ನಮಗೆಲ್ಲಾ ಗೊತ್ತಿರುವಂತೆ ದೇವಾಲಯಗಳಲ್ಲಿ ದೀಪ ಬೆಳಗಿಸಲು ಎಣ್ಣೆ ಅಥವಾ ತುಪ್ಪವನ್ನು ಬಳಸಲಾಗುತ್ತದೆ. ಆದರೆ, ಇಲ್ಲೊಂದು ವಿಶೇಷ ದೇವಾಲಯವಿದೆ. ಈ ದೇವಾಲಯದಲ್ಲಿ ನೀರಿನಿಂದ ಉರಿಯುತ್ತೆ ದೇವರ ದೀಪ. ಈ ದೇವಾಲಯದ ರಹಸ್ಯ ಕೇಳಿದರೆ ನಿಮಗಿದು ಮೂಢನಂಬಿಕೆ ಎನಿಸಬಹುದು. ಆದರಿದು ಮೂಢನಂಬಿಕೆಗೂ ಮೀರಿದ ರಹಸ್ಯ, ಪವಾಡ.
ಮಧ್ಯಪ್ರದೇಶದಲ್ಲಿನ ದೇವಾಲಯವಿದು:
"ಗಡಿಯಾಘಾಟ್ ವಾಲಿ ಮಾತಾಜಿ' ಎಂದೇ ಪ್ರಸಿದ್ಧಿಯಾಗಿರುವ ಈ ದೇವಾಲಯ ಇರುವುದು ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ. ಕಾಳಿ ಸಿಂಧ್ ನದಿಯ ದಡದಲ್ಲಿನ ಗಾಡಿಯಾ ಗ್ರಾಮದ ಬಳಿ ಈ ದೇವಾಲಯವಿದೆ. ಇದು ಭಗವತಿ ದೇವಾಲಯ. ಈ ಮಂದಿರ 'ಗಡಿಯಾಘಾಟ್ ದೇವಿ' ಎಂದೇ ಜನಪ್ರಿಯ. ಹಿಂದೆಲ್ಲಾ ಈ ದೇವಾಲಯದಲ್ಲಿ ಎಣ್ಣೆ ಹಾಕಿಯೇ ದೀಪ ಬೆಳಗಿಸಲಾಗುತ್ತಿತ್ತು.
ಸರಿ ಸುಮಾರು 5 ವರ್ಷಗಳ ಹಿಂದಿನ ಕಥೆಯಿದು. ಈ ದೇವಾಲಯದ ಪುರೋಹಿತರ ಕನಸಿನಲ್ಲಿ ಕಾಣಿಸಿಕೊಂಡ ದೇವಿ, ಕಾಳಿ ನದಿಯ ನೀರಿನಿಂದ ದೀಪ ಹಚ್ಚುವಂತೆ ಹೇಳಿದಳಂತೆ. ಅದರಂತೆ, ಮರುದಿನ ಮುಂಜಾನೆ ಬೇಗ ಎದ್ದು ಪುರೋಹಿತರು ಹರಿಯುವ ಕಾಳಿ ಸಿಂಧ್ ನದಿಯಿಂದ ನೀರನ್ನು ತುಂಬಿಸಿ, ದೀಪಕ್ಕೆ ಸುರಿದರಂತೆ. ಹತ್ತಿಯ ಬತ್ತಿಯನ್ನು ದೀಪದಲ್ಲಿಟ್ಟು ಬತ್ತಿಗೆ ದೀಪ ಹಚ್ಚುತ್ತಿದ್ದಂತೆ ದೀಪ ಉರಿಯಲಾರಂಭಿಸಿತಂತೆ.
ಸುಮಾರು 15 ದಿನಗಳ ನಂತರ, ಪುರೋಹಿತರು ಗ್ರಾಮಸ್ಥರಿಗೆ ಈ ಬಗ್ಗೆ ಹೇಳಿದಾಗ, ಮೊದಲಿಗೆ ಗ್ರಾಮಸ್ಥರು ನಂಬಲಿಲ್ಲವಂತೆ. ಆದರೆ, ಎಲ್ಲರ ಸಮ್ಮುಖದಲ್ಲೇ ದೀಪಕ್ಕೆ ನೀರು ಹಾಕಿ ಬತ್ತಿಗೆ ದೀಪ ಹಚ್ಚುತ್ತಿದ್ದಂತೆ ಅದು ಉರಿಯಲು ಆರಂಭಿಸಿತಂತೆ. ಇದು ಗ್ರಾಮಸ್ಥರಿಗೂ ಅಚ್ಚರಿ ಹುಟ್ಟಿಸಿತು. ಅಂದಿನಿಂದ ಈ ದೇವಾಲಯದಲ್ಲಿ ಕಾಳಿ ಸಿಂಧ್ ನದಿಯ ನೀರಿನಿಂದ ಮಾತ್ರ ದೀಪ ಉರಿಸಲಾಗುತ್ತದೆ. ಅಂದಿನಿಂದ ಭಕ್ತರು ಈ ದೇವಾಲಯಕ್ಕೆ ಬರುವಾಗ ದೀಪಕ್ಕೆ ಎಣ್ಣೆಯನ್ನು ತರುವುದಿಲ್ಲ. ಬದಲಾಗಿ, ಕಾಳಿ ಸಿಂಧ್ ನದಿಯ ನೀರನ್ನು ತಂದು ದೇವರ ದೀಪಕ್ಕೆ ಸಮರ್ಪಿಸುತ್ತಾರೆ.
ದೀಪಕ್ಕೆ ಈ ನೀರನ್ನು ಹಾಕಿದಾಗ ಅದು ಜಿಗುಟಾಗುತ್ತದೆ. ಬಳಿಕ, ದೀಪ ಉರಿಯಲು ಆರಂಭಿಸುತ್ತದೆ. ದೀಪದಲ್ಲಿ ಈ ನದಿಯ ನೀರನ್ನು ಸುರಿದಾಗ ಅದು ಸ್ನಿಗ್ಧತೆಯ ದ್ರವವಾಗಿ ಬದಲಾಗುವ ಕಾರಣ ದೀಪ ಉರಿಯಲು ಆರಂಭವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.
ವಿಶೇಷವೆಂದರೆ, ಇಲ್ಲಿ ನೀರಿನ ದೀಪವನ್ನು ಭಗವತಿ ದೇವಸ್ಥಾನದ ಒಳಗೆ ಬೆಳಗಿದರೆ ಮಾತ್ರ ಅದು ಉರಿಯುತ್ತದೆ. ದೇವಾಲಯದ ಹೊರಗೆ ಬೆಳಗಲು ಹೋದರೆ ಅದು ಉರಿಯುವುದಿಲ್ಲ. ಅಲ್ಲದೆ, ಈ ದೀಪದ ಜ್ವಾಲೆಯಲ್ಲಿ ಸುಡುವ ನೀರು ಮಳೆಗಾಲದಲ್ಲಿ ಸುಡುವುದಿಲ್ಲ. ಅಷ್ಟಕ್ಕೂ, ಕಾಳಿ ಸಿಂಧ್ ನದಿಯ ನೀರಿನ ಮಟ್ಟ ಮಳೆಗಾಲದಲ್ಲಿ ಏರುತ್ತಿರುವುದರಿಂದ ಈ ದೇವಾಲಯ ನದಿಯ ನೀರಿನಲ್ಲಿ ಮುಳುಗಿರುತ್ತದೆ. ಇದರಿಂದಾಗಿ ಮಳೆಗಾಲದಲ್ಲಿ ಇಲ್ಲಿ ಪೂಜೆ ಮಾಡಲು ಸಾಧ್ಯವಾಗುವುದಿಲ್ಲ.
ಆದರೆ, ಶಾರ್ದಿಯಾ ನವರಾತ್ರಿಯ ಮೊದಲ ದಿನವಾದ ಘಟಸ್ಥಾಪನಾ ದಿನದಂದು ನದಿಯ ನೀರಿನಿಂದ ದೇವರ ದೀಪವನ್ನು ಮತ್ತೆ ಬೆಳಗಲಾಗುತ್ತದೆ. ನವರಾತ್ರಿಯಿಂದ ಮುಂದಿನ ವರ್ಷದ ಮಳೆಗಾಲದವರೆಗೆ ಇಲ್ಲಿ ದೀಪ ಉರಿಯುತ್ತಿರುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ