಿಸಬೇಕು. ಪರವಾನಿಗೆ ಇಲ್ಲದೇ ಯಾವುದೇ ಸ್ಫೋಟಕ ಬಳಸುವಂತಿಲ್ಲ. ಆದರೆ, ಸ್ಫೋಟಕ ಬಳಸುವ ವಿಚಾರದಲ್ಲಿ ಯಾವ ಕಂಪನಿಗಳೂ ನಿಯಮ ಪಾಲಿಸುತ್ತಿಲ್ಲ ಎನ್ನುವುದು ಕಟು ವಾಸ್ತವ.  ಬಹುತೇಕ ಎಲ್ಲಾ ಕಡೆ, ಅರಣ್ಯ ಸಂರಕ್ಷಣಾ ಕಾನೂನು ಉಲ್ಲಂಘಿಸಿಯೇ ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬರುತ್ತಿದೆ. 
- ಸಾರ್ವಜನಿಕರು ನೀಡಿದ ದೂರುಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದನ್ನು ಬಿಟ್ಟರೆ, ರಾಜ್ಯದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ. 
        ಯಾವುದಾದರೂ ಅವಘಡ ಸಂಭವಿಸಿದಾಗ, ಮಂಡಳಿ ಅವರಿಗೆ ನೋಟಿಸ್ ನೀಡಿ ಕೈತೊಳೆದುಕೊಳ್ಳುತ್ತದೆ. ಆಗಾಗ, ಅಕ್ರಮ ಗಣಿಗಾರಿಕೆ ವಿರುದ್ಧ ದಾಳಿ ನಡೆಸುವ ನಾಟಕವಾಡಿ, ಬಳಿಕ ಸುಮ್ಮನಾಗುತ್ತದೆ. ಇಂತಷ್ಟು ಸಾವಿರ ಎಂದು ದಂಡ ಕಟ್ಟುವ ಮಾಲಿಕರು, ಮತ್ತೆ ಗಣಿಗಾರಿಕೆ ಮುಂದುವರಿಸುತ್ತಾರೆ. ಆರೋಪಿಗಳಿಗೆ ಜೈಲು ಶಿಕ್ಷೆಯೇ ಇಲ್ಲ. 
- ಪೊಲೀಸ್ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ, ಕಂದಾಯ ಇಲಾಖೆ, ಬೆಸ್ಕಾಂ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಾಗಲಿ ಅಕ್ರಮ ಗಣಿಗಾರಿಕೆ ಬಗ್ಗೆ ಪ್ರಸ್ತಾಪಿಸಿದ ಉದಾಹರಣೆ ಇಲ್ಲ. 
ಇನ್ನು, ರಾಜ್ಯದ ಕೆಲವಡೆ ನ್ಯಾಯಾಲಯದ ತಡೆಯಾಜ್ಞೆಯಿದ್ದರೂ, ಅಕ್ರಮ ಕಲ್ಲು ಗಣಿಗಾರಿಕೆಗಳು ನಡೆಯುತ್ತಿವೆ ಎನ್ನುವ ಆರೋಪವೂ ಇದೆ.


ರಾಜ್ಯದೆಲ್ಲೆಡೆ ಪಸರಿಸಿದೆ ಅಕ್ರಮ ಕಲ್ಲು ಗಣಿಗಾರಿಕೆ:

- ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಉತ್ತರ ಕನ್ನಡ, ಗದಗ, ರಾಮನಗರ, ಚಿಕ್ಕಮಗಳೂರು, ಯಾದಗಿರಿ, ಶಿವಮೊಗ್ಗ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ವ್ಯಾಪ್ತಿಯಲ್ಲೂ ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಎಲ್ಲಾ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ, ಕಾರ್ಯ ನಿರ್ವಹಿಸುತ್ತಿದ್ದರೂ, ಅವುಗಳ ವಿರುದ್ಧ ಯಾವ ಇಲಾಖೆಯೂ ಕ್ರಮ ಕೈಗೊಳ್ಳುತ್ತಿಲ್ಲ. 

        ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಕ್ರಷರ್‍ಗಳು, ಸರ್.ಎಂ, ವಿಶ್ವೇಶ್ವರಯ್ಯ ಜನಿಸಿದ ಮುದ್ದೇನಹಳ್ಳಿ ಊರನ್ನೇ ಆಕ್ರಮಿಸಿಕೊಂಡಿವೆ. ನಂದಿ ಬೆಟ್ಟದ ತಪ್ಪಲಲ್ಲಿ ಸ್ಫೋಟ, ನಿತ್ಯದ ಕಾಯಕ. ಕೋಲಾರದ ಟೇಕಲ್, ಹುಣಸಿಕೋಟೆ ಸುತ್ತಮುತ್ತ ಗ್ರಾಮಗಳ ಬಳಿ ಕಲ್ಲು ಕ್ವಾರಿಗಳಿಂದ ಪ್ರಪಾತಗಳೇ ಸೃಷ್ಟಿಯಾಗಿವೆ. 
        ಯಾದಗಿರಿ ಜಿಲ್ಲೆಯ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಕೃಷ್ಣೆಯ ಒಡಲನ್ನೇ ಬಗೆದು ಹಾಕುತ್ತಿದೆ. ಅಷ್ಟೇ ಅಲ್ಲ, ವರ್ಕನಳ್ಳಿ, ಹಳಿಗೇರಾ ಬಳಿ ಅಲ್ಲಿನ ಗುಡ್ಡಗಳೇ ಕರಗುತ್ತಿವೆ. ಗದಗ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಅಲ್ಲಿನ ಕಪ್ಪತ್ತಗುಡ್ಡ ವನ್ಯಜೀವಿ ಧಾಮಕ್ಕೂ ಸಂಚಕಾರ ತಂದಿದೆ. 
        ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಸುತ್ತಮುತ್ತ ನಡೀತಾ ಇರುವ ಗಣಿಗಾರಿಕೆಯಿಂದಾಗಿ ರಾಮನಗರ ಸೇರಿದಂತೆ ಹಲವು ಗ್ರಾಮಗಳ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. 
- ಎಲ್ಲೆಡೆ, ಪರವಾನಿಗೆ ಪಡೆದ ಕ್ರಷರ್‍ಗಳಿಗಿಂತಲೂ ಅಕ್ರಮ ಕ್ರಷರ್‍ಗಳೇ ಜಾಸ್ತಿ ಇವೆ. ಇವನ್ನು ಪ್ರಶ್ನಿಸುವ ಶಕ್ತಿ ಯಾರಿಗೂ ಇಲ್ಲ. ಏಕೆಂದರೆ, ಇವುಗಳ ಹಿಂದೆ ಇರುವವರು ಪ್ರಭಾವಿ ಉದ್ಯಮಿಗಳು, ರಾಜಕಾರಣಿಗಳು, ಉನ್ನತ ಸ್ತರದ ಅಧಿಕಾರಿಗಳು.  
- ಸ್ವತ: ರಾಜಕಾರಣಿಗಳೇ ತಮ್ಮ ಸಂಬಂಧಿಕರ, ಆಪ್ತರ ಹೆಸರಲ್ಲಿ ಗಣಿಗಾರಿಕೆಗೆ ಇಳಿದಿದ್ದಾರೆ.
- ಕೊರೊನಾದಂತಹ ಸಂಕಷ್ಟದ ಕಾಲದಲ್ಲೂ ರಾಜ್ಯ ಸರ್ಕಾರ ಕ್ರಷರ್ ಬಿಲ್‍ಗೆ ತಿದ್ದುಪಡಿ ತಂದಿದೆ. ಕ್ರಷರ್‍ಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗಿದ್ದ ಪರಿಸರ ಸುರಕ್ಷತಾ ನಿಯಮಗಳನ್ನು ಸಡಿಲಿಸಿದೆ. 


        ರಾಜ್ಯದಲ್ಲಿನ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಈ ಹಿಂದೆ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಯವರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸೂಚನೆ ನೀಡಿದ್ದರು. ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಮಿಟಿ ರಚಿಸಿ, ಅಕ್ರಮ ಗಣಿಗಾರಿಕೆ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಈ ಸೂಚನೆ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು, ಲೋಕಾಯುಕ್ತರಿಗೆ ಕೈಗೊಂಡ ಕ್ರಮದ ಬಗ್ಗೆ ವರದಿ ನೀಡಿದ್ದರು. 
        ಅದರ ಪ್ರಕಾರ, 2016 ರಿಂದ 2018ರ ಮೂರು ವರ್ಷಗಳ ಅವಧಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ 28 ಸಾವಿರ ಕೇಸ್‍ಗಳನ್ನು ದಾಖಲಿಸಲಾಗಿದೆ. 100 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದರು. ಇದಕ್ಕೆ ತೃಪ್ತರಾಗದ ಲೋಕಾಯುಕ್ತರು, ದಂಡ ವಸೂಲಿ ಆದ್ಯತೆಯಾಗಬಾರದು. ಅಕ್ರಮ ಗಣಿಗಾರಿಕೆ ನಿಲ್ಲಿಸಲು ಕಠಿಣ ಕ್ರಮ ಕೈಗೊಳ್ಳಿ ಎಂದಿದ್ದರು. ಲೋಕಾಯುಕ್ತರ ಸೂಚನೆ ಬಂದು ಮೂರ್ನಾಲ್ಕು ವರ್ಷಗಳೇ ಕಳೆದಿವೆ. ಆದರೆ, ಅಕ್ರಮ ಕಲ್ಲುಗಣಿಗಾರಿಕೆ ರಾಜ್ಯದಲ್ಲಿ ಪರಾಕಾಷ್ಠೆ ತಲುಪಿದೆಯೇ ವಿನ:, ನಿಯಂತ್ರಣವಾಗಿಲ್ಲ.














ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹುಲಿಗೆಮ್ಮ ದೇವಿಯ ಭಕ್ತರಿಗೆ ಬಯಲೇ ಶೌಚಾಲಯ

 ಹುಣ್ಣಿಮೆಗೊಮ್ಮೆ ಲಕ್ಷ, ಲಕ್ಷ ಭಕ್ತರು, ವಾರಕ್ಕೊಮ್ಮೆ 50-60 ಸಾವಿರ ಭಕ್ತರು, ಜಾತ್ರೆಯಲ್ಲಿ ಐದಾರು ಲಕ್ಷ ಭಕ್ತರು ಸೇರುವ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲ...