ಮಂಗಳವಾರ, ಏಪ್ರಿಲ್ 13, 2021

ವೃಷಭ ಹಾಗೂ ತುಲಾ ರಾಶಿ ಫಲ


    ನಾವು ಈವತ್ತು ಮೇ ತಿಂಗಳಲ್ಲಿನ ವೃಷಭ ಹಾಗೂ ತುಲಾ ರಾಶಿಗಳವರ ರಾಶಿಫಲ ಹೇಗಿದೆ ಎಂಬುದನ್ನು ನೋಡೋಣ. ಮೇ ತಿಂಗಳಲ್ಲಿನ ಗೋಚಾರ ಫಲ, ಅಂದರೆ, ಯಾವ ರಾಶಿಯಲ್ಲಿ ಯಾವ ಗ್ರಹದ ಸಂಚಾರವಿದೆ, ಗ್ರಹಗಳ ಸ್ಥಾನಪಲ್ಲಟ, ಅದರಿಂದ ಆ ರಾಶಿಯ ಮೇಲೆ ಆಗುವಂತಹ ಪರಿಣಾಮಗಳು ಮತ್ತು ಗ್ರಹದೋಷಗಳ ನಿವಾರಣೆಗೆ ಇರುವಂತಹ ಪರಿಹಾರ ಕ್ರಮಗಳ ಬಗ್ಗೆ ನೋಡೋಣ. 

ವೃಷಭ ರಾಶಿ

    ವೃಷಭ ಹಾಗೂ ತುಲಾ, ಈ ಎರಡೂ ರಾಶಿಗಳಿಗೆ ಅಧಿಪತಿ ಆಗಿರುವಂತವನು ಶುಕ್ರ. ಮೇ 4ರಂದು ಶುಕ್ರ, ವೃಷಭ ರಾಶಿ ಪ್ರವೇಶಿಸಲಿದ್ದು, ಮೇ 28ರವರೆಗೂ ಇಲ್ಲಿಯೇ ಇರಲಿದ್ದಾನೆ. ತನ್ನದೇ ಆಧಿಪತ್ಯದ ಉಚ್ಛಸ್ಥಾನದಲ್ಲಿರುವ ಶುಕ್ರ, ನಿಮಗೆ ಶುಭಫಲಗಳನ್ನು ನೀಡಲಿದ್ದಾನೆ. ಭೋಗ ಜೀವನದ ಸುಖ-ಸಮೃದ್ಧಿಯನ್ನು ನೀಡಲಿದ್ದಾನೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. 

    ಆದರೆ, ಗುರು ದಶಮ ಸ್ಥಾನದಲ್ಲಿ ಇರುವುದರಿಂದ ವೃಷಭ ರಾಶಿಯವರಿಗೆ ಈ ತಿಂಗಳಲ್ಲಿ ಗುರುಬಲ ಕಡಿಮೆ. ಹೀಗಾಗಿ, ಹೊಸ ಕಾರ್ಯ, ವ್ಯವಹಾರಗಳಿಗೆ ಕೈ ಹಾಕಿದರೆ, ಅಡಚಣೆ ಎದುರಾದೀತು. ಕುಟುಂಬದಲ್ಲಿ ಸ್ವಲ್ಪ ಕಿರಿಕಿರಿ, ಕೋರ್ಟು, ಕಚೇರಿ ವ್ಯಾಜ್ಯಗಳಲ್ಲಿ ತೊಂದರೆ ಎದುರಾದೀತು. ಹಣಕಾಸಿನ ತೊಂದರೆ ಕಾಡಬಹುದು. ಇನ್ನು, 9ನೇ ಸ್ಥಾನದಲ್ಲಿರುವ ಶನಿ, ಜನ್ಮರಾಶಿಯಲ್ಲಿರುವ ರಾಹು, ಬುಧ ಹಾಗೂ ಸಪ್ತಮ ಭಾವದಲ್ಲಿ ಇರುವ ಕೇತುವಿನಿಂದಾಗಿ ಧನಹಾನಿ ಉಂಟಾಗುವ ಸಾಧ್ಯತೆಯಿದೆ. ಅನಾರೋಗ್ಯ, ಬಂಧುಗಳ ಜೊತೆ ವಿರೋಧ, ಸಲ್ಲದ ಅಪವಾದ, ಅಧಿಕ ತಿರುಗಾಟಗಳು ಎದುರಾಗಬಹುದು. ಗಂಡ-ಹೆಂಡತಿ ನಡುವೆ, ತಂದೆ-ತಾಯಿಗಳ ಜತೆ ಆಗಾಗ ಜಗಳವಾಗುವ ಸಾಧ್ಯತೆ ಇದೆ. ತಂದೆಗೆ ಅನಾರೋಗ್ಯ ಕಾಡಬಹುದು. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಕಿರಿ ಕಿರಿ ಎದುರಾಗಬಹುದು.


    ಇನ್ನು, ಮೇ 26ರವರೆಗೆ ಇದೇ ರಾಶಿಯಲ್ಲಿರುವ ಬುಧ ಕೂಡ ನಿಮಗೆ ಶುಭ ಫಲವನ್ನೇ ನೀಡಲಿದ್ದಾನೆ. ಈ ಮಧ್ಯೆ, ಬುಧ, ಮೇ 26ರಂದು ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಮೇ 29ರಂದು ಮಿಥುನದಲ್ಲಿರುವ ಬುಧ, ವಕ್ರಗತಿಯ ಚಲನೆ ಆರಂಭಿಸಿ, ಜೂನ್ 2ಕ್ಕೆ ಮತ್ತೆ ವೃಷಭಕ್ಕೆ ಪ್ರವೇಶ ಮಾಡಲಿದ್ದಾನೆ. ಇನ್ನು ದ್ವಿತೀಯ ಭಾವದಲ್ಲಿರುವ ಕುಜ ಪ್ರತಿಕೂಲ ಪರಿಣಾಮವನ್ನೇ ಬೀರುವ ಸಾಧ್ಯತೆಯಿದ್ದು, ಶತ್ರುಗಳು ನಿಮ್ಮನ್ನು ಕಾಡಬಹುದು. 

    ಹೀಗಾಗಿ, ಸಂಕಷ್ಟ ಪರಿಹಾರಕ್ಕಾಗಿ ನವಗ್ರಹ ಶಾಂತಿ ಅಥವಾ ಶನಿಶಾಂತಿ ಮಾಡಿಸುವುದು ಒಳ್ಳೆಯದು. ಇನ್ನು ಜನ್ಮ ನಕ್ಷತ್ರದಂದು ಶಿವನಿಗೆ ರುದ್ರಾಭಿಷೇಕ, ಶುಕ್ರವಾರದಂದು ದುರ್ಗಾಪೂಜೆ ಮಾಡುವುದರಿಂದ ಒಳಿತಾಗಲಿದೆ. ಒಟ್ಟಾರೆ ನೋಡುವುದಾದರೆ, ಮೇ ತಿಂಗಳು ಮಿಶ್ರಫಲದಾಯಕ ಎನ್ನಬಹುದು. ವೃಷಭ ರಾಶಿಯವರಿಗೆ ಬುಧವಾರ ಮತ್ತು ಶನಿವಾರ ಶುಭ ವಾರಗಳು. ಅದೃಷ್ಟ ಸಂಖ್ಯೆಗಳು 1,2 ಮತ್ತು 8.


ತುಲಾ ರಾಶಿ:

    ಇನ್ನು, ತುಲಾ ರಾಶಿಯನ್ನು ನೋಡುವುದಾದರೆ, ರಾಶಿಯ ಅಧಿಪತಿಯಾಗಿರುವ ಶುಕ್ರ, ಮೇ 4ರಂದು ತನ್ನದೇ ಆದಿಪತ್ಯದ ಇನ್ನೊಂದು ರಾಶಿಯಾಗಿರುವ ವೃಷಭಕ್ಕೆ ಬರಲಿದ್ದಾನೆ. ಮೇ 28ರವರೆಗೂ ವೃಷಭದಲ್ಲಿಯೇ ಇರಲಿದ್ದಾನೆ. ತನ್ನದೇ ಆಧಿಪತ್ಯದ ಉಚ್ಛಸ್ಥಾನದಲ್ಲಿರುವ ಶುಕ್ರ, ನಿಮಗೆ ಶುಭಫಲಗಳನ್ನೇ ನೀಡಲಿದ್ದಾನೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ.

    ಅಷ್ಟೇ ಅಲ್ಲ, ಪಂಚಮ ಭಾವದಲ್ಲಿರುವ ಗುರುವಿಂದಾಗಿ ನಿಮಗೆ ಗುರು ಬಲ ಜಾಸ್ತಿ. ಹೀಗಾಗಿ, ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಮನೆಯಲ್ಲಿ ಮಂಗಲ ಕಾರ್ಯಗಳು ಜರುಗಲಿವೆ. ಕೆಲಸ-ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಉನ್ನತ ಸ್ಥಾನ ಪ್ರಾಪ್ತಿಯ ಯೋಗವಿದೆ. ಹೊಸ ವಾಹನಗಳ ಖರೀದಿ ಮಾಡಬಹುದು. 

    ಇನ್ನು, ಅಷ್ಟಮ ಭಾವದಲ್ಲಿ ಇರುವ ಬುಧ ಕೂಡ ನಿಮಗೆ ಶುಭ ಫಲವನ್ನೇ ನೀಡುತ್ತಾನೆ. ಮೇ 26ರಂದು ಬುಧ, ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಮೇ 29ರಂದು ಮಿಥುನದಲ್ಲಿರುವ ಬುಧ, ವಕ್ರಗತಿಯ ಚಲನೆ ಆರಂಭಿಸಿ, ಜೂನ್ 2ಕ್ಕೆ ಮತ್ತೆ ವೃಷಭಕ್ಕೆ ಪ್ರವೇಶ ಮಾಡಲಿದ್ದಾನೆ. 

    ಆದರೆ, ಚತುರ್ಥ ಭಾವದಲ್ಲಿರುವ ಶನಿ ಹಾಗೂ 9ನೇ ಮನೆಯಲ್ಲಿರುವ ಕುಜ, ನಿಮ್ಮ ರಾಶಿಗೆ ಶುಭಕರವಾಗಿಲ್ಲ. ರಾಹು ಅಷ್ಟಮದಲ್ಲಿದ್ದು, ಕೇತು ದ್ವಿತೀಯ ಭಾವದಲ್ಲಿದ್ದು, ನಿಮಗೆ ಅಶುಭರಾಗಿದ್ದಾರೆ. ಇದರಿಂದಾಗಿ ಮನೆಯಲ್ಲಿ ಸ್ವಲ್ಪ ಕಿರಿಕಿರಿ, ಕೌಟುಂಬಿಕ ವಿವಾದಗಳು ತಲೆದೋರಬಹುದು. ಅನಾವಶ್ಯಕ ಖರ್ಚು ಸಂಭವಿಸಬಹುದು. ಆಕಸ್ಮಿಕ ಅವಘಡ, ಕಳ್ಳರ ಭಯ ಕಾಡಬಹುದು. ದೂರಸಂಚಾರ ಕೈಗೊಳ್ಳುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಕಿರಿಕಿರಿ, ಮೇಲಾಧಿಕಾರಿಗಳಿಂದ ಕಿರುಕುಳ ಉಂಟಾಗುವ ಸಾಧ್ಯತೆ ಇದೆ. ಕಫ, ಕೆಮ್ಮು, ಉಬ್ಬಸದಂತಹ ಅನಾರೋಗ್ಯ ನಿಮ್ಮನ್ನು ತಿಂಗಳಪೂರ್ತಿ ಕಾಡಬಹುದು. ಮಡದಿ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಸ್ಥಳ ಬದಲಾವಣೆಯ ಸಾಧ್ಯತೆ ಕೂಡ ಇದೆ.

    ಹೀಗಾಗಿ, ಸಂಕಷ್ಟ ಪರಿಹಾರಕ್ಕಾಗಿ ಕುಲದೇವತೆಯನ್ನು ಪ್ರಾರ್ಥಿಸಿ. ಸುಬ್ರಹ್ಮಣ್ಯ ಕ್ಷೇತ್ರದ ದರ್ಶನ ಮಾಡಿ. ಶುಕ್ರವಾರದಂದು ದುರ್ಗಾ ಪೂಜೆ, ಚಂಡಿಕಾ ಪಾರಾಯಣ, ನವಗ್ರಹ ಶಾಂತಿ ಮಾಡಿಸುವುದರಿಂದ ಶುಭ ಫಲ ಉಂಟಾಗಲಿದೆ. ಒಟ್ಟಿನಲ್ಲಿ ನಿಮಗೆ ಈ ತಿಂಗಳು ಮಿಶ್ರಫಲದಾಯಕ ಎನ್ನಬಹುದು. 

    ತುಲಾ ರಾಶಿಯವರಿಗೆ ಶನಿವಾರ ಮತ್ತು ಬುಧವಾರ ಶುಭವಾರಗಳು. ಅದೃಷ್ಟ ಸಂಖ್ಯೆ 1 ಮತ್ತು 6.



https://www.youtube.com/watch?v=tjNpSJQ6PFo&list=UUljNtNUex4de_Yx5TFoiMPA&index=5


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹುಲಿಗೆಮ್ಮ ದೇವಿಯ ಭಕ್ತರಿಗೆ ಬಯಲೇ ಶೌಚಾಲಯ

 ಹುಣ್ಣಿಮೆಗೊಮ್ಮೆ ಲಕ್ಷ, ಲಕ್ಷ ಭಕ್ತರು, ವಾರಕ್ಕೊಮ್ಮೆ 50-60 ಸಾವಿರ ಭಕ್ತರು, ಜಾತ್ರೆಯಲ್ಲಿ ಐದಾರು ಲಕ್ಷ ಭಕ್ತರು ಸೇರುವ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲ...