ನಾವು ಈವತ್ತು ಮೇ ತಿಂಗಳಲ್ಲಿ ಕುಂಭ ಮತ್ತು ಮಕರ ರಾಶಿಗಳವರ ರಾಶಿಫಲ ಹೇಗಿದೆ ಎಂಬುದನ್ನು ನೋಡೋಣ. ಮೇ ತಿಂಗಳಲ್ಲಿನ ಗೋಚಾರ ಫಲ, ಅಂದರೆ, ಯಾವ ರಾಶಿಯಲ್ಲಿ ಯಾವ ಗ್ರಹದ ಸಂಚಾರವಿದೆ, ಗ್ರಹಗಳ ಸ್ಥಾನಪಲ್ಲಟ, ಅದರಿಂದ ಆ ಎರಡೂ ರಾಶಿಗಳ ಮೇಲೆ ಆಗುವಂತಹ ಪರಿಣಾಮಗಳು ಮತ್ತು ಗ್ರಹದೋಷಗಳ ನಿವಾರಣೆಗೆ ಇರುವಂತಹ ಪರಿಹಾರ ಕ್ರಮಗಳ ಬಗ್ಗೆ ನೋಡೋಣ.
ಕುಂಭ ರಾಶಿ
ಮಕರ ಮತ್ತು ಕುಂಭ, ಈ ಎರಡೂ ರಾಶಿಗಳಿಗೆ ಅಧಿಪತಿ ಶನಿ. ಕುಂಭ ರಾಶಿಯವರಿಗೆ ಈಗಾಗಲೇ ಸಾಡೇಸಾತ್ ಆರಂಭವಾಗಿದ್ದು, ಶನಿ ವ್ಯಯ ಸ್ಥಾನದಲ್ಲಿದ್ದಾನೆ. ಹೀಗಾಗಿ, ವ್ಯಯಸ್ಥಾನದಲ್ಲಿರುವ ಸಾಡೇಸಾತ್ ಶನಿ, ಸಾಧಾರಣವಾಗಿ ಕಷ್ಟವನ್ನೇ ನೀಡುತ್ತಾನೆ. ಆದರೆ, ಕುಂಭ ರಾಶಿ, ಶನಿಗೆ ಸ್ವಕ್ಷೇತ್ರ ಹಾಗೂ ಮೂಲ ತ್ರಿಕೋಣ ರಾಶಿಯಾಗಿರುವುದರಿಂದ, ಆತ ಶುಭ ಫಲ ನೀಡುವ ಸಾಧ್ಯತೆ ಇದೆ. ಈ ಮಧ್ಯೆ, ಮೇ 23ರಂದು ಶನಿಯ ವಕ್ರಗತಿ, ಅಂದರೆ, ಹಿಮ್ಮುಖ ಚಲನೆ ಆರಂಭವಾಗಲಿದೆ. ಹೀಗಾಗಿ, ಮಾನಸಿಕವಾಗಿ ನಿಮಗೆ ಕಿರಿ ಕಿರಿ ಹೆಚ್ಚಬಹುದು. ಅನಾರೋಗ್ಯ ನಿಮ್ಮನ್ನು ಕಾಡಬಹುದು. ಉದ್ಯೋಗಸ್ಥರಿಗೆ, ಸರಕಾರಿ ನೌಕರಿಯಲ್ಲಿ ಇರುವವರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ ಉಂಟಾಗಬಹುದು. ಅಪವಾದ, ಅಪಕೀರ್ತಿಗಳು ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಬಹುದು.
ಇನ್ನು, ಗುರು, ನಿಮ್ಮ ಜನ್ಮರಾಶಿಯಲ್ಲಿಯೇ ಇದ್ದರೂ, ನಿಮಗೆ ಗುರುಬಲವಿಲ್ಲ. ಆದರೂ, ಶುಭಗ್ರಹನಾಗಿರುವ ಗುರುವಿನ ಅನುಗ್ರಹ ನಿಮಗೆ ಇರಲಿದೆ. ಕುಟುಂಬದಲ್ಲಿ, ಕುಟುಂಬದ ಹೊರಗೆ ಮನಸ್ತಾಪಗಳು ಬರುವ ಸಂಭವ ಇದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುವ ಸಾಧ್ಯತೆಯಿದೆ. ಹಣಕಾಸಿನ ಅಡಚಣೆ ಎದುರಾಗಬಹುದು. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಅನಾವಶ್ಯಕವಾಗಿ ವಿವಾದ ಆಗಬಹುದು. ಜ್ವರಬಾಧೆ ನಿಮ್ಮನ್ನು ಕಾಡಬಹುದು. ಮೇ 14ರವರೆಗೆ ಭೂಮಿ-ಸ್ಥಿರಾಸ್ತಿ ವ್ಯವಹಾರಗಳಿಂದ, ಸಹೋದರ ವರ್ಗದಿಂದ ನಿಮಗೆ ಅನುಕೂಲವಿದೆ.
ಮೇ 4ರಂದು ಶುಕ್ರ, ವೃಷಭ ರಾಶಿ ಪ್ರವೇಶಿಸಲಿದ್ದು, ಮೇ 28ರವರೆಗೂ ಇಲ್ಲಿಯೇ ಇರಲಿದ್ದಾನೆ. ತನ್ನದೇ ಆಧಿಪತ್ಯದ ಉಚ್ಛಸ್ಥಾನದಲ್ಲಿರುವ ಶುಕ್ರ, ನಿಮಗೆ ಶುಭಫಲಗಳನ್ನು ನೀಡಲಿದ್ದಾನೆ. ಇನ್ನು, ಮೇ 26ರವರೆಗೆ ಬುಧ ಕೂಡ ಇದೇ ರಾಶಿಯಲ್ಲಿ ಇರಲಿದ್ದಾನೆ. ಶುಕ್ರ ಹಾಗೂ ಬುಧ, ನೈಸರ್ಗಿಕವಾಗಿ ಮಿತ್ರಗೃಹಗಳಾಗಿದ್ದು, ಇವುಗಳ ಯುತಿ ಶುಭ ಫಲವನ್ನೇ ನೀಡಲಿದೆ.
ಇನ್ನು, ಕುಜ, 5ನೇ ಮನೆಯಲ್ಲಿದ್ದಾನೆ. ಪಂಚಮಾಧಿಪತಿ ಬುಧನಿಗೂ, ಕುಜನಿಗೂ ನೈಸರ್ಗಿಕವಾಗಿ ಶತ್ರುತ್ವವಿದ್ದು, ಆತನಿಂದ ಶುಭಫಲ ನಿರೀಕ್ಷಿಸುವಂತಿಲ್ಲ. ಹೀಗಾಗಿ, ಶತ್ರುಗಳ ಕಾಟ, ಕೈ ಹಿಡಿದ ಕೆಲಸಗಳಲ್ಲಿ ಅಪಜಯ ಕಂಡು ಬರಬಹುದು. ಇನ್ನು, ಚತುರ್ಥದ ರಾಹು, ಮನಸ್ಸಿನಲ್ಲಿ ಋಣಾತ್ಮಕವಾದ ಚಿಂತನೆಗಳನ್ನು ವೃದ್ಧಿಗೊಳಿಸುವುದರಿಂದ ಹಾಗೂ ಕರ್ಮಭಾವದಲ್ಲಿ, ಅಂದರೆ 10ನೇ ಮನೆಯಲ್ಲಿರುವ ಕೇತುವಿನಿಂದ ನಿಮ್ಮಲ್ಲಿ ಕಲಹ ಪ್ರವೃತ್ತಿ ಹೆಚ್ಚಬಹುದು.
ಹೀಗಾಗಿ, ಮೃತ್ಯುಂಜಯ ಜಪ, ವಿಷ್ಣು ಸಹಸ್ರನಾಮಾರ್ಚನೆ, ಅಶ್ವತ್ಥ ಪ್ರದಕ್ಷಿಣೆ ಮಾಡಿ. ಶನಿವಾರದಂದು ಶನಿಯ ಆರಾಧನೆಯಿಂದ ನಿಮ್ಮ ಸಂಕಷ್ಟ ದೂರವಾಗಿ ನಿಮಗೆ ಒಳಿತಾಗಲಿದೆ. ಹಿಡಿದ ಕಾರ್ಯದಲ್ಲಿ ಜಯ ಸಿಗಲಿದೆ.
ಒಟ್ಟಿನಲ್ಲಿ ಈ ತಿಂಗಳು ನಿಮಗೆ ಮಿಶ್ರಫಲದಾಯಕ ಎನ್ನಬಹುದು. ಬುಧವಾರ ಹಾಗೂ ಶುಕ್ರವಾರಗಳು ನಿಮಗೆ ಶುಭವಾರ. ನಿಮ್ಮ ರಾಶಿಯ ಅದೃಷ್ಟ ಸಂಖ್ಯೆ 2 ಮತ್ತು 7.
ಮಕರ ರಾಶಿ:
ಇನ್ನು, ಮಕರ ರಾಶಿಯನ್ನು ನೋಡುವುದಾದರೆ, ರಾಶಿಯ ಅಧಿಪತಿಯಾಗಿರುವ ಶನಿ, ನಿಮ್ಮ ರಾಶಿಯಲ್ಲಿಯೇ ಇದ್ದಾನೆ. ನಿಮಗೆ ಈಗಾಗಲೇ ಸಾಡೇಸಾತಿ ಆರಂಭವಾಗಿದ್ದು, ಸಾಡೇಸಾತ್ ಶನಿ ಸಾಧಾರಣವಾಗಿ ಕಷ್ಟವನ್ನೇ ನೀಡುತ್ತಾನೆ. ಆದರೆ, ಶನಿಗೆ ಇದು ಸ್ವಕ್ಷೇತ್ರ ಆಗಿರುವುದರಿಂದ ಅಷ್ಟೊಂದು ಕಷ್ಟ ನೀಡಲಾರ. ಈ ಮಧ್ಯೆ, ಮೇ 23ರಂದು ಶನಿಯ ವಕ್ರಗತಿ, ಅಂದರೆ, ಹಿಮ್ಮುಖ ಚಲನೆ ಆರಂಭವಾಗಲಿದೆ.
ಹೀಗಾಗಿ, ಮಾನಸಿಕವಾಗಿ ಕಿರಿ ಕಿರಿ ಹೆಚ್ಚಬಹುದು. ಅನಾರೋಗ್ಯ ನಿಮ್ಮನ್ನು ಕಾಡಬಹುದು. ಉದ್ಯೋಗಸ್ಥರಿಗೆ, ಸರಕಾರಿ ನೌಕರಿಯಲ್ಲಿ ಇರುವವರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ ಉಂಟಾಗಬಹುದು. ಅಪವಾದ, ಅಪಕೀರ್ತಿಗಳು ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಬಹುದು. ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಚ್ಯುತಿ ಬರಬಹುದು. ಹಣಕಾಸಿನ ಅಡಚಣೆ ಉಂಟಾಗಬಹುದು.
ಇನ್ನು, ಗುರು ದ್ವಿತೀಯ ಭಾವದಲ್ಲಿದ್ದು, ಶುಭದಾಯಕನಾಗಿದ್ದಾನೆ. ನಿಮಗೆ ಈ ತಿಂಗಳು ಗುರುಬಲವಿದೆ. ಕುಟುಂಬದಲ್ಲಿ ಅಭಿವೃದ್ಧಿ, ನೆಮ್ಮದಿಯ ವಾತಾವರಣ ಕಂಡು ಬರಲಿದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಪಿತ್ರಾರ್ಜಿತ ಆಸ್ತಿಯ ಲಾಭವಿದೆ. ಸಮಾಜದಲ್ಲಿ ನಿಮಗೆ ಗೌರವದ ಸ್ಥಾನಮಾನಗಳು ಲಭಿಸಲಿವೆ.
ಶುಕ್ರ, ಮೇ 4ರಂದು ತನ್ನದೇ ಆದಿಪತ್ಯದ ಇನ್ನೊಂದು ರಾಶಿಯಾಗಿರುವ ವೃಷಭಕ್ಕೆ ಬರಲಿದ್ದು, ಮೇ 28ರವರೆಗೂ ವೃಷಭದಲ್ಲಿಯೇ ಇರಲಿದ್ದಾನೆ. ತನ್ನದೇ ಆಧಿಪತ್ಯದ ಉಚ್ಛಸ್ಥಾನದಲ್ಲಿರುವ ಶುಕ್ರ, ನಿಮಗೆ ಶುಭಫಲಗಳನ್ನೇ ನೀಡಲಿದ್ದಾನೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ಇನ್ನು, ಮೇ 26ರಂದು ಬುಧ, ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದು, ನಿಮಗೆ ಶುಭಫಲ ನೀಡಲಿದ್ದಾನೆ.
ಇನ್ನು, 6ನೇ ಮನೆಯಲ್ಲಿ ಇರುವ ಕುಜ, ಅನುಕೂಲನಾಗಿದ್ದು, ಕೆಲಸದಲ್ಲಿ ಮುಂಬಡ್ತಿ, ಸಂಬಳದಲ್ಲಿ ಏರಿಕೆ, ಉತ್ತಮ ಸ್ಥಾನಕ್ಕೆ ವರ್ಗಾವಣೆ ಸಿಗುವ ಸಾಧ್ಯತೆ ಇದೆ. 11ನೇ ಮನೆಯಲ್ಲಿ ಇರುವ ಕೇತುವಿನಿಂದಾಗಿ ನಿಮ್ಮ ಕೆಲಸಗಳಲ್ಲಿ ನಿಮಗೆ ಜಯ ಸಿಗಲಿದೆ.
ಆದರೆ, 5ನೇ ಮನೆಯಲ್ಲಿ ಇರುವ ರಾಹು ಮಾನಸಿಕ ಕಿರಿಕಿರಿ ಉಂಟು ಮಾಡಲಿದ್ದಾನೆ. ಇನ್ನು, ಮೇ14 ರಂದು ರವಿ, ವೃಷಭ ರಾಶಿಯನ್ನು ಪ್ರವೇಶಿಸಲಿದ್ದು, ಸ್ವಲ್ಪ ಮಟ್ಟಿನ ಅನಾರೋಗ್ಯ ನಿಮ್ಮನ್ನು ಕಾಡಬಹುದು.
ಹೀಗಾಗಿ, ಸಂಕಷ್ಟ ಪರಿಹಾರಕ್ಕಾಗಿ ಶನಿಶಾಂತಿ, ನವಗ್ರಹಶಾಂತಿ, ಜನ್ಮನಕ್ಷತ್ರದಂದು ಶಿವನಿಗೆ ರುದ್ರಾಭಿಷೇಕ ಮಾಡಿಸುವುದು ಒಳ್ಳೆಯದು. ವೆಂಕಟೇಶ್ವರನ ಆರಾಧನೆಯಿಂದ ಸುಖ ಶಾಂತಿ ದೊರಕಲಿದೆ. ಒಟ್ಟಿನಲ್ಲಿ ಮೇ ತಿಂಗಳಲ್ಲಿ ನಿಮಗೆ ಶುಭವೇ ಜಾಸ್ತಿ.
ಶುಕ್ರವಾರ ಮತ್ತು ಬುಧವಾರಗಳು ಶುಭವಾರಗಳು. ನಿಮ್ಮ ರಾಶಿಯ ಅದೃಷ್ಟ ಸಂಖ್ಯೆ 5 ಮತ್ತು 6.
https://www.youtube.com/watch?v=v1e5X7H4g-M&list=UUljNtNUex4de_Yx5TFoiMPA&index=4
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ