ಸೋಮವಾರ, ಏಪ್ರಿಲ್ 5, 2021

ಖಾಸಗೀಕರಣದತ್ತ ಮೋದಿ ಚಿತ್ತ

 


   "ಉದ್ದಿಮೆಗಳನ್ನು ನಡೆಸುವುದು ಸರ್ಕಾರದ ಕೆಲಸವಲ್ಲ' ಇದು ಪ್ರಧಾನಿ ನರೇಂದ್ರ ಮೋದಿಯವರ ಖಡಕ್ ಮಾತು. ಆ ಮೂಲಕ ಸರಕಾರಿ ಸ್ವಾಮ್ಯದ ಮತ್ತಷ್ಟು ಸಂಸ್ಥೆಗಳನ್ನು ಖಾಸಗಿಯವರ ಕೈಗೆ ಹಸ್ತಾಂತರಿಸುವ ಸ್ಪಷ್ಟ ಸಂದೇಶವನ್ನು ಪ್ರಧಾನಿ ನೀಡಿದ್ದಾರೆ.

    ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಮಾರಾಟ ಮಾಡುವುದು, ಇಲ್ಲವೇ ಲೀಸ್ ಮೇಲೆ ನೀಡುವುದು ಅಥವಾ ತನ್ನ ಹಕ್ಕುಸ್ವಾಮ್ಯವನ್ನು ಬಿಟ್ಟುಕೊಡುವುದು, ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿನ ಷೇರುಗಳನ್ನು ಮಾರಾಟ ಮಾಡಿ, ಹಂತ, ಹಂತವಾಗಿ ಅದನ್ನು ಖಾಸಗೀಕರಣಗೊಳಿಸುವುದು, ವಿವಿಧ ವಲಯಗಳಲ್ಲಿ ಖಾಸಗಿಯವರಿಗೆ ಬಂಡವಾಳ ಹೂಡಲು ಅವಕಾಶ ಮಾಡಿಕೊಡುವುದು ಖಾಸಗೀಕರಣದ ಒಂದು ಪ್ರಕ್ರಿಯೆ.   

    ಹಾಗೆ ನೋಡಿದರೆ, ದೇಶದಲ್ಲಿ ಸರಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ ಪ್ರಕ್ರಿಯೆ ಆರಂಭವಾಗಿ ಹಲವು ದಶಕಗಳೇ ಕಳೆದು ಹೋಗಿವೆ. ಈ ಹಿಂದೆ ದಿವಂಗತ ರಾಜೀವ್ ಗಾಂಧಿ ಸರಕಾರದ ಅವಧಿಯಲ್ಲಿ ನೇಮಿಸಲಾಗಿದ್ದ ಅರ್ಜುನ್ ಸೇನ್ ಗುಪ್ತಾ ಸಮಿತಿ ಹಾಗೂ 1993ರಲ್ಲಿ ರಚಿಸಲಾಗಿದ್ದ ಸಿ.ರಂಗರಾಜನ್ ನೇತೃತ್ವದ ಸಮಿತಿಗಳು ಸಾರ್ವಜನಿಕ ರಂಗದಲ್ಲಿನ ಉದ್ದಿಮೆಗಳಲ್ಲಿನ ಹೂಡಿಕೆ ಹಿಂತೆಗೆತಕ್ಕೆ ಶಿಫಾರಸ್ಸು ಮಾಡಿದ್ದವು. ಇನ್ನು, 1991ರಲ್ಲಿ ಆರ್ಥಿಕ ಉದಾರೀಕರಣದ ಯುಗ ಆರಂಭವಾಗುತ್ತಿದ್ದಂತೆ ಎಲ್ಲಾ ಸಮಸ್ಯೆಗಳಿಗೂ ಖಾಸಗೀಕರಣವೇ ಪರಿಹಾರ ಎಂಬ ಭಾವನೆಯನ್ನು ಹುಟ್ಟು ಹಾಕಲು ಕೇಂದ್ರ ಸರ್ಕಾರ ಯತ್ನಿಸಿತು. 


    ನಂತರ, 2000-01ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರವಿದ್ದಾಗ ಹೂಡಿಕೆ ಹಿಂತೆಗೆತ ಪ್ರಕ್ರಿಯೆಗೆ ವಿಶೇಷ ಚಾಲನೆ ದೊರಕಿತು. ಅಲ್ಲಿಯವರೆಗೆ ಹೂಡಿಕೆ ಹಿಂತೆಗೆತಕ್ಕಾಗಿ ಪ್ರತ್ಯೇಕ ಸಚಿವರನ್ನು ನಿಯುಕ್ತಿಗೊಳಿಸಲಾಗುತ್ತಿತ್ತೇ ಹೊರತು, ಹೂಡಿಕೆ ಹಿಂತೆಗೆತಕ್ಕಾಗಿಯೇ ಪ್ರತ್ಯೇಕ ಸಚಿವರ ನೇಮಕ ಇರಲಿಲ್ಲ. ಆದರೆ, ವಾಜಪೇಯಿ ಸರ್ಕಾರದಲ್ಲಿ ಅದೇ ಮೊದಲ ಬಾರಿಗೆ ಹೂಡಿಕೆ ಹಿಂತೆಗೆತಕ್ಕಾಗಿಯೇ ಪ್ರತ್ಯೇಕ ಸಚಿವರನ್ನು ನೇಮಿಸಲಾಯಿತು. ಹೂಡಿಕೆ ಹಿಂತೆಗೆತ ಖಾತೆಯ ಕ್ಯಾಬಿನೆಟ್ ಸಚಿವರಾಗಿ ಅರುಣ್ ಶೌರಿ ನೇಮಕಗೊಂಡರು. ಆದರೆ, 2001ರಲ್ಲಿ ಅದೇ ವಾಜಪೇಯಿ ಸರಕಾರ ಸಾರ್ವಜನಿಕ ಬ್ಯಾಂಕ್‍ಗಳ ಹೂಡಿಕೆ ಹಿಂತೆಗೆತಕ್ಕೆ ಮುಂದಾದಾಗ ತೀವ್ರ ವಿರೋಧ ವ್ಯಕ್ತವಾಯಿತು. ಹೀಗಾಗಿ, ಆ ಪ್ರಕ್ರಿಯೆ ಮುಂದುವರಿಯಲಿಲ್ಲ.

    ಇನ್ನು, ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿಯೂ ಹೂಡಿಕೆ ಹಿಂತೆಗೆತ ಪ್ರಕ್ರಿಯೆ ಮುಂದುವರಿಯಿತು. 2013-14ರಲ್ಲಿ ಯುಪಿಎ ಸರಕಾರದ ಅವಧಿಯಲ್ಲಿ ಹೂಡಿಕೆ ಹಿಂತೆಗೆತದಿಂದ 40 ಸಾವಿರ ಕೋಟಿ ರೂ.ಗಳ ಆದಾಯವನ್ನು ಸರ್ಕಾರ ನಿರೀಕ್ಷಿಸಿತ್ತು. ಆದರೆ, ಬಂದದ್ದು ಮಾತ್ರ 15,819 ಕೋಟಿ ರೂ. ಅಷ್ಟೇ ಅಲ್ಲ, ತಾತ್ವಿಕವಾಗಿ ಹೂಡಿಕೆ ಹಿಂತೆಗೆತದಿಂದ ಬಂದ ಆದಾಯವನ್ನು ಸರ್ಕಾರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬಳಸಬೇಕು. ಆದರೆ, ಇದನ್ನು ವಿತ್ತೀಯ ಕೊರತೆ ತುಂಬಿಕೊಳ್ಳಲು ಬಳಸಲಾಯಿತು.

 


   ನಂತರ ಬಂದ ಮೋದಿ ಸರ್ಕಾರ, ಖಾಸಗೀಕರಣ ಪ್ರಕ್ರಿಯೆಗೆ ಮತ್ತಷ್ಟು ವೇಗ ನೀಡಿತು. 2014-15ರಲ್ಲಿ ಕೋಲ್ ಇಂಡಿಯಾ ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಕಂಪನಿಗಳ ಷೇರುಗಳ ಮಾರಾಟದಿಂದ ಮೋದಿ ಸರಕಾರ 24,257 ಕೋಟಿ ರೂ. ಸಂಗ್ರಹಿಸಿತು. 2015-16ರಲ್ಲಿ ಅಂದಿನ ಹಣಕಾಸು ಸಚಿವ ಜೇಟ್ಲಿಯವರು ದೇಶದಲ್ಲಿನ ಪ್ರಮುಖ ಬಂದರುಗಳನ್ನು ಖಾಸಗೀಕರಣ ಮಾಡುವ ಪ್ರಸ್ತಾಪ ಮಂಡಿಸಿದರು. ಪರಿಣಾಮ ಇಂದು ಹಲವು ಪ್ರಮುಖ ಬಂದರುಗಳ ಕಾರ್ಯ ನಿರ್ವಹಣೆಯ ಹೊಣೆ ಖಾಸಗಿಯವರ ಪಾಲಾಗಿದೆ.

    ಪ್ರಸ್ತುತ ಕೊರೊನಾ ಸಂಕಷ್ಟದಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ವಿತ್ತೀಯ ಕೊರತೆಯನ್ನು ತುಂಬಿಸಿಕೊಳ್ಳಲು ಮೋದಿಯವರ ಸರ್ಕಾರ ದೊಡ್ಡ ಮಟ್ಟದಲ್ಲಿಯೇ ಖಾಸಗೀಕರಣ ಪ್ರಕ್ರಿಯೆಗೆ ಮುಂದಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ತನ್ನ ಒಡೆತನದಲ್ಲಿರುವ ಆಸ್ತಿಗಳ ಮಾರಾಟದಿಂದ 2.5 ಲಕ್ಷ ಕೋಟಿ ರೂ. ಆದಾಯ ಸಂಗ್ರಹಿಸುವುದು ಸರಕಾರದ ಗುರಿ. ಈ ನಿಟ್ಟಿನಲ್ಲಿ ಈಗಾಗಲೇ 8 ಸಚಿವಾಲಯಗಳು ತಮ್ಮ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ಯೋಗ್ಯವಾದ ಸಂಪತ್ತನ್ನು ಗುರುತಿಸಿವೆ. ಹೀಗಾಗಿ, ಮುಂದಿನ ದಿನಗಳಲ್ಲಿ 100ಕ್ಕೂ ಹೆಚ್ಚು ಸರ್ಕಾರಿ ಉದ್ಯಮಗಳು ಖಾಸಗೀಕರಣಗೊಳ್ಳಲಿವೆ. ಇಂಧನ, ಪೆಟ್ರೋಲಿಯಂ, ಕಲ್ಲಿದ್ದಲು ಹಾಗೂ ಇತರ ಮಿನರಲ್ಸ್, ಅಣುಶಕ್ತಿ, ರಕ್ಷಣೆ, ಬಾಹ್ಯಾಕಾಶ, ಬ್ಯಾಂಕಿಂಗ್, ಇನ್ಶುರೆನ್ಸ್, ಹಣಕಾಸು ನಿರ್ವಹಣೆ, ಸಾರಿಗೆ ಮತ್ತು ದೂರಸಂಪರ್ಕ ವಲಯಗಳಲ್ಲಿ ಬಂಡವಾಳ ಹಿಂತೆಗೆತದ ಉದ್ದೇಶ ಹೊಂದಲಾಗಿದೆ. ಬ್ಯಾಂಕ್ ಮತ್ತು ಇನ್ಸೂರೆನ್ಸ್ ಕಂಪನಿ ಸೇರಿದಂತೆ 12 ಸಾರ್ವಜನಿಕ ವಲಯದ ಕಂಪನಿಗಳ ಮಾರಾಟದಿಂದ 1.75 ಲಕ್ಷ ಕೋಟಿ ಸಂಗ್ರಹಿಸುವುದು ಸರಕಾರದ ಗುರಿ. 


    ಈಗಾಗಲೇ 150 ಪ್ರಯಾಣಿಕ ರೈಲುಗಳ ಓಡಾಟಕ್ಕೆ ಖಾಸಗಿಯವರಿಗೆ ಅನುಮತಿ ನೀಡಲಾಗಿದೆ. 50 ನಿಲ್ದಾಣಗಳ ಮರು ಅಭಿವೃದ್ಧಿಗೆ ಯೋಜಿಸಲಾಗಿದೆ. ಆ ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ 90 ಸಾವಿರ ಕೋಟಿ ರೂ.ಗಳ ಸಂಗ್ರಹಣೆಯ ಗುರಿ ಹೊಂದಲಾಗಿದೆ. ಅಲ್ಲದೆ, ಬಿಎಸ್‍ಎನ್‍ಎಲ್, ಎಂಟಿಎನ್‍ಎಲ್ ಆಸ್ತಿಗಳ ಮಾರಾಟದಿಂದ 40 ಸಾವಿರ ಕೋಟಿ ರೂ.ಗಳನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ. ಎಎಐನ 13 ವಿಮಾನ ನಿಲ್ದಾಣಗಳು, ದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿನ ಜಂಟಿ ಪಾಲುದಾರಿಕೆ ಹೂಡಿಕೆ ಹಿಂತೆಗೆದುಕೊಳ್ಳಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ಧರಿಸಿದ್ದು, ಇದರಿಂದ 20 ಸಾವಿರ ಕೋಟಿ ರೂ. ಸಂಗ್ರಹಿಸಲು ಉದ್ದೇಶಿಸಲಾಗಿದೆ. ಇನ್ನು, ಪವರ್ ಗ್ರಿಡ್‍ಗಳ ಪ್ರಸರಣ ಆಸ್ತಿಯಿಂದ 27 ಸಾವಿರ ಕೋಟಿ, ಜಿಎಐಎಲ್, ಐಒಸಿಎಲ್ ಮತ್ತು ಎಚ್‍ಪಿಸಿಎಲ್ ಕೊಳವೆ ಮಾರ್ಗದಿಂದ 17 ಸಾವಿರ ಕೋಟಿ ರೂ.ಗಳ ಸಂಗ್ರಹಣೆಗೆ ಸರ್ಕಾರ ಮುಂದಾಗಿದೆ. ದೇಶದ ಹಲವು ಬಂದರುಗಳನ್ನು ಖಾಸಗಿಯವರಿಗೆ ನೀಡುವ ಮೂಲಕ 30ಕ್ಕೂ ಹೆಚ್ಚು ಬರ್ತ್‍ಗಳಿಂದ 4 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿದೆ. ಅದೇ ರೀತಿ, ದೆಹಲಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣವನ್ನು ಲೀಸ್‍ಗೆ ನೀಡಲಾಗಿದೆ. ರೈಲ್ವೆಯ ಅಂಗಸಂಸ್ಥೆಗಳಾದ ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ, ಇರ್ಕಾನ್ ಇಂಟರ್ ನ್ಯಾಷನಲ್, ಎಚ್‍ಎಎಲ್, ಆರ್‍ಐಎನ್‍ಎಲ್‍ಗಳಲ್ಲಿನ ಬಂಡವಾಳ ಹಿಂತೆಗೆತ ಪ್ರಕ್ರಿಯೆಗೆ ಮುಂದಿನ ತಿಂಗಳುಗಳಲ್ಲೇ ಚಾಲನೆ ದೊರೆಯಲಿದೆ.

    ಖಾಸಗೀಕರಣದಲ್ಲಿನ ಕಾರ್ಯಕ್ಷಮತೆ ಸಾರ್ವಜನಿಕ ರಂಗದಲ್ಲಿ ಇರುವುದಿಲ್ಲ. ಹೀಗಾಗಿ, ಸಾರ್ವಜನಿಕರ ತೆರಿಗೆ ಹಣದಲ್ಲಿ ಅವುಗಳ ನಿರ್ವಹಣೆ ಮಾಡುವ ಬದಲು, ಅದನ್ನು ಮಾರುವುದೇ ಉತ್ತಮ ಎನ್ನುತ್ತಾರೆ ಖಾಸಗೀಕರಣದ ಪರ ಇರುವವರು. ಆದರೆ, ಖಾಸಗೀಕರಣಕ್ಕೆ ಸಾಕಷ್ಟು ದೊಡ್ಡ ಮಟ್ಟದಲ್ಲೇ ವಿರೋಧ ವ್ಯಕ್ತವಾಗುತ್ತಿದ್ದು, ತಮ್ಮದೇ ಆದ ಕಾರಣಗಳನ್ನು ಅವರು ಮುಂದಿಡುತ್ತಿದ್ದಾರೆ.


-
ಖಾಸಗಿ ವಲಯದ ನಿರ್ಮಾಣ ಉದ್ದಿಮೆಗಳು, ರಿಯಲ್ ಎಸ್ಟೇಟ್ ವ್ಯವಹಾರಸ್ಥರು ಹಾಗೂ ಖಾಸಗಿ ಬ್ಯಾಂಕ್‍ಗಳ ಬೇಕಾಬಿಟ್ಟಿ ಧೋರಣೆಯಿಂದ 2007-08ರಲ್ಲಿ ಅಮೆರಿಕ ದೊಡ್ಡ ಆರ್ಥಿಕ ಹಿಂಜರಿತ ಅನುಭವಿಸಬೇಕಾಗಿ ಬಂತು. ಆಗ ಅಲ್ಲಿನ ಸರ್ಕಾರ ಖಾಸಗಿ ಬ್ಯಾಂಕ್‍ಗಳನ್ನು ರಾಷ್ಟ್ರೀಕರಣಗೊಳಿಸಿತು. ಬ್ರಿಟನ್‍ನಲ್ಲಿ 1999ರಲ್ಲಿ ಖಾಸಗೀಕರಣದ ಗಾಳಿ ಪ್ರಾರಂಭವಾಗಿ ಮುಂದಿನ 7 ವರ್ಷಗಳಲ್ಲಿ ಬಿರುಗಾಳಿಯಾಗಿ ಪರಿಣಮಿಸಿತು. ಅನೇಕ ವಲಯಗಳು ಖಾಸಗಿಯವರ ಪಾಲಾದ ಕಾರಣ ಬೆಲೆಗಳು ಏರಿಕೆಯಾಗಿ ಜನಸಾಮಾನ್ಯರು ಬಳಲುವಂತಾಯಿತು ಎನ್ನುವ ವಾದ ಇವರದು. 

- ಕೊರೊನಾ ಸಂಕಷ್ಟದ ಸಮಯದಲ್ಲಿ ದೇಶದೆಲ್ಲೆಡೆ ಖಾಸಗಿ ವಲಯದ ಕಂಪನಿಗಳು ವೆಚ್ಚ ಕಡಿತ, ಆಟೋಮೇಷನ್, ಸಾಮಥ್ರ್ಯ ಕೊರತೆಯ ಕಾರಣಗಳನ್ನು ನೀಡಿ ನೌಕರರನ್ನು ಮನಬಂದಂತೆ ಕೆಲಸದಿಂದ ತೆಗೆದು ಹಾಕಿದರು. ಹೀಗೆ ಬೀದಿಗೆ ಬಿದ್ದವರಿಗೆ ರಕ್ಷಣೆ ದೊರೆಯಲಿಲ್ಲ. ಸರಕಾರಗಳು ಅಸಹಾಯಕವಾದವು. ಇನ್ನು ಮೋದಿ ಸರಕಾರ, ಪ್ಯಾಕೇಜ್ ಹೆಸರಲ್ಲಿ ನಿಮಗೆ ಸಾಲ ಕೊಡ್ತೀವಿ, ಸ್ವಂತ ಉದ್ದಿಮೆ ಮಾಡಿ ಬದುಕಿಕೊಳ್ಳಿ ಎಂಬ ಸಲಹೆ ನೀಡಿ, ಕೈ ತೊಳೆದುಕೊಂಡಿತು. ಇನ್ನು ಕರ್ನಾಟಕದಲ್ಲಿ, ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದರೆ ಎಚ್ಚರ ಎಂಬುದಾಗಿ ಕಂಪನಿಗಳಿಗೆ ಎಚ್ಚರಿಕೆ ನೀಡಿದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯನ್ನು ಸರಕಾರ ಒಂದೇ ದಿನದಲ್ಲಿ ಎತ್ತಂಗಡಿ ಮಾಡಿತು. ಮಕ್ಕಳ ಟ್ಯೂಷನ್ ಫೀಸ್ ಕಡಿಮೆ ಮಾಡಿ ಎಂಬ ಸರಕಾರದ ಮನವಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಕ್ಯಾರೇ ಮಾಡುತ್ತಿಲ್ಲ. ಆದರೀಗ ಸರಕಾರ ಮೌನಕ್ಕೆ ಶರಣಾಗಿದೆ. 

- ಖಾಸಗಿಕರಣದಿಂದ ವ್ಯಕ್ತಿಗಳು ಶ್ರೀಮಂತರಾಗುತ್ತಾರೆ. ದೇಶದ ಸಂಪತ್ತು ಕೆಲವೇ ಶ್ರೀಮಂತರ ಕೈಗೆ ಸಿಗುತ್ತದೆ. ಆದರೆ, ದೇಶ ಬಡವಾಗುತ್ತದೆ. ಸರಕಾರದ ಆಸ್ತಿ ಒಂದೊಂದಾಗಿ ಕರಗುತ್ತಾ ಹೋದಂತೆ, ಸರಕಾರ ದುರ್ಬಲವಾಗಿ ಬಿಡುತ್ತದೆ.


- ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಸರಕಾರದ ನೀತಿ-ನಿರೂಪಣೆಗಳಲ್ಲಿ ಖಾಸಗಿ ಕಂಪನಿಗಳು ತಮ್ಮ ಪ್ರಭಾವ ಬೀರುವಷ್ಟರ ಮಟ್ಟಿಗೆ ಪ್ರಭಾವಶಾಲಿಗಳಾಗಿದ್ದಾರೆ. ಅಲ್ಲಿ ಖಾಸಗಿ ಕಂಪನಿಗಳು ಲಾಬಿ ನಡೆಸುವುದು ಕಾನೂನಿನ ಮಾನ್ಯತೆ ಪಡೆದುಕೊಂಡಿದ್ದು, ಇದಕ್ಕಾಗಿಯೇ ಅವು ಪ್ರತಿವರ್ಷ ಮಿಲಿಯನ್‍ಗಟ್ಟಲೆ ಬಂಡವಾಳ ಹೂಡುತ್ತವೆ. ಮುಂದಿನ ದಿನಗಳಲ್ಲಿ ಇದು ನಮ್ಮಲ್ಲೂ ಬರಬಹುದು ಎಂಬ ಆತಂಕವನ್ನೂ ಖಾಸಗೀಕರಣದ ವಿರೋಧಿಗಳು ಮುಂದಿಡುತ್ತಿದ್ದಾರೆ.




https://www.youtube.com/watch?v=UWTpSqNnxsw



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹುಲಿಗೆಮ್ಮ ದೇವಿಯ ಭಕ್ತರಿಗೆ ಬಯಲೇ ಶೌಚಾಲಯ

 ಹುಣ್ಣಿಮೆಗೊಮ್ಮೆ ಲಕ್ಷ, ಲಕ್ಷ ಭಕ್ತರು, ವಾರಕ್ಕೊಮ್ಮೆ 50-60 ಸಾವಿರ ಭಕ್ತರು, ಜಾತ್ರೆಯಲ್ಲಿ ಐದಾರು ಲಕ್ಷ ಭಕ್ತರು ಸೇರುವ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲ...