ಮಂಗಳವಾರ, ಏಪ್ರಿಲ್ 13, 2021

ಕರ್ಕಾಟಕ ಮತ್ತು ಸಿಂಹ ರಾಶಿಫಲ


ನಾವು ಈವತ್ತು ಮೇ ತಿಂಗಳಲ್ಲಿ ಕರ್ಕಾಟಕ ಮತ್ತು ಸಿಂಹ ರಾಶಿಗಳವರ ರಾಶಿಫಲ ಹೇಗಿದೆ ಎಂಬುದನ್ನು ನೋಡೋಣ. 

ಕರ್ಕಾಟಕ ರಾಶಿ

    ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ನಿಮ್ಮ ರಾಶಿಯಿಂದ 8ನೇ ಮನೆಯಲ್ಲಿ ಇದ್ದಾನೆ ಗುರು. ಇದು ನಿಮಗೆ ಅಷ್ಟೊಂದು ಶುಭಕರವಲ್ಲ. ಹೀಗಾಗಿ, ಕರ್ಕಾಟಕ ರಾಶಿಯವರಿಗೆ ಗುರುಬಲ ಕಡಿಮೆ ಎಂದೇ ಹೇಳಬಹುದು. ಜೊತೆಗೆ, ಸಪ್ತಮ ಭಾವದಲ್ಲಿರುವ ಶನಿ, ನಿಮಗೆ ಕಂಟಕನೇ. ಕುಜ ಕೂಡ ವ್ಯಯಸ್ಥಾನದಲ್ಲಿದ್ದು, ಪ್ರತಿಕೂಲನಾಗಿದ್ದಾನೆ. ಹೀಗಾಗಿ, ಮನೆಯಲ್ಲಿ ಗಂಡ-ಹೆಂಡತಿ ನಡುವೆ ಜಗಳ, ಮನಸ್ತಾಪ ಜಾಸ್ತಿಯಾಗಲಿದೆ. ಸಣ್ಣ ವಿಚಾರಗಳಿಗೂ ಭಿನ್ನಾಭಿಪ್ರಾಯ ಮೂಡಬಹುದು. ಮಕ್ಕಳ ನಡವಳಿಕೆ ನಿಮಗೆ ಚಿಂತೆ ತರಬಲ್ಲುದು. ಗೃಹಕೃತ್ಯಗಳಿಗಾಗಿ ಹೆಚ್ಚಿನ ಖರ್ಚು ಸಂಭವಿಸಲಿದೆ. ಕೂಡಿಟ್ಟ ಹಣ ವ್ಯಯವಾಗಲಿದೆ. ಜೊತೆಗೆ, ಆರೋಗ್ಯದಲ್ಲಿ ಏರುಪೇರು, ಬಂಧು-ಬಾಂಧವರಿಂದ, ಸ್ನೇಹಿತರಿಂದ ಅವಮಾನ, ಕೋರ್ಟು, ಕಚೇರಿ ವ್ಯಾಜ್ಯಗಳಲ್ಲಿ ತೊಂದರೆ, ವಿನಾಕಾರಣ ಅಲೆದಾಟ ಉಂಟಾಗಬಹುದು. 

    ಆದರೆ, ಲಾಭ ಭಾವದಲ್ಲಿ, ಅಂದರೆ, 11ನೇ ಮನೆಯಲ್ಲಿರುವ ರಾಹು, ಮನಸ್ಸಿಗೆ ಸಂತೋಷ, ಮಾನಸಿಕ ಧೈರ್ಯ ನೀಡಬಲ್ಲ. ಜೊತೆಗೆ ಉತ್ತಮ ಸ್ಥಾನಮಾನವನ್ನು ಕೂಡ ಕರುಣಿಸಬಲ್ಲ. ಕಾರಣ, ವೃಷಭ ರಾಶಿ, ರಾಹುವಿಗೆ ಉಚ್ಛಸ್ಥಾನ. ಅಲ್ಲದೆ, ಈ ರಾಶಿಯ ಅಧಿಪತಿಯಾದ ಶುಕ್ರ, ಉಚ್ಛಸ್ಥಾನದಲ್ಲಿ ಶುಭ ಭಾವದಲ್ಲಿ ವಿರಾಜಮಾನನಾಗಿದ್ದಾನೆ. ಆತನ ಜೊತೆ ಬುಧ ಕೂಡ ಶುಭ ಭಾವದಲ್ಲಿಯೇ ಇದ್ದಾನೆ. ಅಲ್ಲದೆ, ರಾಹು, ಶುಕ್ರ ಹಾಗೂ ಬುಧರು ಪರಸ್ಪರ ಮಿತ್ರತ್ವವನ್ನು ಹೊಂದಿದ್ದು, ಇವರೆಲ್ಲರೂ ನಿಮಗೆ ಶುಭ ಫಲವನ್ನು ನೀಡ್ತಾರೆ. ಈ ಅವಧಿಯಲ್ಲಿ ವಿವಾಹಾದಿ ಮಂಗಲಕಾರ್ಯಗಳು ಜರುಗಲಿವೆ. ಆಭರಣ ಖರೀದಿಗೆ ಸಕಾಲ. ಭೂಮಿ, ವಾಹನಗಳ ಖರೀದಿ ಯೋಗವಿದೆ.

    ಇನ್ನು, ಪಂಚಮದಲ್ಲಿರುವ ಕೇತು ಅನಾನುಕೂಲನಾದರೂ, ಆತನಿಗದು ಉಚ್ಛಸ್ಥಾನ. ಹೀಗಾಗಿ, ಆತ ಅಷ್ಟೊಂದು ಬಾಧೆ ನೀಡಲಾರ. 


    ಶನಿ ನಿಮಗೆ ಪ್ರತಿಕೂಲನಾಗಿ ಇರುವುದರಿಂದ ಹನುಮ ಚಾಲಿಸಾ ಪಠಣ, ಶನಿಶಾಂತಿ, ಶನಿವಾರದ ದಿವಸ ಅಶ್ವತ್ಥ ಪ್ರದಕ್ಷಿಣೆ ಮಾಡುವುದು ಕ್ಷೇಮಕರ. ಗೋಪೂಜೆ ಮಾಡಿ, ಗೋಗ್ರಾಸ ನೀಡುವುದರಿಂದ ಶುಭವಾಗಲಿದೆ. ಶುಕ್ರವಾರದಂದು ದುರ್ಗಾ ನಮಸ್ಕಾರ ಪೂಜೆ, ಸಪ್ತಶತಿ ಪಾರಾಯಣ ಮಾಡುವುದು ಒಳ್ಳೆಯದು. ಒಟ್ಟಾರೆ ನೋಡುವುದಾದರೆ, ಮೇ ತಿಂಗಳು ನಿಮಗೆ ಮಿಶ್ರಫಲದಾಯಕ ಎನ್ನಲಡ್ಡಿಯಿಲ್ಲ.

    ಭಾನುವಾರ ಹಾಗೂ ಸೋಮವಾರ ನಿಮಗೆ ಶುಭ ವಾರಗಳು. ಅದೃಷ್ಟ ಸಂಖ್ಯೆಗಳು 2 ಮತ್ತು 8.



ಸಿಂಹ ರಾಶಿ:

    ಇನ್ನು, ಸಿಂಹ ರಾಶಿಯನ್ನು ನೋಡುವುದಾದರೆ, ಈ ರಾಶಿಯ ಅಧಿಪತಿ ರವಿ, ಮೇ 14ರವರೆಗೆ ಮೇಷ ರಾಶಿಯಲ್ಲಿ ಇರಲಿದ್ದು, ಅಷ್ಟೊಂದು ಶುಭಕರನಾಗಿಲ್ಲ. ಮೇ 14ರಂದು ವೃಷಭ ರಾಶಿಗೆ ರವಿಯ ಪ್ರವೇಶವಾಗಲಿದ್ದು, ನಿಮಗೆ ಶುಭವಾಗಲಿದೆ. ಆತ ನಿಮಗೆ ಉತ್ತಮ ಆರೋಗ್ಯ ಕರುಣಿಸಲಿದ್ದಾನೆ. ಕೀರ್ತಿ, ಸನ್ಮಾನಗಳಿಗೆ ನೀವು ಭಾಜನರಾಗಲಿದ್ದೀರಿ.

    ಜೊತೆಗೆ, ಸಪ್ತಮ ಭಾವದ ಗುರು, ನಿಮಗೆ ಶುಭಫಲವನ್ನೇ ನೀಡುತ್ತಾನೆ. ಸಂತಾನಪ್ರಾಪ್ತಿ, ವಾಹನ ಖರೀದಿಗಳ ಯೋಗವಿದೆ. ಮನೆಯಲ್ಲಿ ಮಂಗಲಕಾರ್ಯ ಜರುಗಲಿದೆ. ಧನ ಪ್ರಾಪ್ತಿ, ಸುವರ್ಣ ವಸ್ತುಗಳ ಲಾಭಯೋಗವಿದೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ. ಅದೇ ರೀತಿ, ಜನ್ಮರಾಶಿಯಿಂದ 6ನೇ ಮನೆಯಲ್ಲಿ ಶನಿಯ ಸಂಚಾರ ಇರುವುದರಿಂದ ಉದ್ಯೋಗ, ವ್ಯಾಪಾರ-ವ್ಯವಹಾರಗಳಲ್ಲಿ ಉತ್ತಮ ಲಾಭ, ಕೋರ್ಟು, ಕಚೇರಿ ಕೆಲಸಗಳಲ್ಲಿ ಮುನ್ನಡೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ. ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಉತ್ತಮ ಪ್ರಗತಿ ಕಂಡು ಬರಲಿದೆ. ಸಾಮಾಜಿಕ ರಂಗದಲ್ಲಿ, ರಾಜಕೀಯ ರಂಗದಲ್ಲಿ ಇರುವವರು ಶತ್ರುಗಳ ವಿರುದ್ಧ ಜಯ ಸಾಧಿಸುತ್ತಾರೆ. 11ನೇ ಮನೆಯಲ್ಲಿರುವ ಕುಜ ಕೂಡ ನಿಮಗೆ ಶುಭಫಲವನ್ನೇ ನೀಡುತ್ತಾನೆ. ನಿವೇಶನ, ಕೃಷಿ ಭೂಮಿ ಖರೀದಿಗೆ ಈ ತಿಂಗಳು ನಿಮಗೆ ಸಕಾಲ. 

    ಆದರೆ, ದಶಮ ಭಾವದಲ್ಲಿರುವ ರಾಹು, ಕಲಹಕ್ಕೆ ಪ್ರೇರಣೆ ನೀಡಿದರೆ, ಚತುರ್ಥ ಭಾವದ ಕೇತುವಿನಿಂದಾಗಿ ಮಾನಸಿಕ ಕ್ಲೇಶ, ಮಾನಹಾನಿ ಉಂಟಾಗಲಿದೆ. ಒಟ್ಟಾರೆ ನೋಡುವುದಾದರೆ, ನಿಮಗೆ ಮೇ ತಿಂಗಳು ಶುಭದಾಯಕ. ಹೊಸ ಉದ್ಯೋಗ, ವ್ಯಾಪಾರ, ವ್ಯವಹಾರ ಕೈಗೊಳ್ಳುವವರಿಗೆ ಈ ತಿಂಗಳು ಸೂಕ್ತ ಎನ್ನಬಹುದು.     

    ದುಷ್ಟಫಲಗಳ ನಿವಾರಣೆಗಾಗಿ ನವಗ್ರಹಶಾಂತಿ, ರುದ್ರಪಠಣ, ದುರ್ಗಾಸಪ್ತಶತಿ, ಲಲಿತಾ ಸಹಸ್ರನಾಮ ಪಾರಾಯಣಗಳನ್ನು ಮಾಡಬಹುದು. ಗುರುವಾರ, ಸೋಮವಾರ ಹಾಗೂ ಮಂಗಳವಾರಗಳು ಸಿಂಹರಾಶಿಯವರಿಗೆ ಶುಭವಾರಗಳು. ಅದೃಷ್ಟದ ಸಂಖ್ಯೆ 9 ಮತ್ತು 6.


https://www.youtube.com/watch?v=NH6LawoQni0&list=UUljNtNUex4de_Yx5TFoiMPA&index=3








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹುಲಿಗೆಮ್ಮ ದೇವಿಯ ಭಕ್ತರಿಗೆ ಬಯಲೇ ಶೌಚಾಲಯ

 ಹುಣ್ಣಿಮೆಗೊಮ್ಮೆ ಲಕ್ಷ, ಲಕ್ಷ ಭಕ್ತರು, ವಾರಕ್ಕೊಮ್ಮೆ 50-60 ಸಾವಿರ ಭಕ್ತರು, ಜಾತ್ರೆಯಲ್ಲಿ ಐದಾರು ಲಕ್ಷ ಭಕ್ತರು ಸೇರುವ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲ...