ಭಾನುವಾರ, ಮಾರ್ಚ್ 7, 2021

ಇಲ್ಲಿನ ಹನುಮನ ಪ್ರತಿಮೆಯಲ್ಲಿದೆ 2 ಕೋಟಿ ರಾಮನಾಮ

      


 ಇದೊಂದು ವಿಶ್ವವಿಖ್ಯಾತ ಭಗವಾನ್ ಹನುಮನ ದೇವಾಲಯ. ಇಲ್ಲಿ ಭಗವಾನ್ ರಾಮನ ರಾಮನಾಮವೇ ವಿಶಿಷ್ಟ. ಇಲ್ಲಿನ ಹನುಮನ ವಿಗ್ರಹದಲ್ಲಿದೆ 2 ಕೋಟಿ ರಾಮನಾಮ. ಅಷ್ಟೇ ಅಲ್ಲ, ಇಲ್ಲಿನ ಶ್ರೀಮಾತಾ ಭಗವತಿ ಮಂದಿರ ಕೂಡ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ.

        ಈ ವಿಶಿಷ್ಟ ದೇವಾಲಯ ಇರುವುದು ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ಖುರ್ಜಾ ತಹಸೀಲ್‍ನಲ್ಲಿ. ವಾಸ್ತವವಾಗಿ ಇದು ಭಗವತಿ ದೇವಾಲಯ. ಆದರೂ, ಈ ದೇವಾಲಯ ನವದುರ್ಗಾಶಕ್ತಿ ದೇವಸ್ಥಾನವೆಂದೇ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿನ ಭಗವತಿ ದೇವಿಯ ವಿಗ್ರಹದಲ್ಲಿ ತಾಯಿ ಭವಾನಿಯ 9 ರೂಪಗಳಿವೆ. ಈ ಭವ್ಯವಾದ ವಿಗ್ರಹ ಅಷ್ಟಧಾತು ಲೋಹದಿಂದ ನಿರ್ಮಿತವಾಗಿದ್ದು, 27 ಸಂಪುಟಗಳು ಹಾಗೂ 18 ಬಾಹುಗಳನ್ನು ಹೊಂದಿದೆ. 14 ಅಡಿ ಎತ್ತರ ಹಾಗೂ 11 ಅಡಿ ಅಗಲದ ದೇವಿಯ ಭವ್ಯ ವಿಗ್ರಹವಿದು. ತಾಯಿ ಜಗದಾಂಬೆ ಇಲ್ಲಿ ರಥದ ಮೇಲೆ ಕಮಲಾಸನದ ಭಂಗಿಯಲ್ಲಿ ವಿರಾಜಮಾನಳಾಗಿದ್ದಾಳೆ. ದೇವಿಯ ಬಲಭಾಗದಲ್ಲಿ ಹನುಮಾನ್ ಹಾಗೂ ಎಡಭಾಗದಲ್ಲಿ ಭೈರೋಜಿ ವಿಗ್ರಹಗಳಿವೆ. ದೇವ ಗಣೇಶ, ಈ ರಥದ ಸಾರಥಿಯಾಗಿದ್ದಾನೆ. ಶಂಕರ, ರಥದ ಮೇಲೆ ವಿರಾಜಮಾನನಾಗಿದ್ದಾನೆ. 1993ರಲ್ಲಿಈ ದೇವಾಲಯವನ್ನು ನಿರ್ಮಿಸಲಾಯಿತು. 1995ರ ಫೆ.13ರಂದು ದೇವಾಲಯದಲ್ಲಿ ದುರ್ಗಾದೇವಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. 

        2 ಸಾವಿರ ಚದರಡಿ ವಿಸ್ತೀರ್ಣದಲ್ಲಿ ನಿರ್ಮಿತವಾಗಿರುವ ಈ ದೇವಾಲಯ, ವಿಶಿಷ್ಟ ಶಿಲ್ಪಕಲೆಯ ಮಾದರಿಯನ್ನು ಹೊಂದಿದೆ. ದೇವಾಲಯ 30 ಅಡಿ ಎತ್ತರವಿದ್ದರೆ, ಇದರ ಶಿಖರ 60 ಅಡಿ ಎತ್ತರವಿದೆ.

        ದೇವಾಲಯದ ಪ್ರಾಕಾರದಲ್ಲಿ ಒಂದು ಸ್ತಂಭವಿದ್ದು, ಇದನ್ನು ಮನೋಕಾಮನ ಸ್ತಂಭ ಎಂದು ಕರೆಯುತ್ತಾರೆ. ಇಲ್ಲಿಗೆ ಬರುವ ಭಕ್ತರು ದೇವಾಲಯದ ಆವರಣದಲ್ಲಿರುವ ಈ ಸ್ತಂಭಕ್ಕೆ ಚುನ್ರಿಯನ್ನು ಗಂಟು ಹಾಕಿ, ದೇವಾಲಯಕ್ಕೆ 108 ಸಲ ಪ್ರದಕ್ಷಿಣೆ ಹಾಕುತ್ತಾರೆ. ಹೀಗೆ ಮಾಡಿದರೆ, ತಮ್ಮ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ, ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿ ಹರಕೆ ಹೊತ್ತುಕೊಳ್ಳುವುದು ಸಾಮಾನ್ಯ.


        ಬೆಳಗ್ಗೆ 4 ಗಂಟೆಗೆ ದೇವಾಲಯದ ಬಾಗಿಲನ್ನು ತೆರೆದು ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. 5 ಗಂಟೆಗೆ ಮಹಾಮಂಗಳಾರತಿ ನಡೆಯುತ್ತದೆ. ಮತ್ತೆ ಸಂಜೆ 4 ಗಂಟೆಗೆ ಬಾಗಿಲು ತೆರೆದು, 7 ಗಂಟೆಗೆ ಮಂಗಳಾರತಿ ನೆರವೇರಿಸಲಾಗುತ್ತದೆ. ನವರಾತ್ರಿಯಲ್ಲಿ ಇಲ್ಲಿ ನಡೆಯುವ ಪೂಜೆ ತುಂಬಾ ವಿಶಿಷ್ಟವಾದುದು. ಈ ವೇಳೆ, ಪ್ರತಿದಿನ ದೇವಿಗೆ 56 ಬಗೆಯ ಖಾದ್ಯಗಳನ್ನು ಸಮರ್ಪಿಸಲಾಗುತ್ತದೆ. ಅಷ್ಟಮಿಯ ದಿವಸ ತಾಯಿಗೆ 10 ಕ್ವಿಂಟಾಲ್‍ಗಳಷ್ಟು ಹಲ್ವವನ್ನು ನೈವೇದ್ಯವಾಗಿ ಸಮರ್ಪಿಸಲಾಗುತ್ತದೆ. 


ಇಲ್ಲಿದೆ ಹನುಮನ ವಿಗ್ರಹ:

        ಈ ದೇವಾಲಯದ ಸಂಕೀರ್ಣದ ಮೊದಲ ಅಂತಸ್ತಿನಲ್ಲಿ ಭಗವಾನ್ ಹನುಮನ ಭವ್ಯ ಮೂರ್ತಿಯಿದೆ. 16 ಅಡಿಗಳಷ್ಟು ಎತ್ತರದ ಈ ಹನುಮನ ವಿಗ್ರಹದ ಎದೆಯಲ್ಲಿ ಭಗವಾನ್ ರಾಮ, ಲಕ್ಷ್ಮಣ ಮತ್ತು ಸೀತಾಮಾತೆಯ ಮೂರ್ತಿಗಳಿವೆ. ಈ ಹನುಮನ ಮೂರ್ತಿಯಲ್ಲಿ ಎರಡು ಕೋಟಿ ರಾಮನಾಮ ಇರುವುದು ವಿಶೇಷ. ವಿಶ್ವದಲ್ಲಿಯೇ ಅತಿಹೆಚ್ಚು ರಾಮನಾಮ ಹೊಂದಿರುವ ಹನುಮನ ವಿಗ್ರಹವಿದು. 

        ಹರಿಹರ ಬಾಬಾರವರ ನೇತೃತ್ವದಲ್ಲಿ 1995ರಿಂದ 1997ರವರೆಗೆ ಈ ದೇವಾಲಯದಲ್ಲಿ ಅಹೋರಾತ್ರಿ, ಅಂದರೆ ಹಗಲು ಮತ್ತು ರಾತ್ರಿ ನಿರಂತರವಾಗಿ "ಹರೆ ರಾಮ, ಹರೆ ಕೃಷ್ಣ' ಮಂತ್ರ ಜಪಿಸಲಾಯಿತು. ಈ ಸಮಯದಲ್ಲಿ ಭಕ್ತರು ರಾಮನಾಮವನ್ನು ಬರೆದರು. ಬಳಿಕ, ಈ ಹನುಮನ ವಿಗ್ರಹವನ್ನು ನಿರ್ಮಿಸಿದಾಗ 2 ಕೋಟಿ ರಾಮನಾಮವನ್ನು ಸೇರಿಸಲಾಯಿತು ಎನ್ನುತ್ತಾರೆ ಭಕ್ತರು. ಇದಲ್ಲದೆ, ದೇವಾಲಯದ ಸಂಕೀರ್ಣದ ಬೇಸ್‍ಮೆಂಟ್‍ನಲ್ಲಿರುವ ರಾಧಾಕೃಷ್ಣ ಮಂದಿರ ಕೂಡ ಭಕ್ತರ ಮನಸೂರೆಗೊಳ್ಳುತ್ತದೆ. 


ದೆಹಲಿಯಿಂದ 80 ಕಿ.ಮೀ.ದೂರದಲ್ಲಿದೆ ಖುರ್ಜಾ:

        ರಾಷ್ಟ್ರ ರಾಜಧಾನಿ ದೆಹಲಿಯಿಂದ 80 ಕಿ.ಮೀ. ದೂರದಲ್ಲಿದೆ ಈ ಖುರ್ಜಾ. ಜಿಲ್ಲಾ ಕೇಂದ್ರ ಬುಲಂದ್ ಶಹರ್‍ನಿಂದ 25 ಕಿ.ಮೀ. ದೂರವಿದೆ. ದೆಹಲಿಯಿಂದ ಅಲಿಗಢಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 91ಕ್ಕೆ ಹೊಂದಿಕೊಂಡಿದ್ದು, ರೈಲು ಮತ್ತು ರಸ್ತೆಯ ಮೂಲಕ ಸುಲಭವಾಗಿ ಈ ದೇವಾಲಯಕ್ಕೆ ತೆರಳಬಹುದು. ರೈಲಿನ ಮೂಲಕ ತೆರಳುವುದಾದರೆ, ಖುರ್ಜಾ ಜಂಕ್ಷನ್‍ನಲ್ಲಿ ಇಳಿದುಕೊಳ್ಳಬೇಕು.                    ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಅತಿ ವಿಶಿಷ್ಟತೆಯ, ಶಕ್ತಿ ದೇವತೆಯ ಸನ್ನಿಧಾನವಿದು.


https://www.youtube.com/watch?v=oknoDV8uOhU




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹುಲಿಗೆಮ್ಮ ದೇವಿಯ ಭಕ್ತರಿಗೆ ಬಯಲೇ ಶೌಚಾಲಯ

 ಹುಣ್ಣಿಮೆಗೊಮ್ಮೆ ಲಕ್ಷ, ಲಕ್ಷ ಭಕ್ತರು, ವಾರಕ್ಕೊಮ್ಮೆ 50-60 ಸಾವಿರ ಭಕ್ತರು, ಜಾತ್ರೆಯಲ್ಲಿ ಐದಾರು ಲಕ್ಷ ಭಕ್ತರು ಸೇರುವ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲ...