ಇಂದು ಮೊಬೈಲ್ ಇಲ್ಲದ ಜೀವನವನ್ನು ಊಹಿಸಿಕೊಳ್ಳುವುದೂ ಕಷ್ಟ. ಮನೆ, ಗಂಡ, ಹೆಂಡತಿ, ಮಕ್ಕಳು, ಸ್ನೇಹಿತರನ್ನು ಬಿಟ್ಟು ಬೇಕಾದರೂ ಇರಬಲ್ಲೆವು. ಆದರೆ, ಮೊಬೈಲ್ ಬಿಟ್ಟು ಇರಲಾಗದು ಎನ್ನುವ ಸ್ಥಿತಿಗೆ ನಾವಿಂದು ತಲುಪಿ ಬಿಟ್ಟಿದ್ದೇವೆ. ಬೆಳಗ್ಗೆ ಬೇಗ ಏಳಲು ಅಲರಾಂನಿಂದ ಹಿಡಿದು, ರಾತ್ರಿ ಮಲಗುವ ತನಕ ಪ್ರತಿಯೊಂದು ವಿಚಾರಕ್ಕೂ ನಾವು ಸ್ಮಾರ್ಟ್‍ಫೋನ್‍ನ್ನು ಅವಲಂಬಿಸುತ್ತಿದ್ದೇವೆ. 10 ನಿಮಿಷ ನಮ್ಮ ಕೈಯಲ್ಲಿ ಮೊಬೈಲ್ ಇಲ್ಲದಿದ್ದರೆ, ಚಡಪಡಿಕೆ ಶುರುವಾಗುತ್ತದೆ. ಆರೋಗ್ಯ ತಜ್ಞರು ಇದನ್ನು "ನೋಮೋಫೋಬಿಯಾ' ಎನ್ನುತ್ತಾರೆ. ಅಷ್ಟರಮಟ್ಟಿಗೆ ಈ ಸ್ಮಾರ್ಟ್‍ಫೋನ್, ಇಂದು ನಮ್ಮನ್ನು ಆವರಿಸಿದ್ದು, ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಲು ಆರಂಭಿಸಿದೆ.
ಆದರೆ, ಇದೇ ಸ್ಮಾರ್ಟ್‍ಫೋನ್ ಬಳಕೆ ನಮ್ಮನ್ನು ನಮಗರಿವಿಲ್ಲದಂತೆ, ಸ್ಮಾರ್ಟ್ ಆಗಿ ನಮ್ಮನ್ನು ಸಾವಿನಂಚಿಗೆ ತಳ್ಳಬಹುದು ಎಂಬುದು ಗೊತ್ತೆ?. ಇಂದಿನ ಬಹುತೇಕ ಸಂಶೋಧನೆಗಳು, "ಸ್ಮಾರ್ಟ್‍ಫೋನ್ ಬಳಕೆ ಒಂದು ಚಟವಾಗುತ್ತಿದೆ, ಈ ಸ್ಮಾರ್ಟ್‍ಫೋನ್ ಚಟ ಡ್ರಗ್ಸ್‍ನಷ್ಟೇ ಅಪಾಯಕಾರಿ' ಎಂಬ ಎಚ್ಚರಿಕೆಯನ್ನು ನೀಡಿವೆ.
ಸ್ಮಾರ್ಟ್‍ಫೋನ್ ಬಳಕೆಯಿಂದ ಉಂಟಾಗಬಹುದಾದ ದುಷ್ಪರಿಣಾಮಗಳಿವು:
1. ಮೊದಲನೆಯದಾಗಿ, ನಮಗೆ ಯಾವುದೇ ವಿಚಾರ ತಿಳಿಯದಿದ್ದರೆ, ತಕ್ಷಣ ಇಂಟರ್‍ನೆಟ್‍ಗೆ ಹೋಗಿ ನಾವು ಹುಡುಕಲು ಆರಂಭಿಸುತ್ತೇವೆ. ಇದು ನಮ್ಮ ಜ್ಞಾಪಕಶಕ್ತಿಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.
2. ಕೆಲವೊಂದು ಡ್ರಗ್ಸ್ ಮತ್ತು ನಾರ್ಕೊಟಿಕ್ಸ್‍ನಂತೆ, ಸ್ಮಾರ್ಟ್‍ಫೋನ್‍ಗಳು ಕೂಡ ನಮ್ಮನ್ನು ಗೀಳಿಗೆ ತಳ್ಳುತ್ತಿವೆ. ಸ್ಮಾರ್ಟ್‍ಫೋನ್ ಗೀಳಿಗೆ ಒಳಗಾದವರ ಮೆದುಳನ್ನು ಎಂಆರ್‍ಐ ಸ್ಕ್ಯಾನ್‍ಗೆ ಒಳಪಡಿಸಿದಾಗ ಅವರು ದೈಹಿಕವಾಗಿ ಬದಲಾಗಿರುವುದು ಕಂಡು ಬಂದಿದೆ. ಮಾತ್ರವಲ್ಲ, ಮಾತು, ದೃಷ್ಟಿ, ಅರಿವು, ಭಾವನೆ ಮತ್ತು ಸ್ವಯಂ ನಿಯಂತ್ರಣದ ಮೇಲೆ ಪರಿಣಾಮ ಬೀರುವ ಮೆದುಳಿನ ಸಾಂಧ್ರತೆ ಮೇಲೆಯೂ ಇದು ವ್ಯತಿರಿಕ್ತ ಪರಿಣಾಮ ಬೀರಿರುವುದು ಗೊತ್ತಾಗಿದೆ. ಡ್ರಗ್ಸ್ ಚಟಕ್ಕೆ ಒಳಗಾಗಿರುವವರ ಮೆದುಳಿನ ವಿನ್ಯಾಸದಲ್ಲಿ ಕಂಡು ಬಂದ ಬದಲಾವಣೆ, ಸ್ಮಾರ್ಟ್‍ಫೋನ್ ಚಟಕ್ಕೆ ಒಳಗಾದವರ ಮೆದುಳಿನಲ್ಲಿಯೂ ಕಂಡು ಬಂದಿದೆ.
3. ಫೋನ್‍ನಲ್ಲಿ ಬ್ರೌಸಿಂಗ್ ಮಾಡುವ ವೇಳೆ ನಮ್ಮ ದೇಹದಲ್ಲಿ "ಡೊಪಮೈನ್' ಎನ್ನುವ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ಉತ್ತಮ ಭಾವನೆಯನ್ನು ಉಂಟು ಮಾಡುವ ಹಾಗೂ ನರ ವ್ಯವಸ್ಥೆಯನ್ನು ಉತ್ತೇಜಿಸುವ ಹಾರ್ಮೋನ್. ಹೀಗಾಗಿಯೇ ಫೋನ್‍ನಲ್ಲಿ ಬ್ರೌಸಿಂಗ್ ಮಾಡುವ ವೇಳೆ ಇದು ಡ್ರಗ್ಸ್‍ನಂತೆ ನಮಗೆ ಹಿತಕರ ಅನುಭವ ನೀಡುತ್ತದೆ. ಆದರೆ, ಬಳಿಕ ಇದೊಂದು ಚಟವಾಗಿ ಅಂಟಿಕೊಳ್ಳುತ್ತದೆ. ನಮ್ಮನ್ನು ತನ್ನ ಗುಲಾಮನನ್ನಾಗಿ ಮಾಡಿಕೊಳ್ಳುವ ಸಾಧ್ಯತೆ ಇದೆ. ದಿನಗಳು ಕಳೆದಂತೆ ಇದು ಮೆದುಳಿನ ಮೇಲೆ ತನ್ನ ಪ್ರಾಬಲ್ಯವನ್ನು ಸಾಧಿಸುತ್ತಾ ಹೋಗುತ್ತದೆ. ಅದರಲ್ಲೂ ವಿಶೇಷವಾಗಿ, ಯುವಜನರು ಹಾಗೂ ಮಕ್ಕಳಲ್ಲಿ ಇದರ ದುಷ್ಪರಿಣಾಮ ಹೆಚ್ಚು ಎನ್ನುತ್ತಾರೆ ಸಂಶೋಧಕರು.
4. ಇನ್ನು, ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಿದಂತೆ ಜನ ತಮಗೆ ಅರಿವಿಲ್ಲದಂತೆ ವಾಸ್ತವದಿಂದ ದೂರ ಸರಿದು, ಯಾರದೋ ಯೋಜನೆಯ ಕೈಗೊಂಬೆಗಳಾಗುತ್ತಾರೆ.
5. ಮೊಬೈಲ್‍ನಿಂದ ಹೊರಸೂಸುವ ವಿಕಿರಣ ಅಪಾಯಕಾರಿಯಾಗಿದ್ದು, ಕಣ್ಣಿನ ದೃಷ್ಟಿಗೆ ಹಾನಿಯನ್ನು ಉಂಟು ಮಾಡುತ್ತದೆ. ಮೊಬೈಲ್‍ನ ದೀರ್ಘಕಾಲದ ಬಳಕೆಯಿಂದ ಮೆದುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಶೇ.30ರಷ್ಟು ಹಾಗೂ ಕಿವುಡುತನ ಬರುವ ಸಾಧ್ಯತೆ ಶೇ.20ರಷ್ಟು ಹೆಚ್ಚಾಗಲಿದೆ. ಜೊತೆಗೆ, ಬೆನ್ನು ನೋವು, ಕುತ್ತಿಗೆ ನೋವು, ಮಣಿಗಂಟಿನ ನೋವಿಗೆ ಮೊಬೈಲ್ ಬಳಕೆ ಮೂಲವಾಗಲಿದೆ. ಬೆರಳುಗಳಿಗೆ ಘಾಸಿ ಉಂಟಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
6. ಮೊಬೈಲ್ ಚಟಕ್ಕೆ ಒಳಗಾದ ವ್ಯಕ್ತಿಯಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಆತನಲ್ಲಿ ಭಾವನೆಗಳು ತೀವ್ರಗೊಳ್ಳುತ್ತವೆ. ಆತಂಕ, ಮಾನಸಿಕ ದುಗುಡ ಹೆಚ್ಚುತ್ತಾ ಹೋಗುತ್ತದೆ. ನಂತರದ ದಿನಗಳಲ್ಲಿ ಆತನಲ್ಲಿ ದೇಹಾಲಸ್ಯ, ಆಯಾಸ, ಬೊಜ್ಜು, ಅಸಹನೆ ಹಾಗೂ ನಿದ್ರಾಹೀನತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕೂಡ ಕುಂಠಿತವಾಗಲಿದೆ. ಅಲ್ಲದೆ, ಮೊಬೈಲ್ ಗೀಳು ನಮ್ಮನ್ನು ಬೇಗನೆ ವೃದ್ಧಾಪ್ಯದತ್ತ ತಳ್ಳುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.
7. 2 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬಳಕೆ ಯಾವುದೇ ಶೈಕ್ಷಣಿಕ ಅನುಕೂಲ ಕಲ್ಪಿಸುವುದಿಲ್ಲ. ಇದಕ್ಕಿಂತ ಹೊರಾಂಗಣ ದೈಹಿಕ ಚಟುವಟಿಕೆಗಳೆ ಹೆಚ್ಚು ಆರೋಗ್ಯಕಾರಿ ಎನ್ನುತ್ತಾರೆ ಸಂಶೋಧಕರು.
8. ಇನ್ನು, ಮೊಬೈಲ್‍ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವುದು ಅಪಘಾತಕ್ಕೆ ಆಹ್ವಾನ ನೀಡಿದಂತೆ ಎಂಬುದಂತೂ ಎಲ್ಲರಿಗೂ ಗೊತ್ತಿರುವ ವಿಚಾರ.
9. ಅಲ್ಲದೆ, ತಮ್ಮ ಬಗ್ಗೆ ಅಷ್ಟೇನೂ ಯೋಗ್ಯ ಭಾವನೆ ಬೆಳೆಸಿಕೊಳ್ಳದ, ತಮ್ಮ ಸಾಮಥ್ರ್ಯದ ಬಗ್ಗೆ ವಿಶ್ವಾಸವಿಲ್ಲದ ವ್ಯಕ್ತಿಗಳು ನೈಜ ಜಗತ್ತಿಗಿಂತಲೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಭಾವನೆಗಳನ್ನು ಪ್ರಕಟಿಸುವುದು ಹೆಚ್ಚು ಎನ್ನುವ ಸಂಗತಿ ಸಂಶೋಧನೆಗಳಿಂದ ಬಯಲಾಗಿದೆ.
ಹಾಗಂತ, ನಾವು ಸ್ಮಾರ್ಟ್‍ಫೋನ್ ಬಳಕೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಇಂದಿನ ದಿನಗಳಲ್ಲಿ ಸ್ಮಾರ್ಟ್‍ಫೋನ್ ಬಳಕೆ ಅನಿವಾರ್ಯ ಎನ್ನುವುದು ಒಪ್ಪತಕ್ಕಂತಹ ಮಾತೆ. ಆದರೆ, ಅದರ ಬಳಕೆಯನ್ನು ಮಿತವಾಗಿ ಇಟ್ಟುಕೊಳ್ಳಬೇಕು. ಮೊಬೈಲ್ ಚಟಕ್ಕೆ ಬಲಿಯಾಗದೆ, ಧ್ಯಾನ, ಸಂಗೀತ, ಓದು, ಕಲೆ ಮತ್ತು ಇನ್ನಿತರ ಕೆಲ ಆರೋಗ್ಯಕರ ಹವ್ಯಾಸಗಳಿಂದ ಮಾನಸಿಕವಾಗಿ ಉಲ್ಲಸಿತರಾಗಿರಲು ಸಾಧ್ಯ ಎಂಬ ಅರಿವು ನಮಗಿರಬೇಕು.
1. ಹೀಗಾಗಿ, ನಿದ್ದೆ ಮಾಡುವಾಗ, ಮೊಬೈಲ್‍ನ್ನು ಚಾರ್ಜ್ ಮಾಡುವಾಗ, ಮೊಬೈಲ್ ನಮ್ಮಿಂದ ಆದಷ್ಟು ದೂರವಿರುವಂತೆ ನೋಡಿಕೊಳ್ಳುವುದು ಒಳ್ಳೆಯದು.
2. ಮೊಬೈಲ್‍ನಲ್ಲಿ ಹೆಚ್ಚು ಮಾತನಾಡುವಾಗ ಉತ್ತಮವಾದ ಈಯರ್‍ಫೋನ್ ಬಳಸಿ. ದೇಹದಿಂದ ಮೊಬೈಲ್ ದೂರವಿರುವಂತೆ ನೋಡಿಕೊಳ್ಳಿ.
3. ಇನ್ನು, ನೆಟ್‍ವರ್ಕ್ ಸರಿಯಾಗಿ ಸಿಗದಿದ್ದಾಗ ಮೊಬೈಲ್ ವಿಕಿರಣವನ್ನು ಹೆಚ್ಚು ಹೊರಸೂಸುತ್ತದೆ. ಹಾಗಾಗಿ, ನೆಟ್‍ವರ್ಕ್ ಇರುವ ಕಡೆಯೇ ಮೊಬೈಲನ್ನು ಹೆಚ್ಚಾಗಿ ಬಳಸಿ.
4. ಕಾರುಗಳಲ್ಲಿ ಪ್ರಯಾಣಿಸುವಾಗ ಕಾರಿನ ಬಾಗಿಲನ್ನು ತೆಗೆದುಕೊಂಡು ಮಾತನಾಡಿ. ಮನೆಯ ಒಳಗೆ ಮಾತನಾಡುವಾಗ ಕಿಟಕಿ, ಬಾಗಿಲುಗಳು ತೆರೆದಿರಲಿ.
5. ಜೇಬಿನಲ್ಲಿದ್ದಾಗ ಮೊಬೈಲ್‍ನಿಂದ ಹೊರಸೂಸುವ ರೇಡಿಯೇಷನ್, ದೇಹದ ಮೇಲೆ 7 ಪಟ್ಟು ಹೆಚ್ಚಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದು ಡಿಎನ್‍ಎ ಸಂರಚನೆಯಲ್ಲಿ ವ್ಯತ್ಯಯ ಉಂಟಾಗಲು ಕಾರಣವಾಗಲಿದೆ. ಇದರಿಂದಾಗಿ ದೇಹದ ವಿವಿಧ ಭಾಗಗಳಲ್ಲಿ ಗಡ್ಡೆ ಬೆಳೆಯುವುದು, ಸಂತಾನೋತ್ಪತ್ತಿ ಸಾಮಥ್ರ್ಯ ಕಡಿಮೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಮೊಬೈಲ್‍ನ್ನು ಆದಷ್ಟು ಬ್ಯಾಗ್‍ನಲ್ಲಿಯೇ ಇಡಿ.
6. ಇನ್ನು, ಅಗತ್ಯವಿದ್ದಾಗ ಮಾತ್ರ ಬ್ಲೂಟೂತ್ ಬಳಸಿ. ಮನೆಯಲ್ಲಿ ವೈರ್‍ಲೆಸ್ ರೂಟರ್ ಹಾಕಿದ್ದರೆ, ಮಲಗುವ ಕೋಣೆಯಲ್ಲಿ ಅದನ್ನು ಹಾಕಬೇಡಿ. ಕಡಿಮೆ ಬಳಕೆ ಮಾಡುವ ಕೋಣೆಯಲ್ಲಿ ಅದನ್ನು ಇಡಿ.
7. ಶೌಚಾಲಯಕ್ಕೆ ಹೋಗುವಾಗ ಮೊಬೈಲ್ ಬಳಸಲೇಬೇಡಿ. ಇದು ಮೂತ್ರಜನಕಾಂಗ ಹಾಗೂ ಗುದದ್ವಾರದ ಸೋಂಕುಗಳಿಗೆ ಕಾರಣವಾಗಬಹುದು. ಮೂಲವ್ಯಾಧಿಯಂತಹ ರೋಗಗಳಿಗೆ ಹಾದಿ ಮಾಡಿಕೊಡಬಹುದು.
8. ಅಲ್ಲದೆ, 14 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರು ಮೊಬೈಲ್ ಬಳಕೆಯನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು.
ಅಧಿಕವಾದರೆ ಅಮೃತವೂ ವಿಷ ಎನ್ನುವ ಹಾಗೆ, ವಿಪರೀತವಾದ ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿಕರ ಎಂಬ ಅರಿವು ನಮಗಿರಬೇಕು. ಅಗತ್ಯಕ್ಕೆ ತಕ್ಕಷ್ಟೇ ಮೊಬೈಲ್ ಬಳಸಿ, ಈ ತಂತ್ರಜ್ಞಾನದ ಸದುಪಯೋಗಪಡಿಸಿಕೊಳ್ಳುವುದು ಒಳ್ಳೆಯದು.
https://www.youtube.com/watch?v=3Gnr6tAdi_Y