ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದ ಸುಮಂತನಿಗೆ ಜೀವನ ನಡೆಸುವುದಕ್ಕೇನೂ ತೊಂದರೆ ಇರಲಿಲ್ಲ. ಹಿಂದಿಲ್ಲ, ಮುಂದಿಲ್ಲ, ತಂದೆ, ತಾಯಿಗೆ ಒಬ್ಬನೇ ಮಗ. ಮನೆಯಲ್ಲಿ ಪಿತ್ರಾರ್ಜಿತವಾಗಿಯೇ ಬಂದ ಸಾಕಷ್ಟು ಆಸ್ತಿ ಇತ್ತು. ಎರಡೂವರೆ ಎಕರೆ ಅಡಿಕೆ ತೋಟ, ಎರಡು ಎಕರೆ ಗದ್ದೆ, ಅರ್ಧ ಎಕರೆಯಷ್ಟು ವ್ಯಾಪ್ತಿಯಲ್ಲಿ ಹರಡಿದ ತೆಂಗಿನ ಪ್ಲಾಟ್ ಆದಾಯಕ್ಕೆ ಬರಪೂರ ಕಾಣಿಕೆ ನೀಡುತ್ತಿದ್ದವು. ಮಲೆನಾಡಿನ, ಅಚ್ಚಹಸಿರಿನ ಹಸಿರು ತೋಪುಗಳ ನಡುವೆ ಬೀಡು ಬೀಸಾಗಿ ಕಟ್ಟಲಾದ, ವಿಶಾಲವಾದ 2 ಹಜಾರದ ಹೆಂಚಿನ ಮನೆಯದು. ಮನೆಯಲ್ಲಿ ಎಲ್ಲವೂ ಅಚ್ಚುಕಟ್ಟು, ಆಧುನಿಕ ಜೀವನ ಶೈಲಿಗೆ ಹೊಂದಿಕೆಯಾಗುವ ಎಲ್ಲಾ ಅನುಕೂಲತೆಗಳೂ ಮನೆಯಲ್ಲಿದ್ದವು. ಓಡಾಡಲು ಕಾರು, ಬೈಕ್, ಫ್ರಿಜ್, ವಾಷಿಂಗ್ ಮಷಿನ್, ಟಿವಿ, ಮೊಬೈಲ್ ನೆಟ್‍ವರ್ಕ್ ಸಂಪರ್ಕ... ಸೇರಿದಂತೆ ಯಾವ ಅನುಕೂಲಕ್ಕೂ ಕೊರತೆ ಇರಲಿಲ್ಲ. ಹಾಲು, ಮೊಸರು, ತರಕಾರಿ, ಹಣ್ಣು ಸೇರಿದಂತೆ ದಿನನಿತ್ಯ ಬೂರಿ ಭೋಜನದ ವ್ಯವಸ್ಥೆಯೇ ಇರುತ್ತಿತ್ತು.
ಬಿ.ಕಾಂ ಪದವಿ ಮುಗಿಸಿ, ಎಂಬಿಎ ಮಾಡಿದ್ದ ಸುಮಂತ, ಬೆಂಗಳೂರಿನಲ್ಲಿ, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಎರಡ್ಮೂರು ವರ್ಷ ನೌಕರಿ ಮಾಡಿದ್ದ. "ಸುಮಂತ, ಈ ನೌಕರಿ, ಆ ಬೆಂಗಳೂರಿನ ಜಂಜಾಟ...ಇದೆಲ್ಲಾ ನಿಂಗೆ ಯಾಕಪ್ಪ. ಮನೇಲಿ ಬೇಕಾದಷ್ಟು ಆಸ್ತಿ ಇದ್ದು. ಸಂಬಳಕ್ಕಾಗಿ ಯಾವುದೋ ಕಂಪನಿಯಲ್ಲಿ, ಅದ್ಯಾವನೋ ಕೈಕೆಳಗೆ, ಬೇರೆ ಯಾರಿಗೋಸ್ಕರನೋ ದುಡಿದ ಬದಲು, ನಿನ್ನದೇ ಮನೇಲಿ, ನೀನೇ ಯಜಮಾನನಾಗಿ ದುಡಿದು ತಿನ್ನದು ಒಳ್ಳೆದಲ್ದನ' ಎಂದು ತಂದೆ ಹೇಳಿದಾಗ, ಸುಮಂತನಿಗೂ ಹೌದು ಅನ್ನಿಸ್ತು. ಮನುಷ್ಯ, ತಾನು ಮನುಷ್ಯ ಎನ್ನುವುದನ್ನೇ ಮರೆತು, ಹಣವೇ ಬದುಕು, ಆಫೀಸೇ ಜಗತ್ತು, ಈ ದೇಹವೆಂಬುದು ಆ ದೇವ ನಿರ್ಮಿಸಿದ ಯಂತ್ರ ಎಂದುಕೊಂಡೇ ಬೆಂಗಳೂರಲ್ಲಿ ಕೆಲಸ ಮಾಡುತ್ತಾ, ಯಾಂತ್ರಿಕವಾಗಿ ಬದುಕುವುದಕ್ಕಿಂತ ಹಳ್ಳಿಯ ಸುಖಜೀವನವೇ ಲೇಸು ಎನ್ನುತ್ತಾ ಮನೆಯ ಹಾದಿ ತುಳಿದಿದ್ದ. ರಾಜನಂತೆ ಜೀವನ ಸಾಗಿಸುತ್ತಿದ್ದ.
ಸುಮಂತನಿಗೆ 26 ವರ್ಷ ತುಂಬುತ್ತಿದ್ದಂತೆ, ಮಗನಿಗೆ ಮದುವೆ ಮಾಡಲು ಹೆಣ್ಣು ಹುಡುಕತೊಡಗಿದ ಸುಮಂತನ ತಂದೆ ಗಣಪಯ್ಯ. ಸುಮಂತನಿಗೆ ಮನಸ್ಸಲ್ಲಿ ಅದೇನೋ ಪುಳಕ. ಇಷ್ಟು ದಿವಸ ಒಬ್ಬಂಟಿಯಾಗಿ, ಹಾಯಾಗಿ, ಮನಸ್ಸಿಗೆ ಬಂದಂತೆ ತಿರುಗಾಡಿಕೊಂಡು ಇರುತ್ತಿದ್ದ ತನ್ನ ಬಾಳಿಗೆ, ಹೆಣ್ಣೊಬ್ಬಳು ಬರುತ್ತಿದ್ದಾಳೆ ಎಂಬ ಯೋಚನೆಯೇ ಆಹ್ಲಾದದ ಅನುಭವ ನೀಡುತ್ತಿತ್ತು. ಬಾಳಸಂಗಾತಿಯ ಬಗ್ಗೆ ತನ್ನದೇ ಆದ ಕನಸನ್ನು ಕಾಣುತ್ತಾ ದಿನದೂಡತೊಡಗಿದ.
ದಿನಗಳು ಉರುಳತೊಡಗಿದವು. ಋತುಗಳು ಜಾರತೊಡಗಿದವು. ವರುಷಗಳು ಕಳೆದು ಹೋದವು. ಆದರೆ, ಸುಮಂತನಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರಲಿಲ್ಲ. ಯಾರನ್ನು ಕೇಳಿದ್ರು, "ಎಮ್ಮನೆ ಕೂಸಿಗೆ ಮಾರಾಯಾ, ಮನೇಲಿ, ಕೃಷಿ ಮಾಡಿಕೊಂಡು ಇಪ್ಪ ಮಾಣಿ ಬ್ಯಾಡ್ದಡ. ತನ್ಗೆ ಬೆಂಗ್ಳೂರಲ್ಲಿ ನೌಕರಿ ಇದ್ದವ್ನೆ ಬೇಕು' ಹೇಳ್ತು. "ನಾವೂ ತೀರಾ ಒತ್ತಾಯ ಮಾಡಲೆ ಆಗ್ತನ. ಮತೆ, ಎಮ್ಮನೆ ಕೂಸು ಹೇಳದ್ರಲ್ಲೂ ಕರೆಕ್ಟ್ ಇದ್ದಾ. ಈ ಜಮೀನು ನಂಬ್ಕಂಡು, ಈಗಿನ ಕಾಲ್ದಲ್ಲಿ ಜೀವ್ನ ಮಾಡಲೆ ಆಗ್ತನ. ಆಳ್ಗ ಸಿಗ್ತ್ವಿಲ್ಲೆ. ನಮ್ಮತ್ರ ಕೆಲ್ಸ ಮಾಡಲೆ ಆಗ್ತಿಲ್ಲೆ. ಒಟ್ನಲ್ಲಿ ನಾವು ಇಪ್ಪಷ್ಟು ದಿವ್ಸ ನೋಡ್ಕಂಡು ಹೋಪ್ದು. ಕೊನೆಗೆ ಒಂದಿವ್ಸ ಜಮೀನು ಕೊಟ್ಟಿಕ್ಕೆ ನಾವೂ ಬೆಂಗ್ಳೂರು ಬಸ್ಸ ಹತ್ತದೆಯಾ. ಮತ್ಯಂತ ಮಾಡಲೂ ಬರ್ತಿಲ್ಲೆ' ಎನ್ನುವ ಉದ್ಘಾರವೇ ಹೆಣ್ಣುಮಕ್ಕಳ ತಂದೆ-ತಾಯಿ ಬಾಯಲ್ಲಿ ಬರ್ತಿತ್ತು.
ಸುಮಂತನಿಗೂ ನೋಡಿ, ನೋಡಿ ಬೇಸರವಾಗ್ತಾ ಬಂತು. ನೌಕರಿ ಮಾಡುತ್ತಿರುವ ತನ್ನ ವರಗೆಯ ಯುವಕರಿಗೆ ಅದಾಗಲೇ ಮದುವೆಯಾಗಿ ಮಕ್ಕಳಾದರೂ, ತನಗೆ ಕಂಕಣ ಬಲ ಕೂಡಿ ಬರದ್ದಕ್ಕೆ ಮನಸ್ಸು ನೋಯುತ್ತಿತ್ತು.
ಅದೊಂದು ದಿನ ಸುಮಂತ, ಬೆಂಗಳೂರಿನಲ್ಲಿರುವ ತನ್ನ ಗೆಳೆಯನಿಗೆ ಪತ್ರ ಬರೆದ. "ಗೆಳೆಯಾ, ನನಗೆ ಮದುವೆಯಾಗಲೇ ಬೇಕು ಅನ್ನಿಸ್ತಾ ಇದೆ. ಹಾಗಾಗಿ, ಮತ್ತೆ ಬೆಂಗಳೂರಿಗೆ ಬಂದು, ನೌಕರಿ ಮಾಡುವ ಮನಸ್ಸು ಮಾಡುತ್ತಿದ್ದೇನೆ. ದಯವಿಟ್ಟು ಸಹಾಯ ಮಾಡು' ಎಂದು ಪತ್ರದಲ್ಲಿ ತಿಳಿಸಿದ. "ಏ ಅದಕ್ಕೇನಂತೆ, ಬಾ, ಗೆಳೆಯಾ, ಬೆಂಗಳೂರಲ್ಲಿ ಊರವರಿಗಿಂತ ಪರ ಊರಿನವರೇ ಹೆಚ್ಚು ಎಂಬುದು ನಿನಗೆ ಗೊತ್ತಲ್ಲ. ಇಲ್ಲಿ ಬಂದರೆ, ಬದುಕು ಕಷ್ಟವಾಗಬಹುದು. ಆದರೆ, ನೌಕರಿಯೂ ಸಿಗುತ್ತೆ, ಹೆಣ್ಣು ಮಕ್ಕಳ ಮನಸ್ಸೂ ನಿನ್ನತ್ತ ಒಲಿಯುತ್ತೆ' ಎನ್ನುತ್ತಾ ಗೆಳೆಯನನ್ನು ಆಹ್ವಾನಿಸಿದ.
ಮರುದಿನವೇ ಸುಮಂತ ಬೆಂಗಳೂರಿನ ಬಸ್ಸು ಹತ್ತಿದ. "ಮದುವೆ ಮಾಡ್ಕಂಡು, ಮನಿಗೆ ಬತ್ನಾ ಅಪ್ಪಯ್ಯಾ' ಎನ್ನುತ್ತಾ ತಂದೆ-ತಾಯಿಗೆ ನಮಸ್ಕರಿಸಿದ. "ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿವುದೇ ಜೀವನ' ಎಂಬ ಅಡಿಗರ ಮಾತುಗಳನ್ನು ಗುನುಗುತ್ತಾ, ಬಸ್ಸಿನ ಸೀಟಿಗೆ ಒರಗಿ ನಿದ್ದೆಗೆ ಜಾರಿದ.
https://www.youtube.com/watch?v=LoPOl1v41g8
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ