ನಾವು ಈವತ್ತು ಮೇ ತಿಂಗಳಲ್ಲಿ ಧನು ಮತ್ತು ಮೀನ ರಾಶಿಗಳವರ ರಾಶಿಫಲ ಹೇಗಿದೆ ಎಂಬುದನ್ನು ನೋಡೋಣ.
ಧನು ರಾಶಿ
ಧನು ಮತ್ತು ಮೀನ, ಈ ಎರಡೂ ರಾಶಿಗಳಿಗೆ ಅಧಿಪತಿ ಗುರು. ಅಷ್ಟೇ ಅಲ್ಲ, ಮೀನ ರಾಶಿ, ಕೇತುವಿಗೆ ಸ್ವಕ್ಷೇತ್ರ ಕೂಡ. ಇನ್ನು, ನಿಮ್ಮ ಜನ್ಮರಾಶಿಯಿಂದ ತೃತೀಯ ಭಾವದಲ್ಲಿರುವ ಗುರು, ನಿಮಗೆ ಅನುಕೂಲಕರನಾಗಿಲ್ಲ. ಜೊತೆಗೆ, ಸಾಡೇಸಾತ್ ಶನಿ, ಕೊನೆಯ ಘಟ್ಟದಲ್ಲಿ ಇರುವುದರಿಂದ ಶನಿ ಕೂಡ ನಿಮಗೆ ಹೆಚ್ಚು ಕಷ್ಟಗಳನ್ನೇ ನೀಡುತ್ತಾನೆ. ಹೀಗಾಗಿ, ಕೆಲಸ-ಕಾರ್ಯಗಳಲ್ಲಿ ವಿಘ್ನ ಎದುರಾಗಬಹುದು. ನಂಬಿದವರಿಂದಲೇ ಮೋಸ ಹೋಗುವ ಸಾಧ್ಯತೆಯಿದೆ. ಮನೆಯಲ್ಲಿ, ಬಂಧುಗಳ ಜೊತೆ, ಮಿತ್ರರೊಂದಿಗೆ ಕಲಹ, ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು. ಆರ್ಥಿಕವಾಗಿ ಸಂಕಷ್ಟ ಎದುರಾಗಲಿದೆ. ಅನಾರೋಗ್ಯ ನಿಮ್ಮನ್ನು ಕಾಡಬಹುದು. ಹಣಕಾಸಿನ ವಿಷಯವಾಗಿ ಅವಮಾನ ಅನುಭವಿಸುವ ಸಾಧ್ಯತೆ ಕೂಡ ಇದೆ. ವಾಸಸ್ಥಳದ ಬದಲಾವಣೆ ಸಾಧ್ಯತೆಯಿದೆ. ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ.
ಇನ್ನು, ಸಪ್ತಮ ಭಾವದಲ್ಲಿರುವ ಕುಜ, ವ್ಯಯ ಭಾವದಲ್ಲಿರುವ ಕೇತು ಕೂಡ ನಿಮಗೆ ಅನುಕೂಲಕರನಾಗಿಲ್ಲ. ಹೀಗಾಗಿ, ನಿಮ್ಮ ದಾಂಪತ್ಯದಲ್ಲಿ ವಿರಸ ಉಂಟಾಗಬಹುದು.
ಆದರೆ, 6ನೇ ಮನೆಯಲ್ಲಿ ಇರುವ ಬುಧ ಹಾಗೂ ರಾಹುಗಳು ನಿಮಗೆ ಸುಖ ನೀಡಲಿದ್ದು, ಧನಲಾಭವಾಗುವ ಸಾಧ್ಯತೆಯಿದೆ.
ಸಂಕಷ್ಟ ನಿವಾರಣೆಗಾಗಿ ಗ್ರಹಶಾಂತಿ ಮಾಡಿಸಿ. ಕುಲದೇವತೆಯ ಪ್ರಾರ್ಥನೆ ಮಾಡಿ. ಮೃತ್ಯುಂಜಯ ಜಪ ಮಾಡುವುದರಿಂದ, ಸೋಮವಾರದಂದು ಶಿವನಿಗೆ ರುದ್ರಾಭಿಷೇಕ ನೆರವೇರಿಸುವುದರಿಂದ ಕ್ಷೇಮ ಉಂಟಾಗಲಿದೆ. ಶನಿವಾರದ ದಿನ ಒಪ್ಪತ್ತು ಮಾಡುವುದರಿಂದ, ಅಶ್ವತ್ಥ ಪ್ರದಕ್ಷಿಣೆ ಮಾಡುವುದರಿಂದ ಸಂಕಷ್ಟಗಳು ದೂರವಾಗುವುವು. ಒಟ್ಟಾರೆ ನೋಡುವುದಾದರೆ, ನಿಮಗೆ ಈ ತಿಂಗಳು ಮಿಶ್ರಫಲದಾಯಕ ಎನ್ನಬಹುದು.
ಧನು ರಾಶಿಯವರಿಗೆ ಗುರುವಾರ ಮತ್ತು ಮಂಗಳವಾರ ಶುಭವಾರ. ಅದೃಷ್ಟ ಸಂಖ್ಯೆ 3 ಮತ್ತು 9.
ಮೀನ ರಾಶಿ:
ಇನ್ನು, ಮೀನ ರಾಶಿಯನ್ನು ನೋಡುವುದಾದರೆ, ರಾಶಿಯ ಅಧಿಪತಿ ಗುರು ವ್ಯಯಸ್ಥಾನದಲ್ಲಿದ್ದು, ನಿಮಗೆ ಈ ತಿಂಗಳು ಗುರುಬಲ ಇರುವುದಿಲ್ಲ. ಹೀಗಾಗಿ, ಹಣಕಾಸಿನ ತೊಂದರೆ ಉಂಟಾಗಲಿದೆ. ಆದಾಯಕ್ಕಿಂತ ಖರ್ಚು ಜಾಸ್ತಿಯಾಗಲಿದೆ. ಅನಾವಶ್ಯಕ ಸಂಚಾರದಿಂದ ದೇಹಕ್ಕೆ ಆಯಾಸ, ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಮನಸ್ಸಿಗೆ ಅಶಾಂತಿ, ಶತ್ರುಗಳ ಕಾಟ ಎದುರಾಗಬಹುದು. ಯತ್ನಿಸಿದ ಕಾರ್ಯಗಳಲ್ಲಿ ವಿಘ್ನ ಎದುರಾಗಬಹುದು.
ಆದರೆ, ಲಾಭಭಾವದಲ್ಲಿ ಇರುವ ಶನಿ ಶುಭಫಲ ನೀಡಲಿದ್ದಾನೆ. ಉದ್ಯೋಗ, ವ್ಯಾಪಾರ, ವ್ಯವಹಾರಗಳಲ್ಲಿ ಅಭಿವೃದ್ಧಿ ಕಂಡು ಬರಲಿದೆ. ಭೂಮಿ, ವಾಹನ ಖರೀದಿಯ ಯೋಗವಿದೆ. ಧನಲಾಭವಿದೆ. ಇನ್ನು ತೃತೀಯ ಭಾವದಲ್ಲಿರುವ ಶುಕ್ರ ಹಾಗೂ ರಾಹುವಿನಿಂದ ಸಮಾಜದಲ್ಲಿ ನಿಮ್ಮ ಘನತೆ, ಗೌರವಗಳು ವೃದ್ಧಿಸಲಿವೆ. ಬಂಧುಗಳ ಸಹಾಯ ದೊರಕಲಿದೆ. ಇನ್ನು, ಮೇ14 ರಂದು ರವಿ, ವೃಷಭ ರಾಶಿಯನ್ನು ಪ್ರವೇಶಿಸಲಿದ್ದು, ನಿಮಗೆ ಸುಖ, ಸಮೃದ್ಧಿಯನ್ನು ಕರುಣಿಸಲಿದ್ದಾನೆ.
ಆದರೆ, 4ನೇ ಮನೆಯಲ್ಲಿ ಇರುವ ಕುಜ, ತೃತೀಯ ಭಾವದಲ್ಲಿ ಇರುವ ಬುಧ ಹಾಗೂ ನವಮ ಭಾವದಲ್ಲಿರುವ ಕೇತು ನಿಮ್ಮ ಮನೆಯಲ್ಲಿ ನೆಮ್ಮದಿ ಹಾಳುಗೆಡವಲು ಯತ್ನಿಸಬಹುದು. ನರಗಳ ದೌರ್ಬಲ್ಯದಿಂದ ಕಾಲಿನ ತೊಂದರೆ ಕಾಣಿಸಬಹುದು. ಮಾನಸಿಕ ಒತ್ತಡದಿಂದ ತಲೆನೋವು, ಕಣ್ಣಿನ ತೊಂದರೆ ಎದುರಾಗಬಹುದು.
ಕುಲದೇವತೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯಿಂದ ಈ ತಿಂಗಳಲ್ಲಿ ನಿಮಗೆ ಹೆಚ್ಚಿನ ಸುಖ ದೊರಕಲಿದೆ. ವಿಷ್ಣು ಸಹಸ್ರನಾಮ ಪಾರಾಯಣ, ರುದ್ರಪಠಣಗಳಿಂದ ಶುಭವಾಗಲಿದೆ. ಒಟ್ಟಾರೆ ನೋಡುವುದಾದರೆ, ಮೇ ತಿಂಗಳಲ್ಲಿ ನಿಮಗೆ ಶುಭವೇ ಜಾಸ್ತಿ.
ಭಾನುವಾರ ಮತ್ತು ಮಂಗಳವಾರಗಳು ಶುಭವಾರಗಳು. ನಿಮ್ಮ ರಾಶಿಯ ಅದೃಷ್ಟ ಸಂಖ್ಯೆ 1 ಮತ್ತು 9.
https://www.youtube.com/watch?v=qLqfiyb-F7Y&list=UUljNtNUex4de_Yx5TFoiMPA&index=2


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ