ನಾವು ಈವತ್ತು ಮೇ ತಿಂಗಳಲ್ಲಿ ಮೇಷ ಹಾಗೂ ವೃಶ್ಚಿಕ ರಾಶಿಗಳವರ ರಾಶಿಫಲ ಹೇಗಿದೆ ಎಂಬುದನ್ನು ನೋಡೋಣ. 2021ರ ಮೇ ತಿಂಗಳಲ್ಲಿನ ಗೋಚಾರ ಫಲ, ಅಂದರೆ, ಯಾವ ರಾಶಿಯಲ್ಲಿ ಯಾವ ಗ್ರಹದ ಸಂಚಾರವಿದೆ, ಗ್ರಹಗಳ ಸ್ಥಾನಪಲ್ಲಟ, ಅದರಿಂದ ಆ ರಾಶಿಯ ಮೇಲೆ ಆಗುವಂತಹ ಪರಿಣಾಮಗಳು ಮತ್ತು ಗ್ರಹದೋಷಗಳ ನಿವಾರಣೆಗೆ ಇರುವಂತಹ ಪರಿಹಾರ ಕ್ರಮಗಳ ಬಗ್ಗೆ ನೋಡೋಣ.
ಮೇಷ ಹಾಗೂ ವೃಶ್ಚಿಕ, ಈ ಎರಡೂ ರಾಶಿಗಳಿಗೆ ಅಧಿಪತಿ ಆಗಿರುವಂತವನು ಕುಜ. ಮೇಷ ರಾಶಿಯಿಂದ ಮೂರನೇ ಮನೆಯಲ್ಲಿ ಇರುವ ಕುಜ, ಈ ತಿಂಗಳಲ್ಲಿ ನಿಮಗೆ ಶುಭ ಫಲವನ್ನೇ ನೀಡಲಿದ್ದಾನೆ. ಇನ್ನು, ತಿಂಗಳಪೂರ್ತಿ ಲಾಭ ಭಾವದಲ್ಲಿ ಅಂದರೆ, 11ನೇ ಸ್ಥಾನದಲ್ಲಿ ಇರುವಂತಹ ಗುರು, ಮೇಷ ರಾಶಿಯವರಿಗೆ ಉತ್ತಮವಾದಂತಹ ಫಲವನ್ನೇ ನೀಡ್ತಾನೆ. ಉದ್ಯೋಗದಲ್ಲಿ ಇರುವವರಿಗೆ ಭಡ್ತಿ, ಸಾಮಾಜಿಕ ಕ್ಷೇತ್ರದಲ್ಲಿ ಇರುವವರಿಗೆ ಗೌರವಯುತ ಸ್ಥಾನಮಾನ ಹಾಗೂ ಉನ್ನತ ಪದವಿ ದೊರಕುವ ಅವಕಾಶ ಇದೆ. ಮನೆ ನಿರ್ಮಾಣ, ಹೊಸ ವ್ಯವಹಾರ ಆರಂಭಿಸುವವರಿಗೆ ಶುಭ ಯೋಗ ಕೂಡಿ ಬರಲಿದೆ.
ಇನ್ನು, ಮೇ 4ರಂದು ಶುಕ್ರ, ವೃಷಭ ರಾಶಿ ಪ್ರವೇಶಿಸಲಿದ್ದು, ಮೇ 28ರವರೆಗೂ ಇಲ್ಲಿಯೇ ಇರಲಿದ್ದಾನೆ. ವೃಷಭ ರಾಶಿಯ ಅಧಿಪತಿಯಾಗಿರುವ ಶುಕ್ರ, ಉಚ್ಛಸ್ಥಾನದಲ್ಲಿದ್ದು, ನಿಮಗೆ ಶುಭಫಲವನ್ನೇ ನೀಡುತ್ತಾನೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ಇನ್ನು ಮೇ 26ರವರೆಗೆ ಇದೇ ರಾಶಿಯಲ್ಲಿರುವ ಬುಧ ಕೂಡ ನಿಮಗೆ ಶುಭ ಫಲವನ್ನೇ ನೀಡಲಿದ್ದಾನೆ. ಮೇ 26ರಂದು ಆತ ತನ್ನ ಅಧಿಪತ್ಯದ ರಾಶಿಯಾದ ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇನ್ನು, ಮೇ 29ರಂದು ಮಿಥುನದಲ್ಲಿರುವ ಬುಧ, ವಕ್ರಗತಿಯ ಚಲನೆ ಆರಂಭಿಸಿ, ಜೂನ್ 2ಕ್ಕೆ ಮತ್ತೆ ವೃಷಭಕ್ಕೆ ಪ್ರವೇಶ ಮಾಡಲಿದ್ದಾನೆ.
ಆದರೆ, 10ನೇ ಮನೆಯಲ್ಲಿ ವಿರಾಜಮಾನನಾಗಿರುವ ಕರ್ಮಾಧಿಪತಿ ಶನಿ, ನಿಮಗೆ ಪ್ರತಿಕೂಲ ಪರಿಣಾಮ ಬೀರಬಹುದು. ಇದರಿಂದಾಗಿ ನಿಮಗೆ ಅನಾರೋಗ್ಯ, ಸ್ವಲ್ಪ ಮಟ್ಟಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು. ಅಲ್ಲದೆ, ಉದ್ಯೋಗದಲ್ಲಿ ಕಿರಿಕಿರಿ, ಬದಲಾವಣೆ ನಿರೀಕ್ಷಿತ. ಜೊತೆಗೆ, ಶತ್ರುಗಳ ಕಾಟ, ಸ್ತ್ರಿ ಸಂಬಂಧ ವ್ಯವಹಾರಗಳಿಂದ ಮನಸ್ಸಿಗೆ ಚಿಂತೆ ಕಾಡಬಹುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಉಂಟಾಗಬಹುದು. ಈ ಮಧ್ಯೆ, ಮೇ 23ರಂದು ಮಕರ ರಾಶಿಯಲ್ಲಿ ಇರುವ ಶನಿ, ವಕ್ರಗತಿಯಲ್ಲಿ ಚಲಿಸಲು ಆರಂಭಿಸುತ್ತಾನೆ.
ಇನ್ನು, ಮೇ14 ರಂದು ರವಿ, ವೃಷಭ ರಾಶಿಯನ್ನು ಪ್ರವೇಶಿಸಲಿದ್ದು, ಇದು ನಿಮಗೆ ಅಷ್ಟೊಂದು ಶುಭಕರವೇನಲ್ಲ. ಈ ಮಧ್ಯೆ, ಎರಡನೇ ಮನೆಯಲ್ಲಿರುವ ರಾಹುವಿನಿಂದಾಗಿ ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಅವಮಾನ, ಮೃತ್ಯುಭಯ, ಅಪವಾದಗಳು ಎದುರಾಗಬಹುದು. ಬೇರೆ ಯಾರಿಗೋಸ್ಕರನೋ ಹಣ ಖರ್ಚು ಮಾಡಬೇಕಾಗಿ ಬರಬಹುದು. ಇನ್ನು ಆಯುಷ್ಯ ಭಾವದಲ್ಲಿ ಇರುವ ಕೇತುವಿನಿಂದಾಗಿ ಮೇಷ ರಾಶಿಯವರಿಗೆ ರೋಗಗಳು ಬಾಧಿಸಬಹುದು.
ಹೀಗಾಗಿ, ಶಿವನ ಆರಾಧನೆ, ಶನಿಶಾಂತಿ ಇಲ್ಲವೇ ನವಗ್ರಹ ಜಪ, ಸುಬ್ರಹ್ಮಣ್ಯ ಸ್ವಾಮೀಯ ಆರಾಧನೆಗಳನ್ನು ಮಾಡುವ ಮೂಲಕ ನಿಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಬಹುದು. ಒಟ್ಟಾರೆ ನೋಡುವುದಾದರೆ, ಮೇ ತಿಂಗಳಲ್ಲಿ ಮೇಷ ರಾಶಿಯವರು ಉತ್ತಮವಾದ ಫಲವನ್ನೇ ಪಡೆಯಬಹುದು.
ಮೇಷ ರಾಶಿಯವರಿಗೆ ಭಾನುವಾರ, ಸೋಮವಾರ ಹಾಗೂ ಗುರುವಾರ ಶುಭ ವಾರಗಳು. ಅದೃಷ್ಟ ಸಂಖ್ಯೆಗಳು 3,4 ಮತ್ತು 9.
ವೃಶ್ಚಿಕ ರಾಶಿ:
ಇನ್ನು ವೃಶ್ಚಿಕ ರಾಶಿಯನ್ನು ನೋಡುವುದಾದರೆ, ರಾಶಿಯ ಅಧಿಪತಿಯಾಗಿರುವ ಕುಜ, ನಿಮ್ಮ ರಾಶಿಯಿಂದ 8ನೇ ಮನೆಯಲ್ಲಿದ್ದು, ಅಷ್ಟೊಂದು ಶುಭಕರನಲ್ಲ. ಇನ್ನು, ಸಪ್ತಮದ ರಾಹು, ಜನ್ಮ ರಾಶಿಯಲ್ಲಿರುವ ಕೇತುವಿನಿಂದಾಗಿ ನಿಮಗೆ ಮಾನಸಿಕವಾಗಿ ಚಿಂತೆ ಹೆಚ್ಚಬಹುದು. ಕೆಟ್ಟ ವ್ಯಸನಗಳತ್ತ ಮನಸ್ಸು ನಿಮ್ಮನ್ನು ಸೆಳೆಯಲಿದೆ. ನರ ಸಂಬಂಧಿ ರೋಗಗಳು, ಉದರ ಸಮಸ್ಯೆ, ಪಿತ್ತೋದ್ರೇಕ, ಮೂತ್ರಾಶಯ ಸಂಬಂಧಿ ಅನಾರೋಗ್ಯಗಳು ನಿಮ್ಮನ್ನು ಕಾಡಬಹುದು. ದಾಂಪತ್ಯದಲ್ಲಿ ವಿರಸ ತಲೆದೋರಬಹುದು. ನಿಮ್ಮ ಮಾನಹಾನಿಗೆ ಯತ್ನ ನಡೆಯುವ ಸಾಧ್ಯತೆಯೂ ಇದೆ. ಸಾಲದ ಹೊರೆ ಕೂಡ ಸ್ವಲ್ಪ ಹೆಚ್ಚಾಗಬಹುದು.
ಅದೇ ರೀತಿ, ನಿಮ್ಮ ಜನ್ಮರಾಶಿಯಿಂದ 4ನೇ ಮನೆಯಲ್ಲಿರುವ ಗುರು ಕೂಡ ನಿಮಗೆ ಅಷ್ಟೊಂದು ಶುಭವಾರ್ತೆಯನ್ನು ತರಲಾರ. ಮನೆಯಲ್ಲಿ, ಬಂಧು-ಬಾಂಧವರ ಜೊತೆ, ಮಿತ್ರರ ಜೊತೆ ಕಲಹ, ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು. ಆರ್ಥಿಕವಾಗಿ ಸಂಕಷ್ಟ ಎದುರಾಗಲಿದೆ.
ಇನ್ನು, ಮೇ 4ರಂದು ತನ್ನದೇ ಆಧಿಪತ್ಯದ ರಾಶಿಯಾದ ವೃಷಭಕ್ಕೆ ಶುಕ್ರನ ಪ್ರವೇಶವಾಗಲಿದ್ದು, ಮೇ 28ರವರೆಗೂ ಆತ ಅಲ್ಲಿಯೇ ಇರಲಿದ್ದಾನೆ. ನಂತರ, ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದು, ನಿಮಗೆ ಶುಭವಾರ್ತೆ ನೀಡಲಿದ್ದಾನೆ. ಈ ವೇಳೆ, ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಇನ್ನು, ಮೇ 26ರಂದು ಬುಧ, ವೃಷಭದಿಂದ ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದು, ನಿಮಗೆ ಅನುಕೂಲಕರ.
ಜೊತೆಗೆ, ಮೂರನೇ ಮನೆಯಲ್ಲಿರುವ ಶನಿ ನಿಮ್ಮ ರಾಶಿಗೆ ಒಳಿತನ್ನೇ ಉಂಟು ಮಾಡಲಿದ್ದಾನೆ. ಪಿತ್ರಾರ್ಜಿತ ಆಸ್ತಿಯಲ್ಲಿ ಲಾಭ ಬರುವ ಯೋಗವಿದೆ. ವಾಹನ ಖರೀದಿ ಮಾಡಲಿದ್ದೀರಿ. ಸಾಮಾಜಿಕ ಕ್ಷೇತ್ರದಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಸ್ಥಾನಮಾನಗಳು ಲಭಿಸಲಿವೆ. ಕುಟುಂಬದಲ್ಲಿ ಮಂಗಳ ಕಾರ್ಯಗಳು ಕೂಡ ಜರುಗಲಿವೆ. ಈ ಮಧ್ಯೆ, ಮೇ 23ರಂದು ಮಕರ ರಾಶಿಯಲ್ಲಿ ಶನಿಯ ವಕ್ರಗತಿಯ ಚಲನೆ ಆರಂಭವಾಗಲಿದೆ.
ಇನ್ನು, ಪರಿಹಾರದ ಬಗ್ಗೆ ನೋಡೋದಾದ್ರೆ, ಮೃತ್ಯುಂಜಯ ಜಪ, ನವಗ್ರಹ ಶಾಂತಿ, ಸುಬ್ರಹ್ಮಣ್ಯನ ಆರಾಧನೆಗಳ ಮೂಲಕ ನಿಮ್ಮ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು. ಒಟ್ಟಾರೆ ನೋಡುವುದಾದರೆ, ನಿಮಗೆ ಈ ತಿಂಗಳು ಮಿಶ್ರಫಲದಾಯಕ ಎನ್ನಬಹುದು. ಇನ್ನು, ವೃಶ್ಚಿಕ ರಾಶಿಯವರಿಗೆ ಭಾನುವಾರ ಮತ್ತು ಗುರುವಾರ ಶುಭವಾರ. ನಿಮ್ಮ ರಾಶಿಯ ಅದೃಷ್ಟ ಸಂಖ್ಯೆ 1 ಮತ್ತು 5.
https://www.youtube.com/watch?v=5MU8tz0BF4E&list=UUljNtNUex4de_Yx5TFoiMPA&index=6
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ