ಅದು 2020, ಭಾರತ ಮಾತ್ರವಲ್ಲ, ಇಡೀ ವಿಶ್ವ ಕೋವಿಡ್ ಎಂಬ ಹೆಮ್ಮಾರಿಯ ಹೊಡೆತಕ್ಕೆ ಸಿಕ್ಕಿ ನಲುಗಿ ಹೋಗಿತ್ತು. ಎಲ್ಲಿ ಕೇಳಿದರಲ್ಲಿ ಲಾಕ್‍ಡೌನ್. ವ್ಯಾಪಾರ, ವಹಿವಾಟುಗಳು ಬಂದ್. ಜನಸಾಮಾನ್ಯರ ನಿತ್ಯದ ಓಡಾಟಕ್ಕೂ ಬ್ರೇಕ್ ಬಿದ್ದಿತ್ತು. ಇದರಿಂದಾಗಿ ದೇಶಾದ್ಯಂತ ಕೋಟ್ಯಂತರ ಮಂದಿ ತಮ್ಮ ಉದ್ಯೋಗ ಕಳೆದುಕೊಳ್ಳಬೇಕಾಯಿತು. ಕೆಲವರು ತುತ್ತು ಅನ್ನಕ್ಕೂ ಪರದಾಡಿದರು. ಆದರೆ, ಹಲವು ಶ್ರೀಮಂತರ ಸಂಪತ್ತು ಈ ವಿಷಮ ಪರಿಸ್ಥಿತಿಯಲ್ಲಿಯೂ ವೃದ್ಧಿಯಾಗಿದೆ ಎಂಬುದು ವಾಸ್ತವ ಸಂಗತಿ. ಇದರಿಂದಾಗಿ ದೇಶದಲ್ಲಿ ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ ಎನ್ನುತ್ತದೆ "ಆಕ್ಸ್‍ಫಾಮ್' ಸಂಸ್ಥೆ ಸಿದ್ಧಪಡಿಸಿದ "ದಿ ಇನ್ ಇಕ್ವಾಲಿಟಿ ವೈರಸ್' ಎಂಬ ವರದಿ.
ಕೋಟ್ಯಂತರ ಮಂದಿಯ ಉದ್ಯೋಗ ನಷ್ಟ:
ಭಾರತದಲ್ಲಿ ಮೊದಲ ಬಾರಿಗೆ 2020ರ ಮಾರ್ಚ್ 25ರಿಂದ 21 ದಿನಗಳ ಕಾಲ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಯಿತು. ನಂತರ, ಮೇ 31ರ ವರೆಗೂ ಹಂತ, ಹಂತವಾಗಿ ಲಾಕ್‍ಡೌನ್ ವಿಸ್ತರಣೆಯಾಯಿತು. ಇದರಿಂದಾಗಿ ಕೋಟ್ಯಂತರ ಮಂದಿ ನಿರುದ್ಯೋಗಿಗಳಾದರು. 2020ರ ಏಪ್ರಿಲ್‍ನಲ್ಲಿ ದೇಶದಲ್ಲಿ ಪ್ರತಿ ಗಂಟೆಗೆ 1 ಲಕ್ಷ 70 ಸಾವಿರ ಮಂದಿ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರು. ಬಡತನ ರೇಖೆಗಿಂತ ಸ್ವಲ್ಪ ಮೇಲೆ ಇದ್ದ ಸುಮಾರು 40 ಕೋಟಿ ಮಂದಿ ಕೆಲವು ತಿಂಗಳ ಮಟ್ಟಿಗಾದರೂ ಬಡತನರೇಖೆಗಿಂತ ಕೆಳಗೆ ಬಂದಿದ್ದರು. ಏಪ್ರಿಲ್ ತಿಂಗಳೊಂದರಲ್ಲಿಯೇ ದೇಶದಲ್ಲಿ ಸುಮಾರು 12.2 ಕೋಟಿ ಉದ್ಯೋಗ ನಷ್ಟವಾಗಿದೆ. ನಿರುದ್ಯೋಗ ಪ್ರಮಾಣ ಶೇ.27.1ಕ್ಕೆ ಏರಿಕೆಯಾಗಿದೆ ಎನ್ನುತ್ತದೆ ಭಾರತೀಯ ಆರ್ಥಿಕ ನಿಗಾ ಸಂಸ್ಥೆ, ಸಿಎಂಐಇ ವರದಿ.
ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ, ಐಎಲ್‍ಒ ಹಾಗೂ ಏಷ್ಯಾ ಅಭಿವೃದ್ಧಿ ಬ್ಯಾಂಕ್, ಎಬಿಡಿ ವರದಿಯನ್ವಯ ದೇಶದಲ್ಲಿ 18-24 ವರ್ಷ ವಯೋಮಾನದ ಯುವಜನರಲ್ಲಿ ಶೇ. 23.1ರಷ್ಟು ಮಂದಿ ಕೆಲಸ ಕಳೆದುಕೊಂಡರು. ಉದ್ಯೋಗ ಕಳೆದುಕೊಂಡ ಪ್ರತಿ 10 ಜನರಲ್ಲಿ ನಾಲ್ವರನ್ನು ಶಾಶ್ವತವಾಗಿ ಕೆಲಸದಿಂದ ತೆಗೆದು ಹಾಕಲಾಯಿತು. ಪ್ರತಿ ಹತ್ತರಲ್ಲಿ 6 ಮಂದಿಯನ್ನು ವೇತನರಹಿತ ದೀರ್ಘ ರಜೆಯ ಮೇಲೆ ಕಳುಹಿಸಲಾಯಿತು. ಈ ಅವಧಿಯಲ್ಲಿ ಅವರಿಗೆ ಬೇರೆ ಕೆಲಸ ಸಿಕ್ಕಿಲ್ಲ. ಹೀಗಾಗಿ, ಇವರೆಲ್ಲರ ಭವಿಷ್ಯ ಅತಂತ್ರವಾಯಿತು.
ಕೃಷಿ ಮಾರುಕಟ್ಟೆಗಳಲ್ಲಿನ ಹಮಾಲರು, ದಿನಗೂಲಿ ಕಾರ್ಮಿಕರು, ಸಣ್ಣ ಉದ್ದಿಮೆಗಳಲ್ಲಿ ಕೆಲಸ ಮಾಡುವ ನೌಕರರು, ಶಿಕ್ಷಕರು, ಪತ್ರಕರ್ತರು, ಆಟೋಮೊಬೈಲ್, ಹೋಟೆಲ್, ರಿಯಲ್ ಎಸ್ಟೇಟ್, ಪ್ರವಾಸೋದ್ಯಮ ಸೇರಿದಂತೆ ವಿವಿಧ ವಲಯಗಳಲ್ಲಿನ ಜನರಿಗೆ ಲಾಕ್‍ಡೌನ್‍ನಿಂದ ಹೊಡೆತ ಬಿತ್ತು. ಸಮಾಜದ ಅತ್ಯಂತ ದುರ್ಬಲ ವರ್ಗದ ಜನ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾದರು.
ಸಣ್ಣ ಉದ್ದಿಮೆಗಳು ನೆಲಕಚ್ಚಿದವು. ದೊಡ್ಡ, ದೊಡ್ಡ ಕಂಪನಿಗಳು, ಬಹುರಾಷ್ಟ್ರೀಯ ಕಂಪನಿಗಳು "ಕಾಸ್ಟ್ ಕಟಿಂಗ್' ಹೆಸರಲ್ಲಿ ಉದ್ಯೋಗಿಗಳನ್ನು ಮನೆಗೆ ಕಳಿಸಿದರು. ಇದರಿಂದಾಗಿ ಉದ್ಯೋಗಗಳ ಸಂಖ್ಯೆ 8.2 ಕೋಟಿಯಿಂದ 6.5 ಕೋಟಿಗೆ ಇಳಿಯಿತು. ಹಲವೆಡೆ ಉದ್ಯೋಗಿಗಳ ಸಂಬಳದಲ್ಲಿ ಕಡಿತ ಮಾಡಲಾಯಿತು.
2020ರಲ್ಲಿ ದೇಶಾದ್ಯಂತ 10,113 ಕಂಪನಿಗಳು ಸ್ವಯಂಪ್ರೇರಿತವಾಗಿ ಮುಚ್ಚಿವೆ ಎನ್ನುವುದನ್ನು ಸ್ವತ: ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಸಮಿತಿ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ. ಈ ಪೈಕಿ, ದೆಹಲಿಯಲ್ಲಿ ಅತಿ ಹೆಚ್ಚು ಅಂದರೆ, 2,394 ಕಂಪನಿಗಳು ಬಾಗಿಲು ಮುಚ್ಚಿದರೆ, ಬಿಹಾರದಲ್ಲಿ ಅತಿ ಕಡಿಮೆ, ಅಂದರೆ, 107 ಕಂಪನಿಗಳು ಬಾಗಿಲು ಮುಚ್ಚಿವೆ. ಕರ್ನಾಟಕದಲ್ಲಿ 836 ಕಂಪನಿಗಳು ಬಂದ್ ಆಗಿವೆ.
ಹಲವರ ಸಂಪತ್ತು ಏರಿಕೆ:
ಆದರೆ, ಇಂತಹ ಮಾನವೀಯ ದುರಂತದ ನಡುವೆಯೂ ಹಲವರ ಸಂಪತ್ತು ಏರಿದೆ. 2020ರಲ್ಲಿ ಭಾರತದ 40 ಮಂದಿ ಉದ್ಯಮಿಗಳು ಬಿಲಿಯನೆರ್‍ಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಲಾಕ್‍ಡೌನ್‍ನ ಮೊದಲ ಕೆಲ ತಿಂಗಳಲ್ಲಿ ಉದ್ಯಮಿಗಳ ಆದಾಯಕ್ಕೆ ಕುತ್ತು ಬಂದರೂ, ಕೆಲವೇ ದಿನಗಳಲ್ಲಿ ಇವರು ಚೇತರಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ ಇವರ ಸಂಪತ್ತು ಶೇ.35ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ.
2020ರ ಮಾರ್ಚ್‍ನಿಂದ ಡಿಸೆಂಬರ್ ಅಂತ್ಯದ ಅವಧಿಯಲ್ಲಿ ದೇಶದ ಪ್ರಮುಖ 100 ಬಿಲಿಯನೆರ್‍ಗಳ ಒಟ್ಟಾರೆ ಆದಾಯವು 12 ಲಕ್ಷ, 97 ಸಾವಿರದ 822 ಕೋಟಿ ರೂ.ಯಷ್ಟು ಏರಿಕೆಯಾಗಿದೆ ಎನ್ನುತ್ತದೆ "ಆಕ್ಸ್‍ಫಾಮ್'ನ ವರದಿ.
ಅದಾನಿ ಗ್ರೂಪ್‍ನ ಸಂಸ್ಥಾಪಕ ಗೌತಮ್ ಅದಾನಿ, ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ, ಎಚ್‍ಸಿಎಲ್ ಟೆಕ್ನಾಲಜಿಸ್‍ನ ಶಿವ ನಾಡಾರ್, ಪೂನಾವಾಲಾ ಗ್ರೂಪ್‍ನ ಅಧ್ಯಕ್ಷ, ಸೈರಸ್ ಪೂನಾವಾಲಾ, ಕೋಟಕ್ ಮಹೀಂದ್ರಾ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಉದಯ್ ಕೋಟಕ್, ವಿಪ್ರೋ ಸಂಸ್ಥೆಗಳ ಒಕ್ಕೂಟದ ಮುಖ್ಯಸ್ಥ ಅಜೀಂ ಪ್ರೇಮ್‍ಜಿ, ಭಾರ್ತಿ ಎಂಟರ್‍ಪ್ರೈಸಸ್‍ನ ಸಂಸ್ಥಾಪಕ ಸುನಿಲ್ ಮಿತ್ತಲ್, ಡಿ ಮಾರ್ಟ್‍ನ ಸಂಸ್ಥಾಪಕ ರಾಧಾಕೃಷ್ಣನ್ ದಮಾನಿ, ಆದಿತ್ಯ ಬಿರ್ಲಾ ಸಂಸ್ಥೆಗಳ ಮುಖ್ಯಸ್ಥ ಕುಮಾರ ಮಂಗಲಂ ಬಿರ್ಲಾ ಹಾಗೂ ಅರ್ಸೆಲರ್ ಮಿತ್ತಲ್‍ನ ಅಧ್ಯಕ್ಷ ಲಕ್ಷ್ಮೀ ಮಿತ್ತಲ್ ಅವರ ಸಂಪತ್ತು 2020ರ ಮಾರ್ಚ್ ನಂತರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.
ಅದಾನಿ ನಂ.1:
2000 ದಿಂದ 2021ರಲ್ಲಿ ಈವರೆಗೆ ತಮ್ಮ ಸಂಪತ್ತನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಿಕೊಂಡ ಉದ್ಯಮಿಗಳಲ್ಲಿ ಗೌತಮ್ ಅದಾನಿ ಮೊದಲ ಸ್ಥಾನದಲ್ಲಿದ್ದಾರೆ. ಈ ಅವಧಿಯಲ್ಲಿ ಟೆಸ್ಲಾ ಸಿಇಒ ಇಲಾನ್ ಮಸ್ಕ್, ಅಮೆಜಾನ್ ಸಿಇಒ ಜೆಫ್ ಬೆಜೋಸ್ ಅವರನ್ನೂ ಮೀರಿಸಿರುವ ಅದಾನಿ, ತಮ್ಮ ಸಂಪತ್ತನ್ನು ಬರೋಬ್ಬರಿ 1 ಲಕ್ಷ 18 ಸಾವಿರ ಕೋಟಿ ರೂ.ಯಷ್ಟು ಹೆಚ್ಚಿಸಿಕೊಂಡಿದ್ದಾರೆ. 2016ರ ವರೆಗೂ ಅದಾನಿ ಅವರ ಆಸ್ತಿಯ ಮೌಲ್ಯ ಸುಮಾರು 25 ಸಾವಿರ ಕೋಟಿ ರೂ.ಇತ್ತು. ಅಲ್ಲಿಂದ ಪ್ರತಿವರ್ಷ ಅವರ ಆದಾಯ ಏರುತ್ತಲೆ ಇದೆ. 2020ರಲ್ಲಿ ಅವರ ಸಂಪತ್ತು ಶೇ.50ರಷ್ಟು ಏರಿಕೆಯಾಗಿ 12 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ.
ಇನ್ನು ಮುಕೇಶ್ ಅಂಬಾನಿ ಈ ಅವಧಿಯಲ್ಲಿ ಪ್ರತಿ ಗಂಟೆಗೆ ಗಳಿಸಿದ ಆದಾಯ 90 ಕೋಟಿ ರೂ.ಗಳು. ಅವರ ಪ್ರತಿ ಒಂದು ಗಂಟೆಯ ಗಳಿಕೆ, ಕೌಶಲ್ಯರಹಿತ ಕಾರ್ಮಿಕನೊಬ್ಬನ 10 ಸಾವಿರ ವರ್ಷಗಳ ಗಳಿಕೆಗೆ ಸಮ. ಹಾಗೆಯೇ ಅಂಬಾನಿಯವರ ಪ್ರತಿ ಸೆಕೆಂಡ್‍ನ ಗಳಿಕೆ ಕೌಶಲ್ಯರಹಿತ ಕಾರ್ಮಿಕನೊಬ್ಬನ ಮೂರು ವರ್ಷಗಳ ಗಳಿಕೆಗೆ ಸಮ ಎನ್ನುತ್ತದೆ "ಆಕ್ಸ್‍ಫಾಮ್' ವರದಿ.
ದೇಶದ ಪ್ರಮುಖ 11 ಮಂದಿ ಬಿಲಿಯನೆರ್‍ಗಳು ಕೋವಿಡ್ ಅವಧಿಯಲ್ಲಿ ಗಳಿಸಿರುವ ಗಳಿಕೆಯ ಮೇಲೆ ಶೇ.1ರಷ್ಟು ತೆರಿಗೆ ವಿಧಿಸಿದರೆ, ಆ ಮೊತ್ತದಿಂದ ಸರ್ಕಾರ ಜನೌಷಧ ಯೋಜನೆಗೆ ಮಾಡುವ ವೆಚ್ಚವನ್ನು 140 ಪಟ್ಟು ಹೆಚ್ಚಿಸಬಹುದು. ಅಥವಾ, ಈ ಮೊತ್ತ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು 10 ವರ್ಷಗಳ ಕಾಲ ನಡೆಸಲು ಅಥವಾ ಆರೋಗ್ಯ ಸಚಿವಾಲಯದ ವಿವಿಧ ಯೋಜನೆಗಳನ್ನು 10 ವರ್ಷಗಳ ಕಾಲ ನಡೆಸಲು ಸಾಕಾಗುತ್ತದೆ.
ಭಾರತಕ್ಕೆ ಮಾತ್ರ ಸೀಮಿತವಲ್ಲ:
ಹಾಗೆ ನೋಡಿದರೆ, ಈ ಅಸಮಾನತೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಕೋವಿಡ್ ಅವಧಿಯಲ್ಲಿ ಹೊಸ ಬಿಲಿಯನೆರ್‍ಗಳು ಹುಟ್ಟಿಕೊಂಡಿದ್ದಾರೆ. ವಿಶೇಷವಾಗಿ ಆರೋಗ್ಯ ಸೇವೆ, ಔಷಧ ತಯಾರಿಕೆ, ಐಟಿ ಕ್ಷೇತ್ರಗಳಲ್ಲಿ ಇರುವವರು ತಮ್ಮ ಗಳಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇದಕ್ಕೆ ಅಲ್ಲವೆ, ಹಿರಿಯರು ಹೇಳಿರುವುದು. ಅವರವರ ಹಣೆಬರಹ ಅವರವರಿಗೆ ಎಂದು.