ಭಾನುವಾರ, ಫೆಬ್ರವರಿ 21, 2021

ಮತ್ತೆ ಸೇನೆಯ ತೆಕ್ಕೆಗೆ ಜಾರಿದ ಮ್ಯಾನ್ಮಾರ್

 





ಮ್ಯಾನ್ಮಾರ್,


        ಸ್ನೇಹಿತರೆ, ಈ ದೇಶದ ಹೆಸರನ್ನು ನೀವೆಲ್ಲಾ ಕೇಳೆ ಇರ್ತೀರಿ. ಭಾರತದ ಗಡಿಗೆ ಹೊಂದಿಕೊಂಡಿರುವ ಆಗ್ನೇಯ ಏಷ್ಯಾದ ಪುಟ್ಟ ರಾಷ್ಟ್ರ ಮ್ಯಾನ್ಮಾರ್. ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ರಾಜ್ಯಗಳ ಜತೆ 1,600 ಕಿ.ಮೀ. ಉದ್ದಕ್ಕೆ ಈ ರಾಷ್ಟ್ರ ಗಡಿಯನ್ನು ಹಂಚಿಕೊಂಡಿದೆ. ಈ ಹಿಂದೆ ಈ ರಾಷ್ಟ್ರವನ್ನು ಬರ್ಮಾ ಎಂದು ಕರಿತಾ ಇದ್ರು. 1989ರಲ್ಲಿ ದೇಶದಲ್ಲಿ ಜನಾಂಗೀಯ ಸಂಘರ್ಷ ನಡೆದು, ಸಾವಿರಾರು ಜನ ಅಸುನೀಗಿದರು. ಇದಾದ ಒಂದು ವರ್ಷದ ನಂತರ, ಅಲ್ಲಿನ ಸೇನಾಡಳಿತ ಬರ್ಮಾದ ಹೆಸರನ್ನು ಮ್ಯಾನ್ಮಾರ್ ಎಂದು ಬದಲಾಯಿಸಿತು. ಅಲ್ಲಿಂದೀಚೆಗೆ ಬರ್ಮಾವನ್ನು ಮ್ಯಾನ್ಮಾರ್ ಅಂತಲೆ ಕರೆಯಲಾಗ್ತಾ ಇದೆ. ಭಾರತ ಮಾತ್ರವಲ್ಲದೆ, ಬಾಂಗ್ಲಾದೇಶ, ಚೀನಾ, ಲಾವೋಸ್ ಮತ್ತು ಥೈಲ್ಯಾಂಡ್ ಜತೆಗೂ ಈ ರಾಷ್ಟ್ರ ತನ್ನ ಗಡಿಯನ್ನು ಹಂಚಿಕೊಂಡಿದೆ.  



ಇಲ್ಲಿದ್ದಾರೆ 100ಕ್ಕೂ ಹೆಚ್ಚು ಜನಾಂಗೀಯರು:

        ರೋಹಿಂಗ್ಯಾ ಮುಸ್ಲಿಮರು ಸೇರಿದಂತೆ 100ಕ್ಕೂ ಹೆಚ್ಚು ಜನಾಂಗೀಯರು ಇಲ್ಲಿ ವಾಸಿಸುತ್ತಿದ್ದಾರೆ. ಸರಿಸುಮಾರು 6 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಮ್ಯಾನ್ಮಾರ್, ಆಗ್ನೇಯ ಏಷ್ಯಾದ ಅತಿದೊಡ್ಡ ಹಾಗೂ ಏಷ್ಯಾಖಂಡದ 10ನೆಯ ಅತಿದೊಡ್ಡ ರಾಷ್ಟ್ರ ಎನಿಸಿಕೊಂಡಿದೆ. ಇಲ್ಲಿನ ಹೆಚ್ಚಿನ ಜನರ ಆಡುಭಾಷೆ ಬರ್ಮೀಸ್. ಬೌದ್ಧಧರ್ಮೀಯರೇ ಇಲ್ಲಿನ ಬಹುಸಂಖ್ಯಾತರು.

        1948ರ ಜನವರಿ 4ರಂದು, ಅಂದರೆ, ಭಾರತಕ್ಕೆ ಸ್ವಾತಂತ್ರ್ಯ ಬಂದ ಸುಮಾರು 6 ತಿಂಗಳ ನಂತರ ಈ ರಾಷ್ಟ್ರ ಸ್ವಾತಂತ್ರ್ಯ ಪಡೆಯಿತು. ಆದರೆ, ಅಲ್ಲಿಂದೀಚೆಗೆ ಈ ರಾಷ್ಟ್ರದಲ್ಲಿ ಅತಿ ಹೆಚ್ಚು ಆಳ್ವಿಕೆ ನಡೆಸಿದ್ದು ಮಾತ್ರ ಅಲ್ಲಿನ ಸೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಆರಿಸಿ ಬಂದ ಸರ್ಕಾರ ಅಧಿಕಾರ ನಡೆಸಿದ್ದು ಬಹಳ ಕಡಿಮೆ ಅಂತಲೆ ಹೇಳಬಹುದು. 

        ಅಲ್ಲಿನ ಸೇನೆ ಈಗ ಮತ್ತೆ ದೇಶದ ಆಡಳಿತವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಮುಂದಿನ ಒಂದು ವರ್ಷ ಕಾಲ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅಲ್ಲಿನ ಸೇನೆ, ಮ್ಯಾನ್ಮಾರ್‍ನ ರಾಜ್ಯ ಕೌನ್ಸಿಲರ್ ಆಂಗ್ ಸಾನ್ ಸೂಕಿ ಹಾಗೂ ಇತರರನ್ನು ಬಂಧನದಲ್ಲಿ ಇರಿಸಿದೆ. ಸೇನಾ ಮುಖ್ಯಸ್ಥ ಜನರಲ್ ಮಿನ್ ಅಂಗ್ ಲ್ಯಾಂಗ್ ಅಧಿಕಾರದ ಗದ್ದುಗೆ ಏರಿದ್ದಾರೆ. ಜನರ ಪ್ರತಿಭಟನೆ ತಡೆಯಲು ಪ್ರಮುಖ ಸ್ಥಳಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ಸರಕಾರಿ ಸ್ವಾಮ್ಯದ ಮಾಧ್ಯಮಗಳು ಸದ್ಯಕ್ಕೆ ಪ್ರಸಾರ ನಿಲ್ಲಿಸಿವೆ. 




ನವೆಂಬರ್‍ನಲ್ಲಿ ನಡೆದಿತ್ತು ಚುನಾವಣೆ:


        ಕೇವಲ ಎರಡು ತಿಂಗಳ ಹಿಂದಷ್ಟೆ, ಅಂದರೆ 2020ರ ನವೆಂಬರ್‍ನಲ್ಲಿ ದೇಶದಲ್ಲಿ ಚುನಾವಣೆ ನಡೆದಿತ್ತು. ಸೂಕಿಯವರ 'ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ' ಪಕ್ಷ (ಎನ್‍ಎಲ್‍ಡಿ), ಬಹುಮತ ಪಡೆದು, ಸತತ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿತ್ತು. ದೇಶದ ಸಂಸತ್‍ಗೆ ನಡೆದ ಚುನಾವಣೆಯಲ್ಲಿ 498 ಸ್ಥಾನಗಳ ಪೈಕಿ ಸೂಕಿಯವರ ಎನ್‍ಎಲ್‍ಡಿ, 396 ಸ್ಥಾನಗಳನ್ನು ಪಡೆದಿತ್ತು. ಆದರೀಗ ಸೇನೆ ಅಧಿಕಾರವನ್ನು ಕಿತ್ತುಕೊಂಡಿದೆ. ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಅಲ್ಲಿನ ಚುನಾವಣಾ ಆಯೋಗ ಪಕ್ಷಪಾತ ತೋರಿದೆ ಎನ್ನುವುದು ಸೇನೆಯ ಆರೋಪ. ಅಲ್ಲದೆ, ರೋಹಿಂಗ್ಯಾ ಮುಸ್ಲಿಂಮರ ಬಗೆಗಿನ ಸೂಕಿಯವರ ಮೃದುಧೋರಣೆ ಕೂಡ ಸೇನೆಯ ಆಕ್ರೋಶಕ್ಕೆ ಕಾರಣವಾಗಿದೆ. ಇದು ಸೇನೆ ಹಾಗೂ ಸೂಕಿಯವರ ನೇತೃತ್ವದ ಸರ್ಕಾರದ ನಡುವೆ ತಿಕ್ಕಾಟಕ್ಕೆ ಕಾರಣವಾಗಿತ್ತು, ಈಗ ಸೇನೆ ಮತ್ತೆ ಮೇಲುಗೈ ಸಾಧಿಸಿದೆ.


ಚೀನಾ ಕೈವಾಡದ ಶಂಕೆ:

        ಯೂರೋಪ್, ಅಮೆರಿಕ ಸೇರಿದಂತೆ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಈ ಸೇನಾದಂಗೆಯನ್ನು ಖಂಡಿಸಿವೆ. ಆದರೆ, ಚೀನಾ ಈ ಬಗ್ಗೆ ಮಾತಾಡುತ್ತಿಲ್ಲ. ವಿಶೇಷವೆಂದರೆ, ನೆರೆಯ ರಾಷ್ಟ್ರ ಚೀನಾವೇ, ಈ ದಂಗೆಯ ಹಿಂದಿದೆ ಎನ್ನಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮ್ಯಾನ್ಮಾರ್‍ನ ವಿವಿಧ ವಲಯಗಳಲ್ಲಿ ಅಪಾರ ಪ್ರಮಾಣದಲ್ಲಿ ಬಂಡವಾಳ ಹೂಡಿರುವ ಚೀನಾ, ಈ ದಂಗೆಗೆ ಕುಮ್ಮಕ್ಕು ನೀಡಿದೆ ಎನ್ನುವ ಆರೋಪ ಕೇಳಿ ಬಂದಿದೆ.


        2011ರಲ್ಲಷ್ಟೆ ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಜಾಪ್ರಭುತ್ವ ಅಸ್ವಿತ್ವಕ್ಕೆ ಬಂದಿತ್ತು. ಅದಕ್ಕೂ ಮೊದಲು ಸುಮಾರು 50 ವರ್ಷಗಳ ಕಾಲ, 1962ರಿಂದ 2011ರವರೆಗೆ ಸೇನೆಯೇ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈಗ ಇತಿಹಾಸ ಮರುಕಳಿಸಿದೆ. 'ದೇಶದ ಸಂವಿಧಾನ ರಕ್ಷಣೆಗೆ ಈ ಕ್ರಮ ಅನಿವಾರ್ಯವಾಗಿತ್ತು. ಇನ್ನೊಂದು ವರ್ಷದೊಳಗೆ ಪ್ರಜಾಪ್ರಭುತ್ವವನ್ನು ಮರು ಸ್ಥಾಪಿಸಲಾಗುವುದು' ಎನ್ನುತ್ತಿದ್ದಾರೆ ಸೇನಾ ಮುಖ್ಯಸ್ಥರು. ಆದರೆ, ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಅಲ್ಪಾವಧಿಯಲ್ಲಿ ಸೇನಾಡಳಿತ ಕೊನೆಗೊಳ್ಳುವುದು ಅನುಮಾನ. ಅದೇನೇ ಇರಲಿ, ನಮ್ಮ ನೆರೆಯ ರಾಷ್ಟ್ರ ಮ್ಯಾನ್ಮಾರ್‍ನಲ್ಲಿ ಶಾಂತಿ ಸ್ಥಾಪನೆಯಾಗಲಿ. ಪ್ರಜಾಪ್ರಭುತ್ವ ಮರುಕಳಿಸಲಿ ಎಂಬುದು ನಮ್ಮ ಹಾರೈಕೆ. 









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹುಲಿಗೆಮ್ಮ ದೇವಿಯ ಭಕ್ತರಿಗೆ ಬಯಲೇ ಶೌಚಾಲಯ

 ಹುಣ್ಣಿಮೆಗೊಮ್ಮೆ ಲಕ್ಷ, ಲಕ್ಷ ಭಕ್ತರು, ವಾರಕ್ಕೊಮ್ಮೆ 50-60 ಸಾವಿರ ಭಕ್ತರು, ಜಾತ್ರೆಯಲ್ಲಿ ಐದಾರು ಲಕ್ಷ ಭಕ್ತರು ಸೇರುವ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲ...