ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅತಿ ಹೆಚ್ಚು ಸುದ್ದಿ ಮಾಡಿದ ಹಾಗೂ ವಿವಾದಕ್ಕೆ ಕಾರಣವಾದ ವಿಷಯ ಅಂದ್ರೆ, ಅದು ಕೃಷಿ ಕಾಯಿದೆ-2020. ಈ ಕಾಯಿದೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ರೈತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಕಾಯಿದೆಯನ್ನು ವಾಪಸ್ ಪಡೆಯಲು ಕೇಂದ್ರ ಸರ್ಕಾರ ಒಪ್ಪುತ್ತಿಲ್ಲ. ಪ್ರತಿಭಟನಾಕಾರರು ಮತ್ತು ಸರ್ಕಾರದ ನಡುವಿನ ಮಾತುಕತೆ ಮುರಿದುಬಿದ್ದಿದೆ. ವಿಷಯ ಸುಪ್ರೀಂಕೋರ್ಟ್‍ನ ಮೆಟ್ಟಿಲು ಹತ್ತಿದೆ. ಪ್ರತಿಭಟನಾನಿರತ ರೈತರು ಕಾಯಿದೆಯನ್ನು ವಾಪಸ್ ಪಡೆಯಲು ಅಕ್ಟೋಬರ್ 2ರ ಗಡುವು ನೀಡಿದ್ದು, ಕಾಯಿದೆಯನ್ನು ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ದೇಶದಲ್ಲಿನ ರೈತರ ಸಂಕಷ್ಟ ನಿವಾರಿಸಿ, ಅವರ ಆದಾಯ ವೃದ್ಧಿಗೆ ಸಹಾಯ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 3 ಕೃಷಿ ಕಾಯಿದೆಗಳನ್ನು ಜಾರಿಗೆ ತರಲು ಉದ್ದೇಶಿಸಿದೆ.
- ಮೊದಲನೆಯದು ರೈತರ ಉತ್ಪಾದನೆ, ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯಿದೆ -2020.
ಇದರನ್ವಯ ರೈತರು ತಮ್ಮ ಉತ್ಪನ್ನವನ್ನು ಯಾರಿಗೆ ಬೇಕಾದರೂ ಮಾರಬಹುದು. ಇ-ಕಾಮರ್ಸ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವ್ಯಾಪಾರ ವೇದಿಕೆಗಳ ಮೂಲಕ ತಮ್ಮ ಉತ್ಪನ್ನಗಳನ್ನು ಮಾರುವ ಅವಕಾಶ ಅವರಿಗೆ ಲಭಿಸುತ್ತದೆ. ಇದಕ್ಕೆ ಮಾರುಕಟ್ಟೆ ಶುಲ್ಕ, ಸೆಸ್ ಅಥವಾ ತೆರಿಗೆ ಇರುವುದಿಲ್ಲ.
- ಎರಡನೆಯದು ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆ -2020.
ಇದು ಖಾಸಗಿ ಕಂಪನಿಗಳ ಜೊತೆಗೆ ರೈತರು ಕಾಂಟ್ರಾಕ್ಟ್ ಫಾರ್ಮಿಂಗ್‍ಗೆ ಒಳಪಡಲು ಅವಕಾಶ ಕಲ್ಪಿಸುತ್ತದೆ. ವಿವಾದ ಉಂಟಾದಾಗ ಕಾನೂನಿನ ಪರಿಹಾರ ಕಲ್ಪಿಸುವ ವ್ಯವಸ್ಥೆ ಕುರಿತು ಮಾಹಿತಿ ನೀಡುತ್ತದೆ.
- ಮೂರನೆಯದು ಅಗತ್ಯ ಸರಕುಗಳ ತಿದ್ದುಪಡಿ ಕಾಯಿದೆ -2020.
ತುರ್ತು ಸಂದರ್ಭ ಹೊರತುಪಡಿಸಿ, ಉಳಿದ ಸಂದರ್ಭದಲ್ಲಿ ಖಾಸಗಿಯವರು ಆಹಾರ ಪದಾರ್ಥಗಳನ್ನು ಎಷ್ಟು ಬೇಕಾದರೂ, ಎಷ್ಟು ದಿನಗಳ ಕಾಲ ಬೇಕಿದ್ದರೂ ಸಂಗ್ರಹಿಸಿ ಇಡಬಹುದು. ಈವರೆಗೆ ಆಹಾರ ದಾಸ್ತಾನಿಗೆ ಮಿತಿ ಇತ್ತು. ಅದನ್ನೀಗ ತೆಗೆದು ಹಾಕಲಾಗುತ್ತಿದೆ. ಜೊತೆಗೆ, ಅಗತ್ಯ ವಸ್ತುಗಳ ಪಟ್ಟಿಯಿಂದ ಧಾನ್ಯಗಳು, ಬೇಳೆ ಕಾಳುಗಳು, ಆಲೂಗಡ್ಡೆ, ಈರುಳ್ಳಿ, ಎಣ್ಣೆಗಳಂತಹ ಪದಾರ್ಥಗಳನ್ನು ತೆಗೆದು ಹಾಕಲಾಗುತ್ತದೆ.
ಸರ್ಕಾರದ ಸಮರ್ಥನೆ:
ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಈ ಕಾಯಿದೆ ಹೊಂದಿದೆ. ರೈತರು ತಮ್ಮ ಬೆಳೆಯನ್ನು ಹೆಚ್ಚಿನ ಲಾಭಕ್ಕೆ ಯಾವುದೇ ಅಡ್ಡಿ ಇಲ್ಲದೆ, ಯಾರಿಗೆ ಬೇಕಾದರೂ ಮಾರಾಟ ಮಾಡಬಹುದು. ಕಾಯಿದೆ ಜಾರಿಗೂ ಮುನ್ನ ರಾಜ್ಯಗಳ ಜೊತೆ ಮಾತುಕತೆ ನಡೆಸಲಾಗಿದೆ. ಪ್ರಚಾರಕ್ಕೋಸ್ಕರ ಕಾಯಿದೆ ಕುರಿತು ಅಪಪ್ರಚಾರ ನಡೆಸಲಾಗುತ್ತಿದೆ ಎಂಬುದು ಕೇಂದ್ರದ ಆರೋಪ.
ಇನ್ನು, ಪ್ರತಿಭಟನಾನಿರತ ರೈತರ ಆರೋಪಗಳು ಹೀಗಿವೆ?:
1. 2012ರಲ್ಲಿ ಯುಪಿಎ ಸರ್ಕಾರ ಇಂತಹುದೇ ಕಾನೂನುಗಳನ್ನು ಜಾರಿಗೆ ತರಲು ಬಯಸಿದಾಗ ಲೋಕಸಭೆಯಲ್ಲಿ ಬಿಜೆಪಿಯ ಸುಷ್ಮಾ ಸ್ವರಾಜ್, ರಾಜ್ಯಸಭೆಯಲ್ಲಿ ಅರುಣ್ ಜೇಟ್ಲಿ ಅದನ್ನು ವಿರೋಧಿಸಿದ್ದರು. ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ಇದೆ. ಆದರೂ, ಅಲ್ಲಿನ ರೈತರ ಸ್ಥಿತಿ ಹೀನಾಯವಾಗಿದೆ. ಅಲ್ಲಿನ ಸರ್ಕಾರಗಳು ವಾರ್ಷಿಕವಾಗಿ 400 ಬಿಲಿಯನ್ ಡಾಲರ್ ಸಬ್ಸಿಡಿ ನೀಡುತ್ತಿವೆ. ಇದು ಭಾರತದಲ್ಲಿ ಅಸಾಧ್ಯ ಎಂದಿದ್ದರು. ಈಗ ಬಿಜೆಪಿಯೇ ಈ ಕಾಯಿದೆಯನ್ನು ಜಾರಿಗೆ ತರುತ್ತಿದೆ.
2. ಕೃಷಿಯನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ ಹುನ್ನಾರ ಈ ಕಾಯಿದೆಯ ಹಿಂದೆ ಅಡಗಿದೆ. ಲಾಭವೇ ಮುಖ್ಯವಾಗಿರುವ ಖಾಸಗಿ ಕಂಪನಿಗಳಿಂದ ರೈತರ ಉದ್ದಾರವಾಗುತ್ತದೆ ಎನ್ನುವುದನ್ನು ನಂಬುವುದು ಹೇಗೆ?. ಇದರ ಬದಲು ಎಪಿಎಂಸಿ ವ್ಯವಸ್ಥೆಯಲ್ಲಿನ ಲೋಪದೋಷ ಸರಿಪಡಿಸಬೇಕು. ಈಗಲೂ ಕೂಡ ರೈತರಿಗೆ ಕೆಲವು ಬೆಳೆಗಳನ್ನು ಕಾನೂನಾತ್ಮಕವಾಗಿ ದೇಶದ ಯಾವುದೇ ಭಾಗದಲ್ಲಿ ಮಾರಲು ಅವಕಾಶವಿದೆ. ಆದರೆ, ಸ್ಥಳೀಯವಾಗಿ ಮಾರಾಟ ಮಾಡಿ, ನಿಶ್ಚಿತವಾದ ಹಣ ಪಡೆಯುವ ಅವಕಾಶವನ್ನು ಎಪಿಎಂಸಿ ವ್ಯವಸ್ಥೆ ಕಲ್ಪಿಸಿದೆ.
3. ಭಾರತದಲ್ಲಿ ಶೇ. 80ರಷ್ಟು ರೈತರು ಸಣ್ಣ ಹಾಗೂ ಅತಿ ಸಣ್ಣ ರೈತರು. ಇವರಿಗೆ ತಮ್ಮ ಉತ್ಪನ್ನಗಳನ್ನು ದೂರದ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಲು ಸಾಧ್ಯವಾಗುವುದಿಲ್ಲ. ಎಪಿಎಂಸಿ ವ್ಯವಸ್ಥೆ ಕುಸಿದು, ಮನೆ ಬಾಗಿಲಲ್ಲೇ ಮಾರಾಟ ಮಾಡುವ ಅನಿವಾರ್ಯತೆ ಉಂಟಾದಾಗ ಬೆಲೆಯಲ್ಲಿ ಮೋಸವಾಗುವ ಸಾಧ್ಯತೆ ಇದೆ. ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಸಾಮಥ್ರ್ಯ ಇವರಿಗೆ ಇರುವುದಿಲ್ಲ.
4. ಎಪಿಎಂಸಿ ವ್ಯವಸ್ಥೆಯನ್ನು ರದ್ದು ಮಾಡುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಎಪಿಎಂಸಿ ಆವರಣದಲ್ಲಿನ ಮಾರಾಟಕ್ಕೆ ತೆರಿಗೆ ವಿಧಿಸಿದರೆ, ಹೊರಗಡೆಯ ಮಾರಾಟಕ್ಕೆ ತೆರಿಗೆ ರಹಿತ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
5. ಬೆಂಬಲ ಬೆಲೆ ಇರುತ್ತೆ ಎನ್ನುತ್ತದೆ ಸರ್ಕಾರ. ಆದರೆ, ವರ್ಷಗಳು ಉರುಳಿದಂತೆ ಇದನ್ನು ರದ್ದುಮಾಡಿದರೆ ರೈತರು ಏನು ಮಾಡುವುದು. ಅಲ್ಲದೆ, ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿರುವ ಆಹಾರ ಪದಾರ್ಥಗಳಿಗೆ ಬೆಂಬಲ ಬೆಲೆ ಸಿಗುವುದಿಲ್ಲ. ಅಲ್ಲದೆ, ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ಸಿಗುವ ಸಾಧ್ಯತೆ ಕಡಿಮೆ.
6. ಮಧ್ಯವರ್ತಿಗಳಿಂದ ರೈತರ ಶೋಷಣೆಯನ್ನು ತಪ್ಪಿಸುವುದು ಈ ಕಾಯಿದೆಯ ಉದ್ದೇಶ ಎನ್ನುತ್ತದೆ ಸರ್ಕಾರ. ಆದರೆ, ಹೊಸ ವ್ಯವಸ್ಥೆಯಲ್ಲಿ ಕೂಡ ದೊಡ್ಡ ಕುಳಗಳ ಪ್ರತಿನಿಧಿಯಾಗಿ ಹಲವು ಹಂತದ ಮಧ್ಯವರ್ತಿಗಳು ಹುಟ್ಟಿಕೊಳ್ಳುತ್ತಾರೆ.
7. ದೊಡ್ಡ ಕುಳಗಳು ರೈತರಿಂದ ಖರೀದಿಸಿದ ಬೇಳೆ ಕಾಳುಗಳನ್ನು ದೊಡ್ಡ ಪ್ರಮಾಣದಲ್ಲಿ ದಾಸ್ತಾನು ಮಾಡಿ, ತಮಗೆ ಸರಿಕಂಡ ಬೆಲೆ ಸಿಗುವಂತಾದಾಗ ಬಿಡುಗಡೆ ಮಾಡುತ್ತಾರೆ. ಆಗ, ಸಣ್ಣ ಪುಟ್ಟ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು ಸ್ಪರ್ಧೆ ಎದುರಿಸಲಾಗದೆ ಬಾಗಿಲು ಮುಚ್ಚುವುದು ಅನಿವಾರ್ಯ. ಆಗ ಹೆಚ್ಚಿನ ಬೆಲೆ ತೆರುವುದು ಗ್ರಾಹಕರಿಗೆ ಅನಿವಾರ್ಯ.
8. ಇನ್ನು ಮುಂದೆ ಆಹಾರ ವಸ್ತುಗಳ ಕಳ್ಳ ದಾಸ್ತಾನು, ಅಕ್ರಮ ಶೇಖರಣೆ ಇರುವುದಿಲ್ಲ. ಏಕೆಂದರೆ, ಇದನ್ನು ಕಾನೂನುಬದ್ಧಗೊಳಿಸಲಾಗುತ್ತದೆ.
9. ಒಪ್ಪಂದ ಕೃಷಿಯನ್ನು ಎರಡು ರೀತಿಯಲ್ಲಿ ನಡೆಸಲು ಅವಕಾಶವಿದೆ. ತಮ್ಮ ಜಮೀನಿನಲ್ಲಿ ಬೆಳೆಯುವ ಫಸಲಿಗೆ ಮೊದಲೇ ದರ ನಿಗಡಿಪಡಿಸಿ ಕಂಪನಿ ಹೇಳಿದ ಗುಣಮಟ್ಟದ ಉತ್ಪನ್ನ ನೀಡುವುದು ಒಂದು ವಿಧ. ಇಂತಹ ಸಂದರ್ಭದಲ್ಲಿ ಮೊದಲಿನ ಒಂದೆರಡು ವರ್ಷ ಉತ್ತಮ ನಡೆ ಪ್ರದರ್ಶಿಸುವ ಕಂಪನಿಗಳು, ನಂತರ ಕ್ಯಾತೆ ತೆಗೆಯುತ್ತವೆ.
10. ಒಪ್ಪಂದ ಕೃಷಿಯಲ್ಲಿ ತಕರಾರು ಉಂಟಾದರೆ, ಕಂದಾಯ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸುವ ಅವಕಾಶವೇನೋ ಇದೆ. ಆದರೆ, ಫಸಲಿನ ಗುಣಮಟ್ಟದಲ್ಲಿ ಭಿನ್ನಾಭಿಪ್ರಾಯ ಉಂಟಾದರೆ ತಕ್ಷಣ ಪರಿಹಾರ ಸಾಧ್ಯವೇ?. ಪರಿಹಾರ ಸಿಗುವವರೆಗೆ, ಹಣ್ಣು, ತರಕಾರಿಗಳನ್ನು ಸಂರಕ್ಷಿಸಿ ಇಡಲು ಸಾಧ್ಯವೇ? ಎಂಬುದು ರೈತರ ಪ್ರಶ್ನೆ.
11. ರೈತರ ಜಮೀನನ್ನು ನಿರ್ದಿಷ್ಟ ಅವಧಿಗೆ ಗುತ್ತಿಗೆ ಪಡೆದು, ಕಂಪನಿಗಳೇ ಬೇಸಾಯ ಮಾಡುವುದು ಒಪ್ಪಂದ ಕೃಷಿಯ ಇನ್ನೊಂದು ವಿಧ. ಆಗ, ಸೀಮಿತ ಅವಧಿಯಲ್ಲಿ ಫಸಲು ತೆಗೆದು, ಲಾಭ ಗಳಿಸಲು ಕಂಪನಿಗಳು ಅತಿಯಾದ ರಾಸಾಯನಿಕ ಗೊಬ್ಬರ, ಅಧಿಕ ನೀರನ್ನು ಬಳಸಬಹುದು. ಗುತ್ತಿಗೆ ಅವಧಿ ಮುಗಿದು ತನ್ನ ಭೂಮಿಯನ್ನು ವಾಪಸ್ ಪಡೆಯುವಾಗ ರೈತರಿಗೆ ದಕ್ಕುವುದು ಬಂಜರು ಭೂಮಿ ಮಾತ್ರ. ಇವುಗಳಿಗೆ ಕಾನೂನಿನಲ್ಲಿ ಪರಿಹಾರ ಸಿಗುವುದಿಲ್ಲ.
12. ಇನ್ನು, ಗುತ್ತಿಗೆ ಕೃಷಿ ಮಾಡುವವರು ಫಲವತ್ತಾದ ದೊಡ್ಡ ಹಿಡುವಳಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆಯೇ ಹೊರತು ಸಣ್ಣ, ಸಾಮಾನ್ಯ ಹಿಡುವಳಿಗಳನ್ನಲ್ಲ.
13. ಅಲ್ಲದೆ, ಸಣ್ಣ ಮತ್ತು ಅತಿ ಸಣ್ಣ ಹಿಡುವಳಿ, ನೀರಾವರಿಯ ಸೌಲಭ್ಯ ಇಲ್ಲದಿರುವುದು, ಹವಾಮಾನ ವೈಪರೀತ್ಯ, ಬೀಜ, ಗೊಬ್ಬರಗಳ ಮೇಲೆ ಕಂಪನಿಗಳ ನಿಯಂತ್ರಣ ಸೇರಿದಂತೆ ಇಂದು ಕೃಷಿ ಕ್ಷೇತ್ರ ಅನುಭವಿಸುತ್ತಿರುವ ಯಾವ ಸಮಸ್ಯೆಗಳ ಬಗ್ಗೆಯೂ ಈ ಕಾಯಿದೆ ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ರೈತರು.
ರೈತರ ಆರೋಪಗಳು ಏನೇ ಇರಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನ ಕೂಗಿಗೆ ಆಳುವ ಸರ್ಕಾರ ಬೆಲೆ ಕೊಡಬೇಕು. ಹೀಗಾಗಿ, ದೇಶಕ್ಕೆ ಇಷ್ಟು ವರ್ಷ ಅನ್ನ ನೀಡಿದ ರೈತನ ಅಳಲನ್ನು ಸರ್ಕಾರ ಕೇಳಬೇಕು. ಅವರ ಮನವೊಲಿಸಿ, ಕಾಯಿದೆ ಜಾರಿಗೆ ಮುಂದಾಗಬೇಕು ಎಂಬುದು ನಮ್ಮ ಆಗ್ರಹ.
watch;
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ