ಇತ್ತೀಚಿನ ದಿನಗಳಲ್ಲಿ ಸೌರವ್ಯೂಹದಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿರುವ ಗ್ರಹವೆಂದರೆ ಅದು ಮಂಗಳಗ್ರಹ. ಚಂದ್ರನ ನಂತರ ಮಾನವನ ಕುತೂಹಲಗಳಿಗೆ ತೆರೆದುಕೊಂಡಿರುವ ಗ್ರಹವೆಂದರೆ ಅದು ಮಂಗಳ. ಮನುಜನ ಕುಲವನ್ನೇ ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿರುವ, ಕೌತುಕ, ರಹಸ್ಯಗಳನ್ನೇ ತನ್ನ ಒಡಲಾಳದಲ್ಲಿ ಬಚ್ಚಿಟ್ಟುಕೊಂಡಿರುವ ಗ್ರಹವಿದು. ಮಂಗಳನ ಅಂಗಳದಲ್ಲಿ ಅಗೆದಷ್ಟು, ಬಗೆದಷ್ಟೂ ರಹಸ್ಯಗಳು ಹೊರಬೀಳುತ್ತಲೇ ಇವೆ. ಭೂಮಿಯ ನಂತರ ವಾಸಕ್ಕೆ ಯೋಗ್ಯವಾದ ಗ್ರಹ ಎಂದರೆ ಅದು ಮಂಗಳ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಅಷ್ಟೇ ಏಕೆ?, 1960ರಿಂದ, ಅಂದರೆ, ಕಳೆದ 60 ವರ್ಷಗಳಲ್ಲಿ ಸುಮಾರು 49ಕ್ಕೂ ಹೆಚ್ಚು ಸಂಶೋಧನಾ ಅಧ್ಯಯನಗಳು ಈ ನಿಟ್ಟಿನಲ್ಲಿ ಮಂಗಳನ ಅಂಗಳದಲ್ಲಿ ನಡೆದಿವೆ.
ಕೆಂಪುಗ್ರಹವಿದು:
ನಮ್ಮ ಸೌರಮಂಡಲದ ಎರಡನೆಯ ಅತಿ ಚಿಕ್ಕ ಗ್ರಹ ಮಂಗಳ. ಭೂಮಿಯ ಅರ್ಧದಷ್ಟು, ಅಂದರೆ, 6,790 ಕಿ.ಮೀ.ಗಳಷ್ಟು ವ್ಯಾಸ ಹೊಂದಿರುವ ಈ ಗ್ರಹವನ್ನು ಕೆಂಪುಗ್ರಹವೆಂದೇ ಕರೆಯಲಾಗುತ್ತದೆ. ತನ್ನ ಕಕ್ಷೆಯ ಪರಿಭ್ರಮಣಕ್ಕೆ 24 ಗಂಟೆ ತೆಗೆದುಕೊಳ್ಳುವ ಈ ಗ್ರಹಕ್ಕೆ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಲು 687 ದಿನಗಳು ಬೇಕು. ಸೂರ್ಯನಿಂದ ಬರೋಬ್ಬರಿ 22 ಕೋಟಿ 80 ಲಕ್ಷ ಕಿ.ಮೀ.ಗಳಷ್ಟು ದೂರದಲ್ಲಿ, ಭೂಮಿಯಿಂದ 300 ಮಿಲಿಯನ್ ಮೈಲುಗಳಷ್ಟು ದೂರದಲ್ಲಿ ಈ ಗ್ರಹವಿದೆ. ಹೀಗಾಗಿ, ಮಂಗಳನ ದೈನಂದಿನ ಚಲನೆ ಮತ್ತು ಋತುಮಾನಗಳು ಭೂಮಿಯ ಚಲನೆ ಮತ್ತು ಋತುಮಾನಗಳನ್ನು ಹೋಲುತ್ತವೆ. ಇನ್ನು, ಮಂಗಳನ ಗುರುತ್ವಾಕರ್ಷಣ ಬಲ ಹೆಚ್ಚುತ್ತಿದ್ದು, ಇದರಿಂದಾಗಿ, ಅದರ ಸ್ವಾಭಾವಿಕ ಉಪಗ್ರಹ ವಿನಾಶಕ್ಕೆ ಒಳಗಾಗುತ್ತಿದೆ ಎನ್ನುತ್ತಾರೆ ವಿಜ್ಞಾನಿಗಳು.
ಭೂಮಿಯ ಸಾಂಧ್ರತೆಯ ಶೇ.1ರಷ್ಟು ವಾತಾವರಣವನ್ನು ಈ ಗ್ರಹ ಹೊಂದಿದೆ. ಮಂಗಳನ ಮೇಲ್ಮೈಯಿಂದ 37-40 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಅಟೊಮಿಕ್ ಆಕ್ಸಿಜನ್ ಪತ್ತೆಯಾಗಿದೆ. ನಾಸಾ ಸಂಶೋಧಕರು ಸೋಫಿಯಾ, ಅಂದರೆ, (Stratospheric Observatory for Infrared Astronomy) ಎಂಬ ವಾಯುಮಂಡಲ ಪರಿಶೀಲನೆಯ ತಂತ್ರಜ್ಞಾನ ಬಳಸಿ ಅಟೊಮಿಕ್ ಆಮ್ಲಜನಕವನ್ನು ಪತ್ತೆ ಹಚ್ಚಿದ್ದಾರೆ.
ಎರಡು ಪರಮಾಣುಗಳ ಪರಸ್ಪರ ಸಂಯೋಜನೆಯಿಂದ ಉಂಟಾಗುವ ಆಮ್ಲಜನಕ, O2, ನಾವು ಭೂಮಿಯ ಮೇಲೆ ಉಸಿರಾಡುವ ಆಮ್ಲಜನಕದ ಪ್ರಮಾಣ. ಆದರೆ, ಮಂಗಳನ ಅಂಗಳದಲ್ಲಿ ಪತ್ತೆಯಾದ ಪರಮಾಣು ಆಕ್ಸಿಜನ್, ಒಂದೇ ಪರಮಾಣುವಾಗಿದೆ. ಆದರೆ, ಮಂಗಳನಲ್ಲಿ ಆಮ್ಲಜನಕಕ್ಕಿಂತ ಇಂಗಾಲದ ಡೈ ಆಕ್ಸೈಡ್ ಪ್ರಮಾಣವೇ ಹೆಚ್ಚು. ಇದರ ಮೇಲ್ಮೈ ಕೆಂಪಾಗಿ ಕಾಣಲು ಅದರಲ್ಲಿನ ಕಬ್ಬಿಣದ ಡೈ ಆಕ್ಸೈಡ್ ಕಾರಣ.
ಹಿಂದೆ ಇಲ್ಲಿ ನೀರಿತ್ತು:
400 ಕೋಟಿ ವರ್ಷಗಳ ಹಿಂದೆ ಮಂಗಳನಲ್ಲಿ ನೀರಿತ್ತು. ಉಷ್ಣಾಂಶದ ಕಾರಣ ಅದು ಆವಿಯಾಗಿದೆ. ಹೀಗಾಗಿ, ಹಲವು ವರ್ಷಗಳ ಹಿಂದೆಯೇ ಇಲ್ಲಿ ನೀರು ಹುದುಗಿ ಹೋಗಿದೆ. ಮಂಗಳನ ಒಳಗೆ ಕುದಿಯುತ್ತಿದ್ದ ಲಾವಾರಸ ಮೇಲ್ಮೈಯನ್ನು ಬಿಸಿ ಮಾಡಿದೆ. ಹೀಗಾಗಿ, ಮೇಲ್ಮೈ ಕಾದ ಕಬ್ಬಿಣವಾಗಿದೆ. ಈ ಬಿಸಿಗೆ ಇಲ್ಲಿನ ಹಿಮ ಕರಗಿದೆ. ಮೇಲ್ಮೈಯಲ್ಲಿ ಹರಡಿದ್ದ ಹಿಮ 2 ಕಿ.ಮೀ. ದಪ್ಪವಾಗಿತ್ತು ಎನ್ನುತ್ತಾರೆ ವಿಜ್ಞಾನಿಗಳು. ಮಂಗಳನ ಮೇಲ್ಮೈ ಮೇಲೆ ಹೆಮಟೈಟ್ ಹಾಗೂ ಜಿಯೋತೈಟ್ ಖನಿಜಗಳು ಕಂಡು ಬಂದಿದ್ದು, ಇವು ನೀರಿನ ಉಪಸ್ಥಿತಿಯಲ್ಲಿ ಮಾತ್ರ ಕಂಡು ಬರುತ್ತವೆ.
ಈ ಮಧ್ಯೆ, ಮಂಗಳನಲ್ಲಿ ಏಲಿಯನ್ ಕುರಿತ ಕುರುಹುಗಳು, ಪಿಸ್ತೂಲ್ ಮಾದರಿಯ ವಸ್ತುಗಳು, ಬಂಡೆಕಲ್ಲುಗಳ ಮಧ್ಯೆ ಕಿತ್ತಳೆ ಬಣ್ಣದ ಇಲಿಯನ್ನೇ ಹೋಲುವ ಆಕೃತಿಗಳು ಪತ್ತೆಯಾಗಿವೆ. ಅಷ್ಟೇ ಅಲ್ಲ, 10 ವಿಧದ ತರಕಾರಿಗಳನ್ನೂ ಸಹ ವಿಜ್ಞಾನಿಗಳು ಇಲ್ಲಿ ಬೆಳೆದಿದ್ದಾರೆ.
ಜೀವಿಗಳ ಪತ್ತೆಗೆ ಬಳಕೆಯಾಗುತ್ತಿದೆ ರಾಮನ್ ಎಫೆಕ್ಟ್:
ಭಾರತ, ಅಮೆರಿಕ, ಬ್ರಿಟನ್, ರಷ್ಯಾ, ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಮಂಗಳನ ಅಂಗಳಕ್ಕೆ ದಾಳಿ ಇಟ್ಟಿವೆ. 2013ರಲ್ಲಿ ಮೊದಲ ಬಾರಿಗೆ ಭಾರತ, ಮಂಗಳನ ಅಂಗಳಕ್ಕೆ ಉಪಗ್ರಹ ಉಡಾವಣೆ ಮಾಡಿತ್ತು. ವಿಶೇಷವೆಂದರೆ, ಭೂಮಿಯ ಹೊರತಾಗಿ ಅನ್ಯ ಗ್ರಹಗಳಲ್ಲಿ ಜೀವಿಗಳಿವೆಯೇ ಎಂಬುದನ್ನು ಪತ್ತೆ ಹಚ್ಚಲು ಭಾರತದ ಸುಪ್ರಸಿದ್ಧ ವಿಜ್ಞಾನಿ ಸರ್.ಸಿ.ವಿ.ರಾಮನ್ ಆವಿಷ್ಕರಿಸಿದ ರಾಮನ್ ಎಫೆಕ್ಟ್ ಸಿದ್ಧಾಂತವನ್ನೇ ಬಳಸಿಕೊಳ್ಳಲಾಗುತ್ತಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, 2021ರ ಫೆಬ್ರವರಿಯಲ್ಲಿ ಮಂಗಳ ಗ್ರಹದ ಮೇಲೆ ಪರ್ಸೆವೇರನ್ಸ್ ರೋವರ್ ಅಂತರಿಕ್ಷ ವಾಹನವನ್ನು ಇಳಿಸಿದ್ದು, ಇದರಲ್ಲಿ ಅಳವಡಿಸಲಾದ ವಿಶೇಷ ಉಪಕರಣ ಶೆರ್ಲಾಕ್, ರಾಮನ್ ಎಫೆಕ್ಟ್ ಆಧಾರದಲ್ಲೇ ಮಂಗಳನ ಅಂಗಳದ ಮೇಲೆ ಹಿಂದೆ ಜೀವನ ಇತ್ತೇನು ಎಂಬುದನ್ನು ಪತ್ತೆ ಹಚ್ಚಲಿದೆ. ಅಷ್ಟೇ ಅಲ್ಲ, ಈ ಪರ್ಸೆವೆರೆನ್ಸ್ ರೋವರ್‍ನ್ನು ಮಂಗಳನ ಕಕ್ಷೆಗೆ ಯಶಸ್ವಿಯಾಗಿ ಇಳಿಸಿದ ನಾಸಾ ವಿಜ್ಞಾನಿಗಳ ತಂಡದ ನೇತೃತ್ವವನ್ನು ವಹಿಸಿದ್ದು, ಕನ್ನಡನಾಡಿನ ಕುವರಿ ಸ್ವಾತಿ ಮೋಹನ್ ಎಂಬುದು ಮತ್ತೊಂದು ಹೆಮ್ಮೆಯ ಸಂಗತಿ.
1997ರಲ್ಲಿ ನಾಸಾ ಉಡಾಯಿಸಿದ್ದ ಮೊದಲ ರೋವರ್, "ದಿ ಸೋಜರ್ನರ್' ಅಲ್ಲಿನ ಸಾಗರ ತೀರದ ಚಿತ್ರಗಳನ್ನು ರವಾನಿಸಿದೆ. ಸರಿಸುಮಾರು 300 ವರ್ಷಗಳ ಹಿಂದೆ ಉಂಟಾದ ದೊಡ್ಡ ಪ್ರವಾಹದಿಂದ ಈ ಸಾಗರ ನಿರ್ಮಾಣವಾಗಿದೆ ಎನ್ನುತ್ತಾರೆ ವಿಜ್ಞಾನಿಗಳು. ಸಾಗರ ತೀರ ಪ್ರದೇಶದಲ್ಲಿ ಕಾಣಿಸಿರುವ ಕೆಸರು ಅಥವಾ ಕಲ್ಲಿನ ತುಣುಕುಗಳಿಂದ ಈ ಪ್ರದೇಶ ದೊಡ್ಡ ಪ್ರಕೃತಿ ವಿಕೋಪಕ್ಕೆ ತುತ್ತಾಗಿತ್ತು. ನಂತರ ಈ ಸಾಗರ ಸೃಷ್ಟಿಯಾಗಿದೆ. ಅಲ್ಲಿ ಜೀವಿಗಳಿಗೆ ವಾಸಯೋಗ್ಯ ವಾತಾವರಣವಿದೆ ಎನ್ನುವ ಅಭಿಪ್ರಾಯ ವಿಜ್ಞಾನಿಗಳದು.
ಲೇಔಟ್ ನಿರ್ಮಾಣಕ್ಕೆ ಯತ್ನ:
ಮಂಗಳನ ಅಂಗಳದಲ್ಲಿ ಮನುಷ್ಯ ವಾಸಿಸಲು ಅನುಕೂಲವಾಗುವಂತಹ ವ್ಯವಸ್ಥೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಸಂಶೋಧನೆಗಳು ನಡೆಯುತ್ತಲೇ ಇವೆ. ಮುಂದಿನ ದಿನಗಳಲ್ಲಿ ಈ ಗ್ರಹದಲ್ಲಿ ಲೇಔಟ್ ನಿರ್ಮಾಣಕ್ಕೆ ಕೂಡ ಪ್ಲ್ಯಾನ್ ಮಾಡಲಾಗುತ್ತಿದೆ.
ಆದರೆ, ಹೆಪ್ಪುಗಟ್ಟಿರುವ ನೀರು, ಕಾಂತಕ್ಷೇತ್ರ ಇಲ್ಲದಿರುವುದು, ವಿರಳ ವಾಯುಮಂಡಲ. ಮೇಲ್ಮೈ ಮೇಲೆ ಶಾಖದ ಸಂವಹನವಾಗದೆ ಸೂರ್ಯನ ವಿಕಿರಣ ಹಾಗೂ ಉಲ್ಕೆಗಳಿಂದ ರಕ್ಷಣೆ ಸಿಗದಿರುವುದು, ನೀರನ್ನು ಜಲರೂಪದಲ್ಲಿ ಇಟ್ಟುಕೊಳ್ಳಲು ಬೇಕಾಗುವಷ್ಟು ವಾಯುವಿನ ಒತ್ತಡ ಇಲ್ಲದಿರುವುದು, ಇದರ ಒಳಭಾಗದಲ್ಲಿ ಅಗ್ನಿಪರ್ವತಗಳ ಚಟುವಟಿಕೆ ನಿಂತಿರುವುದು ಸೇರಿದಂತೆ ಹಲವು ನೈತ್ಯಾತ್ಮಕ ಸಂಗತಿಗಳು ಮಂಗಳನಲ್ಲಿ ಜೀವಿಗಳ ವಾಸಕ್ಕೆ ತೊಂದರೆಯನ್ನು ತಂದೊಡ್ಡಿವೆ. ಆದರೂ, ಈ ನಿಟ್ಟನಲ್ಲಿ ವಿಜ್ಞಾನಿಗಳು ನಡೆಸುತ್ತಿರುವ ಶ್ರಮ, ಪ್ರಯತ್ನ ಶ್ಲಾಘನೀಯ ಹಾಗೂ ಅಭಿನಂದನಾರ್ಹ.
https://www.youtube.com/watch?v=TbUqYPaXsA4
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ