ಮಂಗಳವಾರ, ಏಪ್ರಿಲ್ 13, 2021

ಮಿಥುನ ಮತ್ತು ಕನ್ಯಾ ರಾಶಿ ಫಲ

  


 ನಾವು ಈವತ್ತು ಮೇ ತಿಂಗಳಲ್ಲಿ ಮಿಥುನ ಮತ್ತು ಕನ್ಯಾ ರಾಶಿಗಳವರ ರಾಶಿಫಲ ಹೇಗಿದೆ ಎಂಬುದನ್ನು ನೋಡೋಣ. 

ಮಿಥುನ ರಾಶಿ

    ಮಿಥುನ ಮತ್ತು ಕನ್ಯಾ, ಈ ಎರಡೂ ರಾಶಿಗಳಿಗೆ ಅಧಿಪತಿ ಬುಧ. ಅಷ್ಟೇ ಅಲ್ಲ, ಕನ್ಯಾ ರಾಶಿ, ರಾಹುವಿಗೆ ಸ್ವಕ್ಷೇತ್ರ ಕೂಡ. ಇನ್ನು, ಮಿಥುನ ರಾಶಿಯ ಅಧಿಪತಿಯಾಗಿರುವಂತಹ ಬುಧ, ವ್ಯಯ ಸ್ಥಾನದಲ್ಲಿ, ಅಂದರೆ 12ನೇ ಮನೆಯಲ್ಲಿ ಇದ್ದಾನೆ. ಹೀಗಾಗಿ, ನಿಮ್ಮ ಕೆಲಸ-ಕಾರ್ಯಗಳಲ್ಲಿ ನಿಮಗೆ ಅಪಜಯ ಕಾಡಬಹುದು. ಇನ್ನು, ಮೇ 26ರಂದು ಬುಧ, 12ನೇ ಮನೆಯಾದ ವೃಷಭದಿಂದ ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದು ನಿಮಗೆ ಸಾಕಷ್ಟು ಶುಭ ಫಲ ನೀಡಲಿದೆ. ಆದರೆ, ಮೇ 29ರಂದು ಮಿಥುನದಲ್ಲಿರುವ ಬುಧ, ವಕ್ರಗತಿಯ ಚಲನೆ ಆರಂಭಿಸಿ, ಜೂನ್ 2ಕ್ಕೆ ಮತ್ತೆ ವೃಷಭಕ್ಕೆ ಪ್ರವೇಶ ಮಾಡಲಿದ್ದಾನೆ. 

    ಇನ್ನು, 9ನೇ ಮನೆಯಲ್ಲಿ ಭಾಗ್ಯಸ್ಥಾನದಲ್ಲಿರುವ ಗುರುವಿನಿಂದ ಮಿಥುನ ರಾಶಿಯವರಿಗೆ ಗುರುಬಲ ಲಭಿಸಲಿದೆ. ಈ ಅವಧಿಯಲ್ಲಿ ಒಳ್ಳೆಯ ಸ್ಥಾನಮಾನ, ಉದ್ಯೋಗದಲ್ಲಿ ಪ್ರಗತಿ ಕಾಣಿಸಲಿದೆ. ಮನೆ ಕಟ್ಟುವ ಯೋಗ ಕೂಡಿ ಬರಲಿದೆ. ಹೊಸ ಕೆಲಸ ಆರಂಭಿಸಲು, ನಿವೇಶನ ಕೊಳ್ಳಲು ಇದು ಸಕಾಲ. ಮನೆಯಲ್ಲಿ ಸುಖ-ಸಂತೋಷಗಳು ನೆಲೆಸಲಿವೆ. ಧನಲಾಭದ ಯೋಗವಿದೆ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರಲಿದೆ. ಜೊತೆಗೆ, 6ನೇ ಮನೆಯಲ್ಲಿ ಉಚ್ಚಸ್ಥಾನದಲ್ಲಿರುವ ಇರುವ ಕೇತು ಕೂಡ ನಿಮಗೆ ಸುಖ-ಸಂತೋಷ ತರಬಲ್ಲ. 

    ಆದರೆ, ಅಷ್ಟಮದಲ್ಲಿರುವ ಶನಿ ನಿಮಗೆ ಪ್ರತಿಕೂಲ ಪರಿಣಾಮ ಬೀರಬಹುದು. ಹೀಗಾಗಿ, ಮನೆಯಲ್ಲಿ ಪತಿ-ಪತ್ನಿಯರ ನಡುವೆ ವಿರಸ, ಮಾನಸಿಕವಾಗಿ ಕಿರಿಕಿರಿ, ವ್ಯರ್ಥ ಅಲೆದಾಟ, ದುರ್ಜನರಿಂದ ಅವಮಾನ ಎದುರಿಸಬೇಕಾಗಬಹುದು. ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಸ್ಥಾನ ನಾಶದ ಭಯ ಕಾಡಬಹುದು. ಶನಿಪೀಡೆ ನಿವಾರಣೆಗೆ ಹನುಮ ಚಾಲಿಸಾ ಪಠಣ, ಶನಿಶಾಂತಿ, ಶನಿವಾರದ ದಿವಸ ಅಶ್ವತ್ಥ ಪ್ರದಕ್ಷಿಣೆ ಮಾಡುವುದು ಕ್ಷೇಮಕರ. 

    ಇನ್ನು, ಲಗ್ನದಲ್ಲಿರುವ ಕುಜನಿಗೆ ಲಗ್ನಾಧಿಪತಿಯಾದ ಬುಧನ ಸ್ಥಾನ ಶತ್ರುಸ್ಥಾನ. ಹೀಗಾಗಿ, ಆತ, ನಿಮ್ಮ ರಾಶಿಗೆ ಪ್ರತಿಕೂಲ ಪರಿಣಾಮವನ್ನೇ ಬೀರುತ್ತಾನೆ. ಹೀಗಾಗಿ, ಇತರರ ಜೊತೆ ಕಲಹ, ರಕ್ತ ಸಂಬಂಧಿ, ಉದರ ಸಂಬಂಧಿ ರೋಗಗಳು, ಮನಸ್ಸಿನಲ್ಲಿ ಚಿಂತೆಗಳು ಕಾಡಬಹುದು. ಕಳ್ಳರ ಕಾಟ, ಅಗ್ನಿ ಅನಾಹುತದ ಭಯ ಇರಲಿದೆ. ವಾಹನ ಚಲಾಯಿಸುವಾಗ ಎಚ್ಚರದಿಂದಿರಿ.


    ಇನ್ನು, ರಾಹು ಕೂಡ ವ್ಯಯ ಸ್ಥಾನದಲ್ಲಿದ್ದು, ನಿಮ್ಮ ಕೆಲಸ, ಕಾರ್ಯಗಳಲ್ಲಿನ ಜಯಕ್ಕೆ ಅಡಚಣೆ ಉಂಟು ಮಾಡಬಹುದು. ಕುಜ ಹಾಗೂ ರಾಹು ದೋಷ ಪರಿಹಾರಕ್ಕಾಗಿ ಮಂಗಳವಾರ ಸುಬ್ರಹ್ಮಣ್ಯನ ಆರಾಧನೆ ಮಾಡುವುದು ಒಳಿತು. 

    ಒಟ್ಟಾರೆ ನೋಡುವುದಾದರೆ, ಮೇ ತಿಂಗಳಲ್ಲಿ ಮಿಥುನ ರಾಶಿಯವರಿಗೆ ಉತ್ತಮ ಫಲವಿದೆ. ನಿಮ್ಮ ರಾಶಿಗೆ ಭಾನುವಾರ, ಶುಕ್ರವಾರ ಹಾಗೂ ಬುಧವಾರಗಳು ಶುಭವಾರಗಳು. ಅದೃಷ್ಟ ಸಂಖ್ಯೆಗಳು 2 ಮತ್ತು 5.



ಕನ್ಯಾ ರಾಶಿ:

    ಇನ್ನು, ಕನ್ಯಾ ರಾಶಿಯನ್ನು ನೋಡುವುದಾದರೆ, ರಾಶಿಯ ಅಧಿಪತಿ ಬುಧ, ನವಮ ಭಾವದಲ್ಲಿದ್ದಾನೆ. ಸ್ವಕ್ಷೇತ್ರದ ರಾಹು, ಉಚ್ಛಸ್ಥಾನದಲ್ಲಿ ನವಮ ಭಾವದಲ್ಲಿದ್ದಾನೆ. ಹೀಗಾಗಿ, ಕೆಲಸ ಕಾರ್ಯಗಳಲ್ಲಿ ವಿಘ್ನಗಳು ಎದುರಾಗಬಹುದು. ಆದರೆ, ಈ ಎರಡೂ ಗ್ರಹಗಳ ಜೊತೆ ಶುಕ್ರ ಕೂಡ ನವಮ ಭಾವದಲ್ಲಿಯೇ ಇದ್ದು, ನಿಮಗೆ ಶುಭಕಾರಕನಾಗಿದ್ದಾನೆ. ಮೇಲಾಗಿ, ವೃಷಭ ರಾಶಿ, ಶುಕ್ರನಿಗೆ ಉಚ್ಛಸ್ಥಾನದ ರಾಶಿಯಾಗಿದ್ದು, ಆತನಿಂದ ಶುಭ ಫಲ ನಿರೀಕ್ಷಿಸಬಹುದು. ಜೊತೆಗೆ, ತೃತೀಯ ಭಾವದಲ್ಲಿ ಉಚ್ಚಸ್ಥಾನದಲ್ಲಿ ಇರುವ ಕೇತು, ಹಣಕಾಸಿನ ವಿಚಾರದಲ್ಲಿ, ಕೆಲಸ-ಕಾರ್ಯಗಳಲ್ಲಿ ಶುಭ ಫಲವನ್ನೇ ಕೊಡುತ್ತಾನೆ. 

    ಆದರೆ, 10ನೇ ಮನೆಯಲ್ಲಿರುವ ಕುಜ, ನಿಮಗೆ ಶ್ರೇಯಸ್ಸು ನೀಡುವ ಸಾಧ್ಯತೆ ಕಡಿಮೆ. ಅಲ್ಲದೆ, ಗುರು, ಶತ್ರುಭಾವ ಅಂದರೆ, 6ನೇ ಮನೆಯಲ್ಲಿ ಇದ್ದಾನೆ. ಹೀಗಾಗಿ, ನಿಮಗೆ ಗುರು ಬಲ ಕಡಿಮೆ. ಇದರಿಂದಾಗಿ ಮಾನಸಿಕವಾದ ಚಿಂತೆ ನಿಮ್ಮನ್ನು ಬಹುವಾಗಿ ಕಾಡಬಹುದು. ಮನೆಯಲ್ಲಿ, ಮಿತ್ರರೊಂದಿಗೆ ಕಲಹ, ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು. ಇದು ನಿಮ್ಮಲ್ಲಿ ಕೋಪದ ಪ್ರವೃತ್ತಿಯನ್ನು ಹೆಚ್ಚಿಸಬಹುದು. ಆರ್ಥಿಕವಾಗಿ ಸಂಕಷ್ಟ ಎದುರಾಗಲಿದೆ. ಜೊತೆಗೆ, ಪಂಚಮ ಶನಿ ನಿಮ್ಮ ಕಷ್ಟವನ್ನು ಮತ್ತಷ್ಟು ಹೆಚ್ಚಿಸಲಿದ್ದಾನೆ. ವಾಸಸ್ಥಳದ ಬದಲಾವಣೆ ಮಾಡಬೇಕಾಗಿ ಬರಬಹುದು. ಶುಭಕಾರ್ಯಗಳಿಗೆ ಅಡ್ಡಿ ಎದುರಾಗಬಹುದು. ಕಫ, ಕೆಮ್ಮು, ಉಬ್ಬಸದಂತಹ ಅನಾರೋಗ್ಯಗಳು ನಿಮ್ಮನ್ನು ಕಾಡಬಹುದು.

    ಸಂಕಷ್ಟ ನಿವಾರಣೆಗೆ, ಮಂಗಳವಾರದ ದಿನ ಗಣಪತಿ, ಸುಬ್ರಹ್ಮಣ್ಯನ ಆರಾಧನೆ ಮಾಡಿ. ಶನಿಪೀಡೆಯಿಂದ ಪಾರಾಗಲು ಶಿವಸ್ತೋಸ್ತ್ರ ಪಠಣ, ರುದ್ರ ಪಠಣ, ಹನುಮಾನ್ ಚಾಲಿಸಾ ಪಠಿಸಿ. ಪ್ರತಿದಿನ ಬೆಳಗ್ಗೆ ಅಶ್ವತ್ಥ ಪ್ರದಕ್ಷಿಣೆ ಮಾಡುವುದು ಶುಭಕರ. ಒಟ್ಟಾರೆ ನೋಡುವುದಾದರೆ, ನಿಮಗೆ ಈ ತಿಂಗಳು ಮಿಶ್ರಫಲದಾಯಕ ಎನ್ನಬಹುದು.

    ಕನ್ಯಾ ರಾಶಿಯವರಿಗೆ ಭಾನುವಾರ ಮತ್ತು ಶುಕ್ರವಾರ ಶುಭವಾರಗಳು. ಅದೃಷ್ಟ ಸಂಖ್ಯೆ 3,5,6.



https://www.youtube.com/watch?v=pL51Rt0X6Bo&list=UUljNtNUex4de_Yx5TFoiMPA&index=1






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹುಲಿಗೆಮ್ಮ ದೇವಿಯ ಭಕ್ತರಿಗೆ ಬಯಲೇ ಶೌಚಾಲಯ

 ಹುಣ್ಣಿಮೆಗೊಮ್ಮೆ ಲಕ್ಷ, ಲಕ್ಷ ಭಕ್ತರು, ವಾರಕ್ಕೊಮ್ಮೆ 50-60 ಸಾವಿರ ಭಕ್ತರು, ಜಾತ್ರೆಯಲ್ಲಿ ಐದಾರು ಲಕ್ಷ ಭಕ್ತರು ಸೇರುವ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲ...