ಮಲೆನಾಡಿನ ಅತ್ಯಂತ ವಿಶಿಷ್ಟವಾದ, ಬಹಳ ರುಚಿಯಾದ, ಗರಿ, ಗರಿಯಾಗಿ ಸವಿಯಬಹುದಾದ, ಅಷ್ಟೇ ಆರೋಗ್ಯಕರವಾದ ಸಿಹಿ ತಿಂಡಿಯಿದು. ಮಲೆನಾಡಿನ ಈ ವಿಶಿಷ್ಟವಾದ ಖಾದ್ಯದ ಹೆಸರು ತೊಡೆದೇವು. ಇದೊಂದು ಮಲೆನಾಡಿನ ಸಾಂಪ್ರದಾಯಿಕ ಸಿಹಿ ತಿಂಡಿ. ಮಲೆನಾಡು ಭಾಗದಲ್ಲಿ, ಅದರಲ್ಲೂ ವಿಶೇಷವಾಗಿ ಹವ್ಯಕರ ಮನೆಗಳಲ್ಲಿ ಈ ಖಾದ್ಯವನ್ನು ಹೆಚ್ಚಾಗಿ ಮಾಡುತ್ತಾರೆ. ಹಿಂದೆಲ್ಲಾ ಸಾಧಾರಣವಾಗಿ ಕಬ್ಬು ಕಡಿದು, ಆಲೆಮನೆ ನಡೆಯುವಾಗ ಈ ತಿಂಡಿಯನ್ನು ಮಾಡುವ ಸಂಪ್ರದಾಯವಿತ್ತು. ಕಾರಣ, ಇದಕ್ಕೆ ಕಬ್ಬಿನ ಹಾಲನ್ನು ಹಾಕಿ, ಜೊತೆಗೆ ಆಗ ತಾನೆ ನೊರೆ ಬಂದ ಬೆಲ್ಲವನ್ನು ಹಾಕಿ ಮಾಡಿದರೆ, ಅದರ ರುಚಿಯೇ ಬೇರೆ. ಆದರೆ, ಬರ ಬರುತ್ತಾ ಕಬ್ಬು ಬೆಳೆಯುವುದು ಕಡಿಮೆಯಾಗಿ, ಆಲೆಮನೆಗಳ ಸಂಖ್ಯೆ ಕಡಿಮೆಯಾದಂತೆ ಬರಿ ಬೆಲ್ಲವನ್ನು ಮಾತ್ರ ಹಾಕಿ ಇದನ್ನು ಮಾಡಲಿಕ್ಕೆ ಆರಂಭಿಸಿದ್ದಾರೆ. ಯಾವಾಗ ಬೇಕಾದರೂ ಇದನ್ನು ಮಾಡಬಹುದು.
ತೊಡೆದೇವಿಗೆ ಬೇಕಾದ ಸಾಮಗ್ರಿಗಳು:
ಅಕ್ಕಿ, ಅರಿಶಿನ, ಕಬ್ಬಿನ ಹಾಲು, ಇಲ್ಲದಿದ್ದರೆ ಬರಿ ಬೆಲ್ಲ. ಬೆಲ್ಲ ಎಂದರೆ, ಮಲೆನಾಡು ಭಾಗದಲ್ಲಿ ದೊರೆಯುವ ಸಾಂಪ್ರದಾಯಿಕ ಬೆಲ್ಲ, ಶೇಂಗಾ ಎಣ್ಣೆ, ತೊಡೆದೇವು ಎರೆಯುವ ಗಡಿಗೆ, ಇದು ಸಿಗದಿದ್ದರೆ, ಮಣ್ಣಿನ ಮಡಿಕೆ, ಅಡಿಕೆ ಹಾಳೆಯ ತುಂಡು, ಇದು ಇಲ್ಲದಿದ್ದರೆ ದೋಸೆ ತೆಗೆಯುವ ಸೌಟು. ಇದಕ್ಕೆ ಗ್ಯಾಸ್‍ಒಲೆಗಿಂತ ಸೌದೆ ಒಲೆ ಬೆಸ್ಟ್.
ಮಾಡುವ ವಿಧಾನ:
ಹಿಂದಿನ ರಾತ್ರಿ ಅಕ್ಕಿಯನ್ನು ನೆನೆಸಿಡಿ. ಮರುದಿನ ಬೆಳಗ್ಗೆ ಅದನ್ನು ಮಿಕ್ಸಿಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ. ಅದಕ್ಕೆ ಸ್ವಲ್ಪ ಅರಿಶಿನ, ರುಚಿಗೆ ಬೇಕಿರುವಷ್ಟು ಬೆಲ್ಲ ಹಾಕಿ ದೋಸೆ ಹಿಟ್ಟಿನಂತೆ ಕದಡಿಕೊಳ್ಳಿ. ಬಳಿಕ, ಸೌದೆ ಒಲೆಯ ಮೇಲೆ ತೊಡೆದೇವು ತಯಾರಿಸಲು ಬೇಕಾದ ಅಗಲ ತಳದ ಮಣ್ಣಿನ ಗಡಿಗೆಯನ್ನು ಶುಚಿಯಾಗಿ ತೊಳೆದುಕೊಂಡು, ತಲೆಕೆಳಗಾಗಿ ಇಡಿ. ಮಡಿಕೆಯ ಮೇಲೆ ದೋಸೆ ಬಂಡಿಗೆ ಎಣ್ಣೆ ಸವರಿದಂತೆ ಶೇಂಗಾ ಎಣ್ಣೆಯನ್ನು ಸವರಿ. ಮಡಿಕೆ ಕಾದ ನಂತರ ತೆಳ್ಳನೆಯ ಹಿಟ್ಟನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ.
ನಂತರ, ಆಯತಾಕಾರದ ಶುದ್ಧವಾದ ಬಿಳಿ ಬಟ್ಟೆಯನ್ನು ಚಿಕ್ಕ ಮರದ ಕೋಲೊಂದಕ್ಕೆ ಸುತ್ತಿ ಬಿಗಿಗೊಳಿಸಿಕೊಳ್ಳಿ. ಈಗ ಈ ಬಟ್ಟೆಯನ್ನು ಬಟ್ಟಲಿನಲ್ಲಿ ತಯಾರಿಸಿಕೊಂಡ ಹಿಟ್ಟಿನಲ್ಲಿ ಅದ್ದಿ, ಹದವಾಗಿ ಕಾದ ಗಡಿಗೆಯ ಮೇಲೆ ಪ್ಲಸ್ ಆಕಾರದಲ್ಲಿ ಎಳೆಯಿರಿ. ನಂತರ, ಗರಿಯಾದ ತೊಡೆದೇವನ್ನು ಒಣಗಿದ ಅಡಿಕೆ ಹಾಳೆಯಿಂದ ಅಥವಾ ದೋಸೆ ತೆಗೆಯುವ ಸೌಟಿನಿಂದ ನಿಧಾನವಾಗಿ ದೋಸೆಯನ್ನು ತೆಗೆದ ಹಾಗೆ ತೆಗೆಯಿರಿ. ನಂತರ, ತ್ರಿಕೋನಾಕಾರದಲ್ಲಿ ಮಡಿಚಿಡಿ. ಇದಕ್ಕೆ ತುಪ್ಪ ಅಥವಾ ಹಾಲನ್ನು ಹಾಕಿಕೊಂಡು ಸವಿಯಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ