ಸೋಮವಾರ, ಮಾರ್ಚ್ 15, 2021

ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯವಿದು

      


 
ಇದು ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ. ಆದರೆ, ಈ ದೇವಾಲಯ ಇರುವುದು ಭಾರತದಲ್ಲಲ್ಲ, ಬದಲಿಗೆ ಕಾಂಬೋಡಿಯಾದಲ್ಲಿ. ಅಲ್ಲದೆ, ಇದೀಗ ಇದು ಕೇವಲ ಹಿಂದೂ ದೇವಾಲಯವಾಗಿ ಮಾತ್ರ ಉಳಿದಿಲ್ಲ. ಈ ದೇವಾಲಯವನ್ನು ಬೌದ್ಧ ದೇವಾಲಯವನ್ನಾಗಿ ಪರಿವರ್ತಿಸಲಾಗಿದ್ದು, ಹಿಂದೂ ಮತ್ತು ಬೌದ್ಧ ಧರ್ಮದ ಅನುಯಾಯಿಗಳು ಈ ದೇವಾಲಯದ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. 

        ಭಾರತದಿಂದ ಸುಮಾರು 5 ಸಾವಿರ ಕಿ.ಮೀ. ದೂರದಲ್ಲಿರುವ ದೇಶ ಕಾಂಬೋಡಿಯಾ. ಆಗ್ನೇಯ ಏಷ್ಯಾದ ಪುಟ್ಟ ರಾಷ್ಟ್ರವಿದು. ಬಹಳ ಹಿಂದೆ ಕಾಂಬೋಡಿಯಾವನ್ನು "ಕಾಂಬೋಜಾ' ಎಂದು ಕರೆಯಲಾಗುತ್ತಿತ್ತು. ವಿಶ್ವದ ಅತಿ ದೊಡ್ಡ ಹಿಂದೂ ದೇಗುಲ ಇರುವುದು ಇದೇ ಕಾಂಬೋಡಿಯಾದಲ್ಲಿ. ಅದುವೇ ಇಲ್ಲಿನ "ಅಂಕೂರ್ ವಾಟ್' ದೇವಾಲಯ. ಒಂದು ಕಾಲದಲ್ಲಿ ಇಲ್ಲಿ ಹಿಂದೂ ಸಾಮ್ರಾಜ್ಯವಿತ್ತು ಎಂಬುದಕ್ಕೆ ಈ ದೇವಾಲಯ ಪ್ರತ್ಯಕ್ಷ ಸಾಕ್ಷಿ.

        12ನೇ ಶತಮಾನದ ಪೂರ್ವಾರ್ಧದಲ್ಲಿ (ಅಂದರೆ, 1113-1150ರಲ್ಲಿ) ಖಮೇರ್ ವಂಶದ ರಾಜ 2ನೇ ಸೂರ್ಯವರ್ಮನ್ ಈ ಭವ್ಯ ದೇಗುಲವನ್ನು ನಿರ್ಮಿಸಿದ. ಅಂದಿನ ಕಾಲದಲ್ಲಿ ಖಮೇರ್ ಸಾಮ್ರಾಜ್ಯ, ಏಷ್ಯಾದ್ಯಂತ ತನ್ನ ಪ್ರಾಬಲ್ಯವನ್ನು ಮೆರೆದಿತ್ತು. ಅಂದಿನ ಖಮೇರ್ ರಾಜವಂಶಸ್ಥರಿಗೂ, ದಕ್ಷಿಣ ಭಾರತದ ಚೋಳರಿಗೂ ನಿಕಟ ಬಾಂಧವ್ಯವಿತ್ತು. ಖಮೇರ್ ಸಾಮ್ರಾಜ್ಯದ ರಾಜಧಾನಿ ಯಶೋಧರಾಪುರದಲ್ಲಿ ಈ ದೇವಾಲಯ ನಿರ್ಮಾಣವಾಯಿತು. ಆರಂಭದಲ್ಲಿ ಇದು ಹಿಂದೂಗಳ ಆರಾಧ್ಯ ದೈವ ವಿಷ್ಣುವಿನ ದೇಗುಲವಾಗಿತ್ತು. ವಾಸ್ತವವಾಗಿ ಖಮೇರ್ ರಾಜವಂಶಸ್ಥರು ಶೈವ ಪಂಥದ ಅನುಯಾಯಿಗಳು. ಅಂದರೆ, ಶಿವನ ಭಕ್ತರಾಗಿದ್ದರು. ಆದರೆ, ಎರಡನೇ ಸೂರ್ಯವರ್ಮನ್ ಈ ದೇವಾಲಯವನ್ನು ವಿಷ್ಣುವಿಗೆ ಸಮರ್ಪಿಸಿದ. ಆರಂಭದಲ್ಲಿ ಈ ದೇವಾಲಯವನ್ನು "ವರ ವಿಷ್ಣುಲೋಕ್' ಎಂದು ಕರೆಯಲಾಗುತ್ತಿತ್ತು. ಅಲ್ಲದೆ, ಇಲ್ಲಿ ವಿಷ್ಣುವಿನ ಜತೆ ಮಹೇಶ್ವರ ಮತ್ತು ಬ್ರಹ್ಮನಿಗೂ ಪೂಜೆ ನಡೆಯುತ್ತಿತ್ತು.

        ಆದರೆ, 12ನೇ ಶತಮಾನದ ಅಂತ್ಯದಲ್ಲಿ ಇದನ್ನು ಬೌದ್ಧ ದೇವಾಲಯವನ್ನಾಗಿ ಪರಿವರ್ತಿಸಲಾಯಿತು. ಅಲ್ಲದೆ, ಯಶೋಧರಾಪುರದ ಹೆಸರು ಅಂಕೂರ್ ವಾಟ್ ಎಂದಾಯಿತು. ಸಂಸ್ಕøತದಲ್ಲಿ ಅಂಕೂರ್‍ವಾಟ್ ಎಂದರೆ ದೇವಾಲಯಗಳ ನಗರ ಎಂದರ್ಥ. ಆದಾಗ್ಯೂ, ಇಲ್ಲಿ ಹಿಂದೂ ಮತ್ತು ಬೌದ್ಧ ಧರ್ಮದ ಅನುಯಾಯಿಗಳು ಈ ದೇವಾಲಯದ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಆದರೀಗ ವಿಷ್ಣುವಿಗಿಲ್ಲಿ ನಿತ್ಯ ಪೂಜೆ ನಡೆಯುತ್ತಿಲ್ಲ.

ರಾಷ್ಟ್ರಧ್ವಜದ ಲಾಂಛನ:


        ಅಂಕೂರ್‍ವಾಟ್, ಕಾಂಬೋಡಿಯಾದ ಹೆಮ್ಮೆ, ಪ್ರತಿಷ್ಠೆಯ ಸಂಕೇತ. ಹಾಗಾಗಿಯೇ, ಆ ದೇಶ ಈ ದೇವಾಲಯದ ಫೋಟೋವನ್ನು ತನ್ನ ರಾಷ್ಟ್ರಧ್ವಜದಲ್ಲಿ ಲಾಂಛನವನ್ನಾಗಿ ಬಳಸುತ್ತಿದೆ. ಪ್ರತಿವರ್ಷ ಸುಮಾರು 2 ಮಿಲಿಯನ್ ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. 1992ರಲ್ಲಿ ಯುನೆಸ್ಕೋ ವಿಶ್ವದ ಪಾರಂಪರಿಕ ತಾಣಗಳ ಪಟ್ಟಿಗೆ ಈ ದೇವಾಲಯವನ್ನು ಸೇರಿಸಿದೆ.

402 ಎಕರೆಯಷ್ಟು ವಿಶಾಲವ್ಯಾಪ್ತಿಯಲ್ಲಿದೆ:

        ಬರೋಬ್ಬರಿ 402 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ. 5 ಕಿ.ಮೀ. ಉದ್ದ ಹಾಗೂ 3 ಕಿ.ಮೀ. ಅಗಲದ ಪ್ರಾಂಗಣವನ್ನು ದೇವಾಲಯ ಹೊಂದಿದೆ. ಅಚ್ಚಹಸಿರಿನ ಅರಣ್ಯದ ನಡುವೆ, ಮೇರು ಪರ್ವತದ ಆಕೃತಿಯಲ್ಲಿ, ವಿಶಿಷ್ಟ ಶೈಲಿಯ ಖಮೇರ್ ಹಾಗೂ ದಕ್ಷಿಣ ಭಾರತೀಯ ವಾಸ್ತುಶಿಲ್ಪದಂತೆ ಈ ದೇಗುಲವನ್ನು ನಿರ್ಮಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ, ಮೇರು ಪರ್ವತವೆಂದರೆ, ಅದು ದೇವಾನುದೇವತೆಗಳ ವಾಸಸ್ಥಾನ.

        ದೇಗುಲದ ಮುಖ್ಯ ಗೋಪುರದ ಸುತ್ತ ನಾಲ್ಕು ಉಪಗೋಪುರಗಳಿವೆ. ಮುಖ್ಯ ದೇವಾಲಯದ ಸುತ್ತ 1024 ಮೀಟರ್ ಉದ್ದ, 802 ಮೀಟರ್ ಅಗಲ, 4.5 ಮೀಟರ್ ಎತ್ತರದ ಗೋಡೆಯಿದೆ. ದೇವಾಲಯದ ಸುತ್ತ 30 ಮೀಟರ್‍ಗಳಷ್ಟು ವಿಶಾಲವಾದ ಜಾಗವಿದೆ. ಹಾಗೆಯೇ, ದೇವಾಲಯದ ಸುತ್ತ 190 ಮೀಟರ್ ಆಳದ ನೀರಿನ ಕಂದಕವಿದೆ. ಮೂರು ಪದರಗಳಲ್ಲಿ ಇದರ ತಳಪಾಯವಿದೆ. ಮೊದಲು ಮರಳು, ನಂತರ ಜಲ್ಲಿಕಲ್ಲು, ಅದರ ಮೇಲೆ ಮಣ್ಣು ಹಾಕಿ ತಳಪಾಯವನ್ನು ಗಟ್ಟಿ ಮಾಡಲಾಗಿದೆ. ಈ ಭವ್ಯ ದೇಗುಲ ನಿರ್ಮಿಸಲು ಬರೋಬ್ಬರಿ 37 ವರ್ಷಗಳೇ ಬೇಕಾಯಿತು. ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಈ ದೇಗುಲ ನಿರ್ಮಾಣಕ್ಕೆ ಬಳಸಿಕೊಳ್ಳಲಾಯಿತು. 

      


 
ಈ ದೇವಾಲಯದ ಇನ್ನೊಂದು ವಿಶೇಷವೆಂದರೆ, ಈ ದೇವಾಲಯದ ಮುಖ್ಯದ್ವಾರ ಪಶ್ಚಿಮಕ್ಕೆ ಅಭಿಮುಖವಾಗಿರುವುದು. ಪ್ರತಿನಿತ್ಯದ ಸೂಯಾಸ್ತವು ಈ ದೇವಾಲಯದ ಗರ್ಭಗುಡಿಯ ನಟ್ಟನಡುವೆ ಸಂಭವಿಸುತ್ತದೆ. ಹೀಗಾಗಿ, ಸಂಜೆ, ಸೂರ್ಯನ ತಿಳಿ ಬಿಸಿಲಿನ ರಶ್ಮಿಗಳಿಂದ ದೇವಾಲಯ ಕಂಗೊಳಿಸುವ ಮೂಲಕ, ಇನ್ನಷ್ಟು ಆಕರ್ಷಕವಾಗಿ ಕಾಣಿಸುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಸೂರ್ಯ, ಇಲ್ಲಿನ ದೇವರಿಗೆ ತಲೆಬಾಗುವಂತೆ ಕಾಣಿಸುವ ನಯನ ಮನೋಹರ ದೃಶ್ಯ ನೋಡುಗರ ಮನಸೂರೆಗೊಳ್ಳುತ್ತದೆ. 

        ಮಹಾಭಾರತದಲ್ಲಿ ಬರುವ 56 ದೇಶ ಅಥವಾ ಪ್ರಾಂತ್ಯಗಳ ಪೈಕಿ ಕಾಂಬೋಡಿಯಾ ಕೂಡ ಒಂದಾಗಿತ್ತು ಎಂಬುದು ಇತ್ತೀಚಿನ ಅಧ್ಯಯನಗಳಲ್ಲಿ ತಿಳಿದು ಬಂದಿದೆ. ಇದೀಗ ಈ ದೇವಾಲಯ ಬೌದ್ಧ ಭಿಕ್ಷುಗಳ ಪ್ರಾರ್ಥನಾ ಮಂದಿರವಾಗಿದ್ದರೂ, ಇಲ್ಲಿರುವ ಹಲವು ವಿಗ್ರಹಗಳು ಹಾಗೂ ಇಲ್ಲಿನ ಗೋಡೆಗಳ ಮೇಲಿನ ಕೆತ್ತನೆಗಳು, ಹಿಂದೂ ಮೂರ್ತಿಗಳನ್ನು ಹಾಗೂ ಪುರಾಣಗಳನ್ನು ಬಿಂಬಿಸುತ್ತವೆ. 

ಗುಪ್ತನಿಧಿ ಇದೆಯೇ?

        ಖಮೇರ್ ರಾಜವಂಶಸ್ಥರ ವೈಭವ, ಸಿರಿವಂತಿಕೆಗೆ ಈ ದೇಗುಲ ಪ್ರತ್ಯಕ್ಷ ಸಾಕ್ಷಿಯಾಗಿತ್ತು. ಸುಮಾರು 3 ಸಾವಿರಕ್ಕೂ ಅಧಿಕ ವರ್ಷಗಳ ಕಾಲ ತನ್ನ ಸೊಬಗಿನಿಂದ ವಿಶ್ವದ ಗಮನವನ್ನು ತನ್ನತ್ತ ಸೆಳೆದಿತ್ತು. ಆದರೆ, 15ನೇ ಶತಮಾನದಲ್ಲಿ ಖಮೇರ್ ವಂಶದ ಪತನದ ನಂತರ ಈ ದೇಗುಲದ ವೈಭವದ ದಿನಗಳು ಮರೆಯಾಗುತ್ತಾ ಬಂದವು. ಬೌದ್ಧ ಧರ್ಮದ ಪ್ರಭಾವವೂ ಇಲ್ಲಿ ಹೆಚ್ಚಾಯಿತು. ನಂತರದ ದಿನಗಳಲ್ಲಿ ಈ ದೇಗುಲದ ಮೇಲೆ ದಾಳಿಗಳೂ ನಡೆದವು. ಸುತ್ತಲೂ ಮರಗಳು ಬೆಳೆದು, ದಟ್ಟ ಕಾನನದ ನಡುವೆ ದೇಗುಲ ಮರೆಯಾಗಿ ಹೋಗಿತ್ತು. 


        ಬಳಿಕ, 19ನೇ ಶತಮಾನದ ಅಂತ್ಯದಲ್ಲಿ ಈ ದೇಗುಲ ಮತ್ತೊಮ್ಮೆ ಪ್ರವರ್ಧಮಾನಕ್ಕೆ ಬಂತು. ಈ ದೇವಾಲಯದ ಜೀಣೋದ್ಧಾರ ಕಾರ್ಯ ಕೈಗೊಂಡ ಅಲ್ಲಿನ ಸರ್ಕಾರ, ಇದನ್ನು ಐತಿಹಾಸಿಕ ತಾಣವನ್ನಾಗಿ ಪರಿವರ್ತಿಸಿತು. ಖಮೇರ್ ಸಾಮ್ರಾಜ್ಯದ ಪತನದ ನಂತರ ಅಲ್ಲಿನ ಸಿರಿ, ಸಂಪತ್ತನ್ನು ಈ ದೇಗುಲದ ಬಳಿ ಗುಪ್ತನಿಧಿಯಾಗಿ ಇರಿಸಲಾಗಿದೆ ಎಂಬ ಅನುಮಾನಗಳಿವೆ. ಆದರೆ, ದೇಗುಲಕ್ಕೆ ಹಾನಿಯಾಗಬಹುದು ಎಂಬ ಕಾರಣದಿಂದ ಅಲ್ಲಿನ ಸರ್ಕಾರ ಈ ನಿಧಿಯ ಶೋಧಕ್ಕೆ ಮುಂದಾಗಿಲ್ಲ.


https://www.youtube.com/watch?v=dcslEL-P9qQ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹುಲಿಗೆಮ್ಮ ದೇವಿಯ ಭಕ್ತರಿಗೆ ಬಯಲೇ ಶೌಚಾಲಯ

 ಹುಣ್ಣಿಮೆಗೊಮ್ಮೆ ಲಕ್ಷ, ಲಕ್ಷ ಭಕ್ತರು, ವಾರಕ್ಕೊಮ್ಮೆ 50-60 ಸಾವಿರ ಭಕ್ತರು, ಜಾತ್ರೆಯಲ್ಲಿ ಐದಾರು ಲಕ್ಷ ಭಕ್ತರು ಸೇರುವ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲ...